ಚನ್ನಗಿರಿ: ಅರಣ್ಯದಲ್ಲಿ ಸ್ವತಂತ್ರವಾಗಿ ಜೀವಿಸುವಂತೆ ಮಾಡಲು ಪೀಪಲ್ ಫಾರ್ ಎಥಿಕಲ್ ಟ್ರೀಟ್ವೆುಂಟ್ ಆಫ್ ಅನಿಮಲ್ಸ್ ಇಂಡಿಯಾ ಹಾಗೂ ಕಂಪ್ಯಾಷನ್ ಆನ್ ಲಿಮಿಟೆಡ್ ಆಕ್ಷನ್ ಸಂಸ್ಥೆಗಳು ಯಾಂತ್ರಿಕ ಅನೆಯನ್ನು ದೇಶದಾದ್ಯಂತ ಪರಿಚಯ ಮಾಡುತ್ತಿದೆ. ಮುಂದಿನ ದಿನದಲ್ಲಿ ಸಿರಿಗೆರೆ ತರಳಬಾಳು ಶ್ರೀ ಮಠಕ್ಕೆ ಆನೆ ನೀಡುವ ಯೋಜನೆಯನ್ನು ಸಂಸ್ಥೆಯವರು ನಡೆಸಿದ್ದಾರೆ ಎಂದು ಶಾಸಕ ಶಿವಗಂಗಾ ಬಸವರಾಜ್ ಹೇಳಿದರು.

ತಾಲೂಕು ತಾವರೆಕೆರೆ ಶಿಲಾಮಠದಲ್ಲಿ ಭಾನುವಾರ ಶ್ರೀ ಉಮಾ ಮಹೇಶ್ವರ ನಾಮಾಂಕಿತ ಜಿಲ್ಲೆಯ ಮೊದಲ ರೋಬಾಟಿಕ್ ಆನೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಜೀವಂತ ಆನೆಯನ್ನು ಸೆರೆಹಿಡಿಯುವ ಸಲುವಾಗಿ ಅರಣ್ಯ ಇಲಾಖೆ, ಆನೆ ತಜ್ಞರು ಸೇರಿ ಅನೇಕ ಆಯುಧಗಳನ್ನು ಬಳಸಿಕೊಂಡು ಆನೆಯನ್ನು ಸೆರೆಹಿಡಿದು ಆನೆ ಬಿಡಾರಗಳಲ್ಲಿ ತರಬೇತಿ ನೀಡಿ ಮಠ- ಮಂದಿರಗಳಿಗೆ ನೀಡಲಾಗುತ್ತಿತ್ತು. ಈಗ ಆನೆಗಳ ರಕ್ಷಣೆ ದೃಷ್ಟಿಯಿಂದ ಅವುಗಳನ್ನು ಮರಳಿ ಪಡೆಯುತ್ತಿದೆ ಎಂದರು.
ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಆಗಬೇಕಿದೆ. ಅರಣ್ಯದಲ್ಲಿರುವ ಪ್ರಾಣಿಗಳನ್ನು ಮನುಷ್ಯ ತನ್ನ ಬುದ್ಧಿವಂತಿಕೆಯಿಂದ ನಾಡಿಗೆ ತಂದು ತರಬೇತಿ ನೀಡಿ ಧಾರ್ವಿುಕ ಕಾರ್ಯ, ಮದುವೆ, ದೇವರ ಕಾರ್ಯಗಳಿಗೆ ಮತ್ತು ಮೆರವಣಿಗೆಯಲ್ಲಿ ಬಳಸಿಕೊಳ್ಳುತ್ತಿದ್ದಾನೆ. ಹಾಗಾಗಿ ಫೆಟಾ ಮತ್ತು ಕುಫಾ ಇಂಡಿಯಾ ಕಂಪನಿಯವರು ಎಲೆಕ್ಟ್ರಿಕ್ ಆನೆಯನ್ನು ತಯಾರಿಸಿ ಮಠ- ಮಂದಿರಗಳಿಗೆ ನೀಡುತ್ತಿದ್ದಾರೆ. ಜೀವಂತ ಆನೆಗಳ ಬಳಕೆ ನಿಲ್ಲಿಸಬೇಕು. ಅವುಗಳ ರಕ್ಷಣೆ, ಸ್ವಾತಂತ್ರ್ಯ್ಕೆ ಧಕ್ಕೆಯಾಗಬಾರದು. ಅಲ್ಲದೇ ಮುಂದಿನ ಪೀಳಿಗೆಗಾಗಿ ಕಾಡುಪ್ರಾಣಿಗಳನ್ನು ಉಳಿಸಬೇಕಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ್ ಸರ್ಜಿ ಮಾತನಾಡಿ, ಅರಣ್ಯದಲ್ಲಿ ನೀರು, ಆಹಾರ ಕಡಿಮೆಯಾಗಿರುವುದರಿಂದ ವನ್ಯಜೀವಿಗಳು ನಾಡಿಗೆ ಬರುತ್ತಿವೆ. ಅದನ್ನು ತಪ್ಪಿಸಲು ಅವುಗಳಿಗೆ ಬೇಕಾದ ನೀರಿನ ವ್ಯವಸ್ಥೆಯನ್ನು ಮಾಡಬೇಕು ಮತ್ತು ಅರಣ್ಯ ಒತ್ತುವರಿಯಲ್ಲಿ ನಿಲ್ಲಿಸಬೇಕು. ಜತೆಗೆ ಒಂದು ಎಕರೆ ಪ್ರದೇಶದಲ್ಲಿ ಮರಗಳನ್ನು ಬೆಳೆಸಿದರೆ ಅವುಗಳಿಂದ 100 ಜನರಿಗೆ ಆಕ್ಸಿಜನ್ ಸಿಗಲಿದೆ ಎಂದು ಸೂಚಿಸಿದರು.
ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಮಾತನಾಡಿ, ಕಾಡಿನ ಪ್ರಾಣಿಗಳಿಗೆ ಸ್ವತಂತ್ರವಾಗಿ ಅದರ ಸಂತತಿಯ ಜತೆ ಬದುಕಲು ಅವಕಾಶ ನೀಡಬೇಕು ಎಂದರು.
ತಾವರೆಕೆರೆ, ಬಾಳೆಹೊನ್ನೂರು ಎಡೆಯೂರು ಕ್ಷೇತ್ರ ಶ್ರೀರೇಣುಕಾ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮುಂದಿನ ದಿನದಲ್ಲಿ ಮಠದ ಎಲೆಕ್ಟ್ರಿಕ್ ಆನೆಯನ್ನು ಎಲ್ಲ ಧಾರ್ವಿುಕ ಸಮಾರಂಭಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತದೆ. ತಾಲೂಕು ಮತ್ತು ಇತರೆ ಕಡೆಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಕಳುಹಿಸಿಕೊಡುವ ಆಲೋಚನೆ ಇದೆ ಎಂದು ನುಡಿದರು.
ಶ್ರೀಮಠದಿಂದ ಗ್ರಾಮದ ಪ್ರಮುಖ ಬೀದಿಯಲ್ಲಿ ರೋಬಾಟಿಕ್ ಆನೆಯ ಮೆರವಣಿಗೆ ಮಾಡಲಾಯಿತು.
ಮರವಂಜಿ ತಿಪ್ಪೇಸ್ವಾಮಿ ಗೌಡ್ರು, ಚನ್ನಗಿರಿ ವಲಯ ಅರಣ್ಯಾಧಿಕಾರಿ ಶ್ವೇತಾ, ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.
