ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದಂತೆ ಇದೆ: ಡಿಸಿಎಂ ಪರಮೇಶ್ವರ್ ಟೀಕೆ

ಬೆಂಗಳೂರು: ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಅಧ್ಯಕ್ಷರು ಹೇಳಿ ಮಾಡಿಸಿದಂತೆ ಇದೆ. ದೇಶದಲ್ಲಿ ವಸ್ತು ಸ್ಥಿತಿಯೇ ಬೇರೆ ಇದೆ. 300 ಸ್ಥಾನ ಬರುತ್ತೆಂದು ಬಿಜೆಪಿ ಸಮಾಧಾನ ಪಟ್ಟುಕೊಳ್ಳುತ್ತಿದ್ದು, ಫಲಿತಾಂಶ ಬಂದ ಬಳಿಕ ಚಿತ್ರಣ ತಿಳಿಯಲಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನನಗೆ ಚುನಾವಣಾ ಸಮೀಕ್ಷೆಗಳ ಮೇಲೆ ವಿಶ್ವಾಸವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ 20 ಕ್ಷೇತ್ರದಲ್ಲಿ ಗೆಲ್ಲುವುದು ಖಚಿತ. ಇದು ನಮ್ಮ ಲೆಕ್ಕಾಚಾರ ಹಾಗೂ ವಾತಾವರಣ ಕೂಡಾ ಹಾಗೆಯೇ ಇದೆ. ಇಂತಹ ಸಂದರ್ಭಗಳಲ್ಲಿ 18 ಸೀಟು ಬಿಜೆಪಿಗೆ ಬರುತ್ತೆ ಎಂದು ಹೇಳುವುದರಲ್ಲಿ ಅರ್ಥ ಇಲ್ಲ ಎಂದರು.

ಈ ಬಾರಿ ಯುಪಿಎ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲೂ ಇದೇ ಚರ್ಚೆ ಮಾಡಲಾಗಿದೆ. ಅಲ್ಲಿ ಸಿಕ್ಕ ಮಾಹಿತಿ ಪ್ರಕಾರ ಯುಪಿಎ ಅಧಿಕಾರಕ್ಕೆ ಬರಲಿದೆ. ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಸಮೀಕ್ಷೆಗಳು ಕಾರ್ಯಕರ್ತರ ಉತ್ಸಾಹ ಕುಗ್ಗಿಸುತ್ತವೆ

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಸಮೀಕ್ಷೆ ನಡೆಸಿ ವರದಿಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಎಕ್ಸಿಟ್​ ಪೋಲ್​ ಈಸ್​ ನಾಟ್ ಎ ಎಕ್ಸಾಕ್ಟ್​ ಪೋಲ್. ಇದು ಕಾರ್ಯಕರ್ತರಲ್ಲಿ ಉತ್ಸಾಹ ಕುಗ್ಗಿಸುವ ಕೆಲಸವಾಗಿದೆ. ಮೋದಿ ಅಲೆ ಮಾಧ್ಯಮಗಳಲ್ಲಿ ಮಾತ್ರ ಇದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಬಿ.ಕೆ ಹರಿಪ್ರಸಾದ್ ಹೇಳಿದರು.

ಸದಾಶಿವನಗರದಲ್ಲಿ ಮಾತನಾಡಿದ ಅವರು, ಈ ಭಾರಿ ಯುಪಿಎ, ಮಹಾಘಟಬಂಧನ್ ಅಧಿಕಾರಕ್ಕೆ ಬರೋದು ಖಚಿತ. ಈಗಿನ ಸಮೀಕ್ಷೆಗಳು ಮೇ 23ರಂದು ಸುಳ್ಳಾಗಲಿವೆ. 2004ರಲ್ಲಿ ಸೋನಿಯಾ ಗಾಂಧಿ ಸೋಲುತ್ತಾರೆಂದು ಸಮೀಕ್ಷೆಗಳು ಹೇಳಿದ್ದವು. ಆದರೆ ಅವರು ಗೆದ್ದಿದ್ದರು. ಈ ಬಾರಿ ಕೂಡ ಸಮೀಕ್ಷೆಗಳು ಸುಳ್ಳಾಗುತ್ತವೆ ಎಂದು ಕಿಡಿಕಾರಿದರು.

ಪ್ರಾದೇಶಿಕ ಪಕ್ಷಗಳನ್ನ ಮುಗಿಸುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ ಎಂದ ಅವರು, ಮಾಯಾವತಿ, ಅಖಿಲೇಶ್​ ಯಾದವ್, ಮಮತಾ ಬ್ಯಾನರ್ಜಿ ಅವರನ್ನ ರಾಜಕೀಯವಾಗಿ ಮುಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *