ಪಂಚ ಕ್ಷೇತ್ರಗಳ ಉಪಸಮರ: ಮಂಡ್ಯದಲ್ಲಿ ಕಡಿಮೆ 53.93 %, ಜಮಖಂಡಿಯಲ್ಲಿ ಅಧಿಕ 81.58% ಮತದಾನ

ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯ ಉಪ ಸಮರದ ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ಪೂರ್ಣಗೊಂಡಿದೆ. ಆದರೆ, ಈ ಚುನಾವಣೆಗೆ ಮತದಾರರಿಂದ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರ, ಸಿದ್ದು ನ್ಯಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ, ಶಾಸಕ ಶ್ರೀರಾಮುಲು ಮತ್ತು ಸಚಿವ ಸಿ.ಎಸ್. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ, ಬಳ್ಳಾರಿ ಮತ್ತು ಮಂಡ್ಯಕ್ಕೆ ಇಂದು ಮತದಾನ ನಡೆಯಿತು.

ಅದರಂತೆ ರಾಮನಗರದಲ್ಲಿ 73.71 %, ಜಮಖಂಡಿಯಲ್ಲಿ 81.58 %, ಶಿವಮೊಗ್ಗದಲ್ಲಿ 61.05 %, ಬಳ್ಳಾರಿ 63.85 %, ಮಂಡ್ಯದಲ್ಲಿ 53.93 % (ಸಂಜೆ 5 ಗಂಟೆ ಹೊತ್ತಿಗೆ – ಆಯೋಗದ ಅಧಿಕೃತ ಮಾಹಿತಿ ಪ್ರಕಾರ) ಮತದಾನವಾಗಿದೆ. ಈ ಉಪ ಚುನಾವಣೆಗೆ ಮತದಾರರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಮತದಾನ ಪ್ರಮಾಣದಿಂದ ಬಹಿರಂಗಗೊಂಡಿದೆ. ಮಂಡ್ಯದಲ್ಲಿ ಅತೀ ಕಡಿಮೆ ಮತದಾನವಾಗಿದೆ. ಅಂದರೆ 53.93 % ಆಗಿದೆ. ಜಮಖಂಡಿಯಲ್ಲಿ ಅತ್ಯಂತ ಹೆಚ್ಚಿನ ಮತದಾನ ನಡೆದಿದೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಕುಟುಂಬ, ಮಧು ಬಂಗಾರಪ್ಪ ಮತ್ತು ಕುಮಾರ್​ ಬಂಗಾರಪ್ಪ, ಅಂಬರೀಷ್​, ಸಚಿವರಾದ ಪುಟ್ಟರಾಜು, ತಮ್ಮಣ್ಣ, ಸಾ.ರಾ. ಮಹೇಶ್​, ಶ್ರೀರಾಮುಲು, ಜೆ. ಶಾಂತಾ, ಆನಂದ್​ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ ಸೇರಿದಂತೆ ಹಲವು ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಮತ ಚಲಾವಣೆ ಮಾಡಿದರು. ಆದರೆ, ಹಿಂದಿನ ಚುನಾವಣೆಯಲ್ಲಿಯೂ ಮತದಾನದಿಂದ ದೂರು ಉಳಿದಿದ್ದ ನಟಿ, ಮಾಜಿ ಸಂಸದೆ ರಮ್ಯಾ ಅವರು ಈ ಬಾರಿಯೂ ಮತ ಹಾಕಲಿಲ್ಲ. ಈ ಮೂಲಕ ಸಾರ್ವಜನಿಕರ ಟೀಕೆಗೆ ಗುರಿಯಾದರು.

ಎಲ್ಲಕ್ಕಿಂತಲೂ ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಉಪ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೇ ಇರುವುದು. ಉಪ ಚುನಾವಣೆ ಎಂದರೆ ಜಿದ್ದಾಜಿದ್ದಿ ಏರ್ಪಡುವ ಕಾರಣಕ್ಕೆ ಅಲ್ಲಲ್ಲಿ ಹೊಡೆದಾಟ ಘರ್ಷಣೆಗಳು ನಡೆಯುತ್ತವೆ. ಆದರೆ, ಈ ಬಾರಿ ಅಂಥ ಯಾವುದೇ ಘಟನೆಗಳೂ ನಡೆಯಲಿಲ್ಲ. ಹೀಗಾಗಿ ಚುನಾವಣೆ ಆಯೋಗ ಅತ್ಯಂತ ಯಶಸ್ವಿಯಾಗಿ ಮತದಾನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಎಂದು ಹೇಳಲಡ್ಡಿಯಿಲ್ಲ.

ಆದರೆ, ಮತದಾನ ಪ್ರಕ್ರಿಯೆಯನ್ನು ಅತ್ಯಂತ ಗೌಪ್ಯವಾಗಿ ನಡೆಸಬೇಕು ಎಂಬುದು ನಿಯಮವಾದರೂ, ಬಳ್ಳಾರಿಯಲ್ಲಿ ಕೆಲ ಕಿಡಿಗೇಡಿಗಳು ತಾವು ಮತದಾನ ಮಾಡಿದ ದೃಶ್ಯಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಮತದಾನದ ಗೌಪ್ಯತೆ ಕಾಪಾಡುವಲ್ಲಿ ಆಯೋಗ ಸ್ವಲ್ಪ ಮಟ್ಟಿಗೆ ಎಡವಿರುವುದು ಈ ಘಟನೆಗಳ ಮೂಲಕ ಬಹಿರಂಗವಾಯಿತು.

ಇನ್ನು ಮತದಾನ ಪ್ರಮಾಣ ಕುಸಿದಿರುವುದರಿಂದ ರಾಜಕೀಯ ನಾಯಕರಲ್ಲಿ ಆತಂಕ ಮನೆ ಮಾಡಿದೆ. ನಾಯಕರ ಲೆಕ್ಕಾಚಾರಗಳು ತಲೆಕೆಳಗಾಗುವ ಮುನ್ಸೂಚನೆಯೂ ಸಿಕ್ಕಿದೆ. ಜೆಡಿಎಸ್​ನ ಭದ್ರಕೋಟೆ ಎಂದು ಭಾವಿಸುವ ರಾಮನಗರ ಮತ್ತು ಮಂಡ್ಯದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿರುವುದು ಆ ಪಕ್ಷದ ನಾಯಕರಲ್ಲಿ ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಶಿವಮೊಗ್ಗದ ವಿಚಾರದಲ್ಲಿಯೂ ಇದೇ ಆತಂಕವಿದೆ.

ಮತದಾರರ ಉತ್ತರ ಮತಯಂತ್ರಗಳಲ್ಲಿ ದಾಖಲಾಗಿದ್ದು, ನ.6ರಂದು ಅಭ್ಯರ್ಥಿಗಳ ಭವಿಷ್ಯ ಬಹಿರಂಗವಾಗಲಿದೆ.

Live Blog: ಪಂಚರಾಜ್ಯ ಚುನಾವಣೆ- ಮಧ್ಯಪ್ರದೇಶ, ಮಿಜೋರಾಂ ಮತದಾನ

ಬಿಜೆಪಿ ಅಭ್ಯರ್ಥಿಗೆ ಮತದಾನ ಮಾಡಿರುವ ವಿಡಿಯೋ ವೈರಲ್​

ಉಪಚುನಾವಣೆಗೆ ನೀರಸ ಪ್ರತಿಕ್ರಿಯೆ, ಹಲವೆಡೆ ಮತದಾನ ಬಹಿಷ್ಕಾರ

ಉಪಚುನಾವಣೆಯಲ್ಲಿ ಉತ್ಸಾಹವೇ ಇಲ್ಲ ಎಂದ ನಟ ಅಂಬರೀಷ್