Wednesday, 12th December 2018  

Vijayavani

Breaking News

ಹಿಂದು ವಿಭಜನೆ ತಂತ್ರ, ಲಿಂಗಾಯತ ಸ್ವತಂತ್ರ

Tuesday, 20.03.2018, 3:08 AM       No Comments

ಬೆಂಗಳೂರು: ರಾಜಕೀಯ ಲಾಭಕ್ಕಾಗಿ ಲಿಂಗಾಯತ ವೀರಶೈವರನ್ನು ಹಿಂದು ಧರ್ಮದಿಂದ ಪ್ರತ್ಯೇಕಗೊಳಿಸುವ ವಿಚಾರದಲ್ಲಿ ಕೊನೆಗೂ ತನ್ನ ಹಠ ಸಾಧನೆಗೆ ಹೆಜ್ಜೆ ಮುಂದಿಟ್ಟಿರುವ ರಾಜ್ಯ ಸರ್ಕಾರ, ಆ ಮೂಲಕ ಚುನಾವಣಾ ವರ್ಷದಲ್ಲಿ ವಿವಾದದ ಬೆಂಕಿಗೆ ತುಪ್ಪ ಸುರಿದಿದೆ.

ಲಿಂಗಾಯತರು ಹಾಗೂ ಬಸವ ತತ್ವ ಒಪು್ಪವ ವೀರಶೈವರಿಗೆ ಅಲ್ಪಸಂಖ್ಯಾತ ಸ್ಥಾನಮಾನದೊಂದಿಗೆ ಪ್ರತ್ಯೇಕ ಧರ್ಮಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಧಾರದೊಂದಿಗೆ ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಿಂದು ಧರ್ಮ ವಿಭಜಿಸುವ ತೀರ್ಮಾನ ಹೊರಬಿದ್ದಿದೆ. ಸಂಪುಟದ ಈ ತೀರ್ವನದಿಂದಾಗಿ ಚೆಂಡು ಕೇಂದ್ರ ಸರ್ಕಾರದ ಅಂಗಳಕ್ಕೆ ಹೋದಂತಾಗಿದೆ. ಕೇಂದ್ರ ಸರ್ಕಾರ ಯಾವ ತೀರ್ಮಾನ ಕೈಗೊಂಡರೂ ಅಥವಾ ಕೈಗೊಳ್ಳದಿದ್ದರೂ ಅದನ್ನು ಚುನಾವಣೆಯಲ್ಲಿ ಪಕ್ಷದ ಲಾಭಕ್ಕೆ ಬಳಸುವುದು ರಾಜ್ಯ ಸರ್ಕಾರದ ತಂತ್ರಗಾರಿಕೆಯಾಗಿದೆ.

ಧರ್ಮ ವಿಭಜನೆ ವಿಚಾರದಲ್ಲಿ ರಾಜ್ಯದಲ್ಲಿ ಕಳೆದ ಕೆಲವು ತಿಂಗಳಿನಿಂದ ಪರ ಹಾಗೂ ವಿರೋಧ ಅಭಿಪ್ರಾಯಗಳು ತಾರಕಕ್ಕೇರಿದ್ದವು. ಈ ವಿಚಾರವಾಗಿ ರಚನೆಯಾಗಿದ್ದ ನ್ಯಾ. ನಾಗಮೋಹನ್​ದಾಸ್ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು ಸಚಿವ ಸಂಪುಟ ಸಭೆ ಯಥಾವತ್ತಾಗಿ ಒಪ್ಪಿಕೊಳ್ಳುವುದರೊಂದಿಗೆ ಲಿಂಗಾಯತ ಹಾಗೂ ವೀರಶೈವ ಸಮುದಾಯವನ್ನು ಪ್ರತ್ಯೇಕಗೊಳಿಸುವ ನಡೆಯ ಮೂಲಕ ಮತಬುಟ್ಟಿಗೆ ಕೈ ಹಾಕಿದೆ.

ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸರಿಸುಮಾರು ನಾಲ್ಕೂವರೆ ತಾಸುಗಳ ಕಾಲ ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯದಲ್ಲಿ ಲಿಂಗಾಯತರು ಮತ್ತು ಬಸವ ತತ್ವ ಅನುಸರಿಸುವ ವೀರಶೈವರಿಗೆ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ ಕೈಗೊಂಡಿತು.

ಶೀಘ್ರ ಕೇಂದ್ರ ಸರ್ಕಾರಕ್ಕೆ ಶಿಫಾರಸು

ರಾಜ್ಯ ಸರ್ಕಾರ ಯಾವುದೇ ಕ್ಷಣದಲ್ಲಿ ಲಿಂಗಾಯತರು ಮತ್ತು ಬಸವ ತತ್ವ ಅನುಸರಿಸುವ ವೀರಶೈವರನ್ನು ಧಾರ್ವಿುಕ ಅಲ್ಪಸಂಖ್ಯಾತರೆಂದು ಘೋಷಿಸಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಕ್ಕೂ ಯಾವುದೇ ಕ್ಷಣದಲ್ಲಿ ಶಿಫಾರಸು ಮಾಡಬಹುದಾಗಿದೆ.

ಲಿಂಗಾಯತ ಹಾಗೂ ವೀರಶೈವ ಒಂದೇ ಎಂಬುದು ನಮ್ಮ ವಾದ ಆಗಿತ್ತು. ಇದೀಗ ಅದೇ ಪ್ರತಿಪಾದನೆಗೆ ಯಶಸ್ಸು ಸಿಕ್ಕಿರುವುದರಿಂದ ಸರ್ಕಾರದ ನಿರ್ಧಾರವನ್ನು ವೀರಶೈವ ಮಹಾಸಭಾ ಸ್ವಾಗತಿಸುತ್ತದೆ.

| ಈಶ್ವರ ಖಂಡ್ರೆ ವೀರಶೈವ ಮಹಾಸಭಾ ಕಾರ್ಯದರ್ಶಿ

 

ಷರತ್ತು ಅನ್ವಯ

ಸದ್ಯ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಇತರ ಅಲ್ಪಸಂಖ್ಯಾತರ ಹಕ್ಕುಗಳು ಹಾಗೂ ಸವಲತ್ತುಗಳಿಗೆ ಯಾವುದೇ ರೀತಿಯ ಬಾಧಕ ಆಗದ ಷರತ್ತಿಗೆ ಒಳಪಟ್ಟು ಲಿಂಗಾಯತರಿಗೆ ಅಲ್ಪಸಂಖ್ಯಾತರ ಮಾನ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ.

 

ಸಮಿತಿ ಶಿಫಾರಸಿಗೆ ಸಮ್ಮತಿ

ನ್ಯಾ. ನಾಗಮೋಹನ ದಾಸ್ ಸಮಿತಿ ಶಿಫಾರಸಿನ ಅನ್ವಯ ಲಿಂಗಾಯತ, ವೀರಶೈವ ಲಿಂಗಾಯತರಿಗೆ (ಬಸವ ತತ್ವ ಅನುಸರಿಸುವವರು) ಕರ್ನಾಟಕ ಅಲ್ಪಸಂಖ್ಯಾತರ ಕಾಯ್ದೆಯ ಸೆಕ್ಷನ್ 2 (ಡಿ) ಪ್ರಕಾರ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದಕ್ಕೆ ಸರ್ಕಾರ ಸಮ್ಮತಿಸಿದೆ.

 

ಎರಡು ದಿನದೊಳಗೆ ಮಠಾಧೀಶರ ಸಭೆ ಕರೆದು ರ್ಚಚಿಸಿ, ರಾಜ್ಯ ಸರ್ಕಾರದ ವಿರುದ್ಧ ಶಾಂತಿಯುತವಾಗಿ ಧರ್ಮಯುದ್ಧ ಸಾರಲಾಗುವುದು.

| ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು

 

ಲಿಂಗಾಯತರಿಗೆ ಲಾಭವೇನು?

(ಧಾರ್ವಿುಕ ಅಲ್ಪಸಂಖ್ಯಾತ ಸ್ಥಾನ ಸಿಕ್ಕಿದ ಬಳಿಕ)

# ಅಲ್ಪಸಂಖ್ಯಾತರಿಗೆ ಸಿಗುವ ವೈಯಕ್ತಿಕ ಲಾಭ ಸದ್ಯಕ್ಕಿಲ್ಲ, ಲಿಂಗಾಯತ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನದ ಲಾಭ

# ಸರ್ಕಾರಕ್ಕೆ ಯಾವುದೇ ಸೀಟು ಬಿಟ್ಟುಕೊಡಬೇಕಿಲ್ಲ

# ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ

# ಆಡಳಿತ ಮಂಡಳಿಗಳ ಕೈಗೆ ಆಡಳಿತಾತ್ಮಕ ಅಧಿಕಾರ

ಮುಂದಿನ ಸಾಧ್ಯಾಸಾಧ್ಯತೆ

# ಕೇಂದ್ರ ಒಪ್ಪಬಹುದು, ಒಪ್ಪದೇ ಇರಬಹುದು, ತಟಸ್ಥವಾಗಬಹುದು.

# ರಾಜ್ಯ ಸಂಪುಟದ ತೀರ್ವನಕ್ಕೆ ಕೇಂದ್ರ ಸಮ್ಮತಿಸಿದರೆ ಅದಕ್ಕೆ ನಾವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರಕ್ಕೆ ಬಳಸಿಕೊಳ್ಳಬಹುದು

# ಸಂಪುಟ ತೀರ್ಮಾನ ನಿರಾಕರಿಸಿದರೆ ಕೇಂದ್ರ ಸರ್ಕಾರ ಲಿಂಗಾಯತ ವಿರೋಧಿ ಎಂದು ಜನರೆದುರು ಬಿಂಬಿಸಬಹುದು.

# ಕೇಂದ್ರ ಒಪ್ಪಿದರೆ ಸಂಸತ್ತಿನಲ್ಲಿ ಮೀಸಲಾತಿ ಪ್ರಮಾಣದ ಪುನಾರಚನೆ ಆಗಬೇಕು.

# ಬಳಿಕ ಉದ್ಯೋಗ, ಶಿಕ್ಷಣ ಕ್ಷೇತ್ರ, ಸಾಮಾಜಿಕ ಸುರಕ್ಷಾ ಯೋಜನೆಗಳು ಸೇರಿದಂತೆ ಮೀಸಲಾತಿ ಅಡಿ ದಕ್ಕುವ ಎಲ್ಲ ಬಗೆಯ ಸೌಲಭ್ಯಗಳಿಗೆ ಲಿಂಗಾಯತರು ಅರ್ಹರಾಗುತ್ತಾರೆ.


ಲಿಂಗಾಯತರಿನ್ನು ಅಲ್ಪಸಂಖ್ಯಾತ, ಧರ್ಮಯುದ್ಧಕ್ಕೆ ಶ್ರೀಕಾರ

ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ ಕೊನೆಗೂ ಸಿದ್ದರಾಮಯ್ಯ ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ವೀರಶೈವ-ಲಿಂಗಾಯತರನ್ನು ವಿಭಜಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ. ನ್ಯಾ.ನಾಗಮೋಹನ್​ದಾಸ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ಶಿಫಾರಸುಗಳನ್ನು ಸೋಮವಾರದ ಸಂಪುಟ ಸಭೆಯಲ್ಲಿ ಯಥಾವತ್ ಅಂಗೀಕರಿಸಿರುವ ಸರ್ಕಾರ ಲಿಂಗಾಯತರಿಗೆ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ನಿರ್ಧರಿಸಿದ್ದು, ಕೇಂದ್ರ ಸರ್ಕಾರಕ್ಕೂ ಶಿಫಾರಸು ಮಾಡಲು ಸಂಪುಟ ತೀರ್ವನಿಸಿದೆ. ಇದನ್ನು ಸ್ವಾಗತಿಸಿ ಕೆಲವರು ಸಂಭ್ರಮಾಚರಣೆ ನಡೆಸಿದ್ದರೆ, ಮತ್ತೆ ಕೆಲವರು ಆಕ್ಷೇಪಿಸಿರುವುದರಿಂದ ವೀರಶೈವರು ಮತ್ತು ಲಿಂಗಾಯತರ ಮಧ್ಯೆ ಜಟಾಪಟಿಯೂ ನಡೆದಿದೆ. ಅಲ್ಲದೆ ಸರ್ಕಾರದ ನಿರ್ಣಯದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಮಠಾಧೀಶರೊಂದಿಗೆ ಧರ್ಮಯುದ್ಧ ಸಾರಲು ಸಜ್ಜಾಗಿದ್ದಾರೆ.

ಅಂತೂ ಪ್ರತ್ಯೇಕ ಧರ್ಮಕ್ಕೆ ಸಂಪುಟ ಅಸ್ತು

ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ನ್ಯಾಯಮೂರ್ತಿ ನಾಗಮೋಹನ್​ದಾಸ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ಶಿಫಾರಸುಗಳನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಅಂಗೀಕರಿಸಿದೆ. ಅದರನ್ವಯ, ಲಿಂಗಾಯತ ಹಾಗೂ ಬಸವ ತತ್ವ ಪಾಲಿಸುವ ವೀರಶೈವ ಲಿಂಗಾಯತರಿಗೆ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಾಯ್ದೆಯ ಸೆಕ್ಷನ್ 2 (ಡಿ) ಅನ್ವಯ ತೀರ್ವನಿಸಲಾಗಿದೆ. ಇದೇ ವೇಳೆ ಲಿಂಗಾಯತರು ಮತ್ತು ಬಸವ ತತ್ವ ಅನುಸರಿಸುವ ವೀರಶೈವರಿಗೆ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರ ಅಲ್ಪಸಂಖ್ಯಾತರ ಕಾಯ್ದೆಯ ಸೆಕ್ಷನ್ 2 (ಸಿ) ಅನ್ವಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ತೀರ್ವನಿಸಿದೆ.

ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಬಸವಣ್ಣನವರನ್ನು ಧರ್ಮ ಸಂಸ್ಥಾಪಕನೆಂದು ನಂಬುವ, ವಚನಗಳೇ ಧರ್ಮಗ್ರಂಥಗಳೆಂದು ಒಪ್ಪಿಕೊಂಡಿರುವ ಹಾಗೂ ಇಷ್ಟಲಿಂಗ ಪೂಜೆ ಅನುಸರಿಸುವ ಲಿಂಗಾಯತರು ಹಾಗೂ ಇದೇ ಮಾರ್ಗ ಅನುಸರಿಸುವ ವೀರಶೈವರೂ ಲಿಂಗಾಯತ ಧರ್ಮದ ಭಾಗವೇ ಆಗಿದ್ದಾರೆ ಎಂದು ನ್ಯಾ.ನಾಗಮೋಹನ್​ದಾಸ್ ಸಮಿತಿ ತನ್ನ ವರದಿಯಲ್ಲಿ ಹೇಳಿತ್ತು. ಇಂಥ ಲಿಂಗಾಯತರು ಹಾಗೂ ಅದರ ಭಾಗವಾದ ವೀರಶೈವರಿಗೆ ರಾಜ್ಯದಲ್ಲಿ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕು ಹಾಗೂ ಕೇಂದ್ರ ಸರ್ಕಾರಕ್ಕೂ ಶಿಫಾರಸು ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಈ ವರದಿಯ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದೆ ಎಂದರು.

ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಕರ್ನಾಟಕ ಅಲ್ಪಸಂಖ್ಯಾತರ ಆಯೋಗವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವಾಗ, ಹಾಲಿ ಅಸ್ತಿತ್ವದಲ್ಲಿರುವ ಧಾರ್ವಿುಕ ಹಾಗೂ ಭಾಷಿಕ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳಿಗೆ ಯಾವುದೇ ಬಾಧೆ ಆಗದಂತೆ ಲಿಂಗಾಯತರು ಮತ್ತು ಬಸವ ತತ್ವ ಅನುಯಾಯಿ ವೀರಶೈವ ಲಿಂಗಾಯತರಿಗೆ ಷರತ್ತು ಬದ್ಧ ಸ್ಥಾನಮಾನ ನೀಡಬೇಕು ಎಂದು ಶಿಫಾರಸು ಮಾಡಿದೆ. ಹೀಗಾಗಿ ಲಿಂಗಾಯತರಿಗೆ ರಾಜ್ಯ ಸರ್ಕಾರ ಹೊರಡಿಸುವ ಅಧಿಸೂಚನೆ ಬಳಿಕ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ಸಿಗಲಿದ್ದು, ಹಾಲಿ ಅಲ್ಪಸಂಖ್ಯಾತರಿಗೆ ಇರುವ ಸೌಲಭ್ಯಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಜಯಚಂದ್ರ ಸ್ಪಷ್ಟಪಡಿಸಿದರು.

ನ್ಯಾ.ನಾಗಮೋಹನ್ ದಾಸ್ ವರದಿಯಂತೆ ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಸೆಕ್ಷನ್ 2 (ಡಿ) ಮೈನಾರಿಟಿ ಕಮಿಷನ್ ಆಕ್ಟ್​ನಡಿ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಶಿಫಾರಸು ಮಾಡಲಾಗಿದೆ.

| ಸಿದ್ದರಾಮಯ್ಯ ಮುಖ್ಯಮಂತ್ರಿ

 

ಪರ-ವಿರೋಧವಾಗಿ ಸುದೀರ್ಘ ವಾಗ್ವಾದ

ನಾಲ್ಕೂವರೆ ತಾಸುಗಳ ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ವೀರಶೈವ ಮತ್ತು ಲಿಂಗಾಯತ ಬಣಗಳ ಸಚಿವರ ನಡುವೆ ಭಾರಿ ವಾಗ್ವಾದವೇ ನಡೆಯಿತು ಎನ್ನಲಾಗಿದೆ. ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಮತ್ತು ಈಶ್ವರ ಖಂಡ್ರೆ ಅವರು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ ಎಂದು ಪ್ರತಿಪಾದಿಸಿದರೆ, ಸಚಿವರಾದ ಎಂ.ಬಿ. ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಲಿಂಗಾಯತ ಧರ್ಮವೇ ಬೇರೆ, ವೀರಶೈವರೇ ಬೇರೆ. ವೀರಶೈವರು ಹಿಂದು ಧರ್ಮದ ಭಾಗ ಎಂದು ಹೇಳಿಕೊಳ್ಳುತ್ತಾರೆ. ಆದರೆ ಲಿಂಗಾಯತರು ಹಿಂದುಗಳಲ್ಲ. ಹೀಗಾಗಿ ಪ್ರತ್ಯೇಕ ಸ್ಥಾನಮಾನ ನೀಡಬೇಕೆಂಬ ವಾದ ಮಂಡಿಸಿದರು. ಎರಡೂ ಬಣಗಳು ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪೇಚಿಗೆ ಸಿಲುಕಿದರು. ಆದರೆ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರಿಗೆ ಸಂಪುಟ ತೀರ್ಮಾನ ವಿವರಿಸಿದ ಸಚಿವ ಜಯಚಂದ್ರ, ಯಾರೂ ಚಕಾರ ಎತ್ತಿಲ್ಲ. ಎಲ್ಲರೂ ಒಮ್ಮತದಿಂದ ತೀರ್ವನಿಸಿದ್ದೇವೆ ಎಂದು ನಗುತ್ತ ಹೇಳಿದರು.

ವೀರಶೈವ-ಲಿಂಗಾಯತ ಪ್ರತ್ಯೇಕತೆ ಶಿಫಾರಸಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಕೂಡದು. ವೀರಶೈವ ಅಥವಾ ಲಿಂಗಾಯತರಲ್ಲಿ ಮತ ಸಂಪ್ರದಾಯವಿದ್ದರೂ ಒಂದೇ ಧರ್ಮ. ರಾಜ್ಯ ಸರ್ಕಾರದ ನಡೆ ಪ್ರಕಾರ ಎಲ್ಲರಿಗೂ ಮೀಸಲಾತಿ ನೀಡಬೇಕಾಗುತ್ತದೆ.

| ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಪೇಜಾವರ ಮಠ

 


ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತಾದ ಸಮಿತಿಯ ವರದಿಯನ್ನು ರಾಜ್ಯ ಸಚಿವ ಸಂಪುಟ ಅಂಗೀಕರಿಸಿರುವುದರ ಹಿಂದೆ ರಾಜಕೀಯ ನಡೆ ಇದೆ. ಮುಖ್ಯಮಂತ್ರಿ ಹಾಗೂ ಕೆಲ ಸಚಿವರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ. ಸೇವಾಪ್ರಜ್ಞೆ ಕಡಿಮೆಯಾಗುತ್ತಿದೆ.

| ಶ್ರೀ ಬಸವಾನಂದ ಸ್ವಾಮೀಜಿ ಶ್ರೀ ಗುರು ಬಸವ ಮಹಾಮನೆ, ಮನಗುಂಡಿ, ಧಾರವಾಡ

 


ಹೋರಾಟಕ್ಕೆ ಜಯ ಸಿಕ್ಕಿದೆ. ಲಿಂಗಾಯತರು, ವೀರಶೈವ (ಬಸವ ತತ್ವ ಒಪ್ಪಿತ) ಎಂದು ಪ್ರಸಾರವಾದ ವರದಿ ನೋಡಿದ್ದೇನೆ. ಪೂರ್ಣ ವರದಿ ಸಿಕ್ಕ ಬಳಿಕ ಆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಸರ್ಕಾರ ಉತ್ತಮ ನಿರ್ಧಾರದ ಮೂಲಕ ಹೋರಾಟವನ್ನು ರ್ತಾಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದೆ. ವೀರಶೈವರು, ಲಿಂಗಾಯತರು ಶತ್ರುಗಳಲ್ಲ.

| ಶ್ರೀ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ

 


ಬಿಜೆಪಿ ಮೊದಲಿನಿಂದಲೂ ಅಖಿಲ ಭಾರತ ವೀರಶೈವ ಮಹಾಸಭಾ ತೆಗೆದುಕೊಳ್ಳುವ ತೀರ್ವನಕ್ಕೆ ಬದ್ಧವಾಗಿರುತ್ತದೆ ಎಂಬ ನಿಲುವು ತೆಗೆದುಕೊಂಡಿದೆ. ರಾಜ್ಯ ಸರ್ಕಾರದ ಈ ಶಿಫಾರಸಿನ ಹಿನ್ನೆಲೆಯಲ್ಲಿ ಮಹಾಸಭಾ ತುರ್ತಾಗಿ ಸಭೆ ಸೇರಿ ಸಾಧಕ-ಬಾಧಕಗಳ ಚರ್ಚೆ ನಡೆಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು.

| ಬಿ.ಎಸ್. ಯಡಿಯೂರಪ್ಪ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ

 


ಲಿಂಗಾಯತ, ವೀರಶೈವ ಎರಡೂ ಪದಗಳನ್ನೂ ಸೇರಿಸಿ ತೀರ್ಮಾನ ಕೈಗೊಳ್ಳುವ ಮೂಲಕ ಸರ್ಕಾರ ಮಹಾಸಭಾದ ಬೇಡಿಕೆಗೆ ಸ್ಪಂದಿಸಿದೆ. ಅಡ್ವೊಕೇಟ್ ಜನರಲ್ ಜತೆ ರ್ಚಚಿಸಿ ಈ ತೀರ್ವನಕ್ಕೆ ಬಂದಿದೆ. ಸಮಿತಿಯ ವರದಿಯಲ್ಲಿ ಏನಿದೆ ಎಂಬ ಮಾಹಿತಿ ನನಗಿಲ್ಲ. ಮಾ.23 ಅಥವಾ 24 ರಂದು ವೀರಶೈವ ಲಿಂಗಾಯತ ಮಹಾ ಸಭೆ ಪದಾಧಿಕಾರಿಗಳ ಸಭೆ ಕರೆಯಲಾಗಿದೆ.

ಡಾ.ಶಾಮನೂರು ಶಿವಶಂಕರಪ್ಪ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ

 


ಧರ್ಮ ವಿಭಜನೆಯ ಮೂಲಕ ಸಿಎಂ ಒಡಕಿನ ರಾಜಕಾರಣ ಮಾಡುತ್ತಿದ್ದಾರೆ. ವರದಿಯಲ್ಲಿ ಏನಿದೆ ಎನ್ನುವುದರ ಬಗ್ಗೆ ಸಾರ್ವಜನಿಕರಿಗೆ ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿಲ್ಲ. ಧರ್ಮ ಸೂಕ್ಷ್ಮತೆಯ ವಿಚಾರವನ್ನು ಸಮಾಜದ ಹಿರಿಯರು, ಸ್ವಾಮೀಜಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸಬೇಕಾಗಿತ್ತು.

| ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ

 


ಲಿಂಗಾಯತರಿಗೆ ಧಾರ್ವಿುಕ ಅಲ್ಪಸಂಖ್ಯಾತರ ಮಾನ್ಯತೆ ನೀಡುವ ತೀರ್ಮಾನ ತೆಗೆದುಕೊಳ್ಳುವ ಮೂಲಕ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ನ ಶವದ ಪೆಟ್ಟಿಗೆಗೆ ಇಂದು ಕೊನೆಯ ಮೊಳೆ ಹೊಡೆದಿದ್ದಾರೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಅಕ್ಷರಶಃ ಪಾಲಿಸಿದವರು ಸಿದ್ದರಾಮಯ್ಯ. ಜನರೇ ಪಾಠ ಕಲಿಸುತ್ತಾರೆ.

| ಡಿ.ವಿ.ಸದಾನಂದಗೌಡ ಕೇಂದ್ರ ಸಚಿವ

 


ಪ್ರತ್ಯೇಕ ಧರ್ಮದ ವಿಚಾರವಾಗಿ ಸರ್ಕಾರ ಕೈಗೊಂಡ ನಿರ್ಣಯ ಖಂಡನೀಯ. ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿರುವುದು ವಿಪರ್ಯಾಸ. ಸವೋಚ್ಚ ನ್ಯಾಯಾಲಯದ ಪ್ರಕಾರ ವೇದಗಳನ್ನು ಆರಾಧಿಸುವವರು ಹಿಂದುಗಳು.

| ಎಂ.ಚಿದಾನಂದ ಮೂರ್ತಿ ಹಿರಿಯ ಸಂಶೋಧಕ

 


ಮುಖ್ಯಮಂತ್ರಿಗೆ ಧರ್ಮ ಒಡೆದ ಅಪಖ್ಯಾತಿ

ಹುಬ್ಬಳ್ಳಿ: ಲಿಂಗಾಯತ-ವೀರಶೈವ ಧರ್ಮ ಪ್ರತ್ಯೇಕಕ್ಕಾಗಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದನ್ನು ಖಂಡಿಸಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ಎರಡು ದಿನದೊಳಗೆ ಎಲ್ಲ ಮಠಾಧೀಶರ ಸಭೆ ಕರೆದು ರ್ಚಚಿಸಿ, ರಾಜ್ಯ ಸರ್ಕಾರದ ವಿರುದ್ಧ ಶಾಂತಿಯುತವಾಗಿ ಧರ್ಮಯುದ್ಧ ಸಾರಲಾಗುವುದು ಎಂದರು. ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಶ್ರೀಗಳು, ಶರಣರಿಗಿಂತ ಮುಂಚೆ ಆಚಾರ್ಯರ ತತ್ವವಿದೆ. ದುಷ್ಟಬುದ್ಧಿಯಿಂದ ಲಿಂಗಾಯತ-ವೀರಶೈವ ಎಂದು ಬೇರ್ಪಡಿಸಲಾಗಿದೆ. ಒಂದು ರೀತಿಯಲ್ಲಿ ರಾಜ್ಯ ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧರ್ಮ ಸಂಕಟದಲ್ಲಿ ಸಿಲುಕುವ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಧರ್ಮ ಒಡೆದ ಅಪಖ್ಯಾತಿಗೆ ಅವರು ಗುರಿಯಾಗಿರುವುದು ಖಚಿತ ಎಂದರು.

ಆತುರದ ನಿರ್ಧಾರ: ವೀರಶೈವರು ಬಸವತತ್ವ ಒಪ್ಪಿಕೊಳ್ಳುವುದಿಲ್ಲ. ವೀರಶೈವ ಧರ್ಮ ಪ್ರಾಚೀನ ಕಾಲದ್ದು. ಇದನ್ನು ಅವಲೋಕನ ಮಾಡದೆ ಮುಖ್ಯಮಂತ್ರಿ ಅವರು ಆತುರದ ನಿರ್ಧಾರ ಕೈಗೊಂಡಿದ್ದಾರೆ. ಆಚಾರ್ಯರ ಪರಂಪರೆ ನಿರ್ನಾಮ ಮಾಡುವ ಉದ್ದೇಶವಿದೆ. ಹಿಂದು ಧರ್ಮದಿಂದ ಪ್ರತ್ಯೇಕ ಮಾಡುವುದು ಸರಿಯಲ್ಲ. ಕೇಂದ್ರ ಸರ್ಕಾರವೂ ರಾಜ್ಯದ ಶಿಫಾರಸನ್ನು ಒಪ್ಪಿಕೊಳ್ಳುವುದಿಲ್ಲ. ಬಸವಣ್ಣನವರು ಧರ್ಮ ಸಂಸ್ಥಾಪಕರಲ್ಲ, ಅವರು ಸಮಾಜ ಸುಧಾರಕರು. ವಚನಗಳು ಧರ್ಮಗ್ರಂಥಗಳಲ್ಲ. ಆಯಾ ಕಾಲಕ್ಕೆ ಸಂಬಂಧಿಸಿದ ಸಲಹೆ, ಮಾರ್ಗದರ್ಶನ ನೀಡಿವೆ ಎಂದು ರಂಭಾಪುರಿಶ್ರೀ ಹೇಳಿದರು.

ಕಾನೂನು ಮೊರೆಗೆ ಚಿಂತನೆ

ಲಿಂಗಾಯತ ಸ್ವತಂತ್ರ ಧರ್ಮದ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ತಜ್ಞರ ಸಮಿತಿ ರಚಿಸಿತ್ತು. ಸಮಿತಿ ಸಲ್ಲಿಸಿದ ವರದಿಯ ಪೂರ್ವಾಪರ ವಿಮರ್ಶೆ ಮಾಡದೆ ಏಕಪಕ್ಷೀಯವಾಗಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಆತುರದ ನಿರ್ಣಯ ತೆಗೆದುಕೊಂಡಿದ್ದಾರೆ. ಭವಿಷ್ಯತ್ತಿನಲ್ಲಿ ಇದು ಅವನತಿಗೆ ಕಾರಣವಾದೀತು ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಎಚ್ಚರಿಕೆ ನೀಡಿದರು. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ವೀರಶೈವ ಧರ್ಮ ಪ್ರಾಚೀನವಾಗಿದ್ದು ಇದರ ಇತಿಹಾಸ ಮತ್ತು ಪರಂಪರೆ ಅಪೂರ್ವವಾದುದು. ಶರಣರಿಗಿಂತಲೂ ಮೊದಲೇ ವೀರಶೈವ ಧರ್ಮ ಗುರು ಪರಂಪರೆ ಇತ್ತೆಂಬುದಕ್ಕೆ ಹಲವಾರು ದಾಖಲೆಗಳಿವೆ. ಅವೆಲ್ಲವನ್ನು ಪರಾಮಶಿಸದೆ ಸಮಿತಿ ಏಕಪಕ್ಷೀಯವಾಗಿ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದೆ ಎಂದರು. ಇದರ ಸದಸ್ಯರೆಲ್ಲರೂ ಈ ಹಿಂದೆ ಲಿಂಗಾಯತರ ಪರವಾಗಿಯೇ ಕೆಲಸ ಮಾಡಿದವರಿದ್ದಾರೆ. ಸ್ವತಂತ್ರ ಲಿಂಗಾಯತ ವಿಚಾರಗಳನ್ನಾಧರಿಸಿ ಸಮಿತಿ ಕೊಟ್ಟ ವರದಿಯನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅತಿ ಶೀಘ್ರದಲ್ಲಿ ರಾಷ್ಟ್ರೀಯ ವೀರಶೈವ ಪರಿಷತ್ತಿನ ಆಶ್ರಯದಲ್ಲಿ ಎಲ್ಲ ಗುರು ವಿರಕ್ತ ಮಠಾಧೀಶರ ಸಭೆ ಕರೆದು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಕಾನೂನಾತ್ಮಕವಾಗಿ ಒಡೆದಾಳುವ ನೀತಿ ಖಂಡಿಸಿ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ಗದಗಿನ ಶ್ರೀಗಳ ಹೇಳಿಕೆಗೆ ಖಂಡನೆ

ಗದಗಿನ ತೋಂಟದಾರ್ಯ ಮಠದ ಶ್ರೀಗಳು ಪಂಚಪೀಠಾಧೀಶರನ್ನು ಹೀಯಾಳಿಸಿದ್ದಾರೆ. ಜತೆಗೆ ವೀರಶೈವ ಧರ್ಮವನ್ನು ಹೈಜಾಕ್ ಮಾಡಿದ್ದಾರೆ ಎನ್ನುತ್ತಿದ್ದಾರೆ. ಬಸವಣ್ಣನವರ ತತ್ವ ಅನುಸರಿಸುವ ಅವರ ಬಾಯಲ್ಲಿ ಕೀಳುಮಟ್ಟದ ಭಾಷೆ ಬಂದಿರುವುದು ನೋವು ತರಿಸಿದೆ ಎಂದು ಶ್ರೀರಂಭಾಪುರಿ ಜಗದ್ಗುರುಗಳು ಬೇಸರ ವ್ಯಕ್ತಪಡಿಸಿದರಲ್ಲದೆ, ಅಂಥ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದರು.


ಜಾಗತಿಕ ಧರ್ಮ ಸ್ಥಾಪನೆಯೇ ನಮ್ಮ ಉದ್ದೇಶ

ಬೆಂಗಳೂರು: ‘ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಾಸಿವೆ ಕಾಳಷ್ಟೂ ಸಮಸ್ಯೆ ಆಗುವುದಿಲ್ಲ. ಅಲ್ಪಸಂಖ್ಯಾತ ಮೀಸಲಾತಿಗಾಗಿ ನಮ್ಮ ಬೇಡಿಕೆ ಇರಲಿಲ್ಲ. ಬಸವ ಧರ್ಮ ಜಾಗತಿಕ ಧರ್ಮವಾಗಬೇಕು ಎಂಬುದು ನಮ್ಮ ಧ್ಯೇಯ, ಅದಕ್ಕೆ ಜಯ ಸಿಕ್ಕಿದೆ. ಸರ್ಕಾರ ನಮ್ಮ ಆಶಯ ಈಡೇರಿಸಿದೆ ಎಂದು ಲಿಂಗಾಯತ ಪ್ರತ್ಯೇಕ ಧರ್ಮದ ಪರ ಹೋರಾಟ ಮಾಡಿದ್ದ ಸಚಿವರು ಹಾಗೂ ವಿವಿಧ ಮುಖಂಡರು ಸ್ಪಷ್ಟಪಡಿಸಿದರು.

ಅಲ್ಪ ಸಂಖ್ಯಾತರ ಹಕ್ಕಿಗೆ ನಾವು ಅಪೇಕ್ಷೆ ಪಡುವುದಿಲ್ಲ. ಈಗ ನಾವು 3(ಬಿ)ಯಲ್ಲಿದ್ದೇವೆ, ಅವೆಲ್ಲ ಹಾಗೇ ಇರುತ್ತವೆ. ಜೈನರೂ 3ಬಿ ಯಲ್ಲಿ ಇದ್ದರು, ಈಗಲೂ ಹಾಗೇ ಇದ್ದಾರೆ ಎಂದು ಸಚಿವರಾದ ಎಂ.ಬಿ.ಪಾಟೀಲ, ಡಾ.ಶರಣ ಪ್ರಕಾಶ ಪಾಟೀಲ, ವಿನಯ್ ಕುಲಕರ್ಣಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಸೋಮವಾರ ಸ್ಪಷ್ಟಪಡಿಸಿದರು.

ಸಚಿವ ಎಂ.ಬಿ. ಪಾಟೀಲ ಮಾತನಾಡಿ, ರಾಜ್ಯದಲ್ಲಿ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಿ ಅಲ್ಪ ಸಂಖ್ಯಾತ ಸ್ಥಾನಮಾನ (ರಾಜ್ಯ ಅಲ್ಪ ಸಂಖ್ಯಾತರ ಕಾಯ್ದೆ ಸೆಕ್ಷನ್ 2ಡಿ ಅಡಿ)ನೀಡಿ, ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ. ಹಾಗಾಗಿ ಕೇಂದ್ರ ಕೂಡ ಈ ಶಿಫಾರಸು ಒಪ್ಪಬೇಕಾಗುತ್ತದೆ ಎಂದರು. ಸಂಪುಟ ಸಭೆಯ ನಿರ್ಣಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಸಚಿವರಾದ ಈಶ್ವರ್ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ ಮತ್ತಿತರರೂ ಒಪ್ಪಿದ್ದಾರೆ ಎಂದು ಸಮರ್ಥಿಸಿಕೊಂಡರು.

ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ, ಸಚಿವ ಡಾ. ಶರಣ ಪ್ರಕಾಶ ಪಾಟೀಲ, ಬಸವತತ್ವ ಒಪ್ಪುವ ವೀರಶೈವರೂ ಧರ್ಮದ ವ್ಯಾಪ್ತಿಗೆ ಬರುತ್ತಾರೆ ಎಂದು ಸ್ಪಷ್ಟಪಡಿಸಿದರು.

ನಿವೃತ್ತ ಐಎಎಸ್ ಅಧಿಕಾರಿ ಡಾ.ಶಿವಾನಂದ ಜಾಮದಾರ್, ಲಿಂಗಾಯತ ಸ್ವತಂತ್ರ ಧರ್ಮವಾಗಬೇಕೆಂಬ 75 ವರ್ಷಗಳ ಹೋರಾಟಕ್ಕೆ ಈಗ ಜಯ ಸಿಕ್ಕಿದೆ ಎಂದರು.

ಸ್ವಾಮೀಜಿಗಳ ಮಾತಿಗಿಲ್ಲ ಬೆಲೆ

ಯಾವುದೇ ಕಾರಣಕ್ಕೂ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡಬಾರದೆಂದು ಪಂಚಾಪೀಠಾಧೀಶರು ಹಾಗೂ ಅನೇಕ ವೀರಶೈವ ಮಠಾಧೀಶರು ಸರ್ಕಾರದ ಮೇಲೆ ನಿರಂತರ ಒತ್ತಡ ತಂದಿದ್ದರು. ಉಜ್ಜಯಿನಿ ಹಾಗೂ ಇತರೆ ಮಠಾಧೀಶರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದರು. ಆದರೆ ಸರ್ಕಾರ ಅದಾವುದಕ್ಕೂ ಕಿಂಚಿತ್ತು ಬೆಲೆ ನೀಡದೆ ಕೆಲವೇ ಮಂದಿಯ ಒತ್ತಾಯಕ್ಕೆ ಮಣಿದಿದೆ. ವೀರಶೈವ ಮಹಾಸಭಾ ಸಹ ಪ್ರತ್ಯೇಕ ಧರ್ಮ ಮಾಡುವುದಾದರೆ ವೀರಶೈವ ಲಿಂಗಾಯತವೆಂದೇ ಶಿಫಾರಸು ಮಾಡಬೇಕೆಂದು ಮಾಡಿದ್ದ ಒತ್ತಾಯಕ್ಕೂ ಬೆಲೆ ನೀಡಿಲ್ಲ.

ಲಾಭದ ಲೆಕ್ಕಾಚಾರ

ವೀರಶೈವ ಲಿಂಗಾಯತರನ್ನು ವಿಭಜಿಸುವ ಮೂಲಕ ಸರ್ಕಾರ ರಾಜಕೀಯ ಲಾಭದ ಲೆಕ್ಕಾಚಾರ ಮಾಡಿದೆ. ರಾಜ್ಯದಲ್ಲಿ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿದೆ, ಆ ಮತಗಳನ್ನು ವಿಭಜಿಸುವುದು ಕಾಂಗ್ರೆಸ್​ಗೆ ಲಾಭವೆಂದು ಲೆಕ್ಕಾಚಾರ ಹಾಕಿ ಈ ನಿರ್ಧಾರಕ್ಕೆ ಬಂದಿದೆ. ಆದರೆ ಹಿಂದು ಧರ್ಮ ಇಬ್ಭಾಗ ಮಾಡಿದ ಅಪಕೀರ್ತಿ ಸರ್ಕಾರ ಹೊತ್ತಿರುವುದರಿಂದ ಅದರ ಪರಿಣಾಮಗಳ ಬಗ್ಗೆ ಈಗಲೇ ಏನೂ ಹೇಳಲಾಗದು.

ಮಾಹಿತಿ ಪಡೆದು ಪ್ರತಿಕ್ರಿಯೆ ಎಂದ ಶ್ರೀಗಳು

ತುಮಕೂರು: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಕೇಂದ್ರಕ್ಕೆ ಶಿಫಾರಸು ಹಿನ್ನೆಲೆ ಪ್ರತಿಕ್ರಿಯಿಸಲು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು ನಿರಾಕರಿಸಿದ್ದಾರೆ. ನನಗೆ ಸಂಪುಟ ಸಭೆಯ ವಿಚಾರದ ಸಂಪೂರ್ಣ ಮಾಹಿತಿ ಇಲ್ಲ. ಹಾಗಾಗಿ ಈ ಕುರಿತು ಮಾತನಾಡುವುದಿಲ್ಲ. ಸಂಪೂರ್ಣ ಮಾಹಿತಿ ಪಡೆದು ನಾಳೆ(ಮಂಗಳವಾರ) ಪ್ರತಿಕ್ರಿಯೆ ನೀಡುತ್ತೇನೆ ಎಂದು ಸಿದ್ದಲಿಂಗ ಶ್ರೀಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಧರ್ಮ ವಿಭಜನೆಯ ಹುನ್ನಾರ

ಏಕಪಕ್ಷೀಯವಾಗಿದ್ದ ನ್ಯಾ.ನಾಗಮೋಹನ್​ದಾಸ್ ಸಮಿತಿ ಶಿಫಾರಸಿನ ಅನ್ವಯ ರಾಜ್ಯ ಸಚಿವ ಸಂಪುಟ ಸಭೆ ಸೋಮವಾರ ಲಿಂಗಾಯತರು ಹಾಗೂ ಬಸವತತ್ವ ಪಾಲಿಸುವ ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ನಿರ್ಧರಿಸಿರುವುದು ಹಾಗೂ ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿರುವುದು ವೀರಶೈವ ಲಿಂಗಾಯತ ಸಮುದಾಯವನ್ನು ಒಡೆದು ಆಳುವ ಹುನ್ನಾರ ಎಂದು ಬಿಜೆಪಿ ಟೀಕಿಸಿದೆ. ವೀರಶೈವ ಮತ್ತು ಲಿಂಗಾಯತರ ಐಕ್ಯತೆ ಪರವಾಗಿ ಬಿಜೆಪಿ ನಿಲುವು ಅಚಲವಾಗಿದ್ದು, ವೀರಶೈವ ಮತ್ತು ಲಿಂಗಾಯತರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಬದುಕಬೇಕೆಂಬ ಆಶಯ ಹೊಂದಿದೆ ಎಂದು ಸ್ಪಷ್ಟಪಡಿಸಿದೆ. ಹಾಲಿ ಅಸ್ತಿತ್ವದಲ್ಲಿರುವ ಜಾತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯದ ಧರ್ಮಗಳ ಕುರಿತಂತೆ ಶಿಫಾರಸು ಮಾಡಲು ಮಾತ್ರ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ. ಆದಾಗ್ಯೂ ಲಿಂಗಾಯತ ಧರ್ಮಕ್ಕೆ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಶಿಫಾರಸು ಮಾಡಲಾಗಿದೆ. ಅಲ್ಲದೆ ಬಸವ ತತ್ವ ಅನುಯಾಯಿಗಳು ಎಂದು ಶಿಫಾರಸಿನಲ್ಲಿ ಹೇಳಲಾಗಿದ್ದು, ಇದು ಕಾಂಗ್ರೆಸ್ ಸರ್ಕಾರದ ಕಪಟ ನಾಟಕವಾಗಿದೆ ಎಂದು ವಾಗ್ದಾಳಿ ನಡೆಸಿದೆ.


ವೀರಶೈವ-ಲಿಂಗಾಯತರ ಜಟಾಪಟಿ

ಕಲಬುರಗಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ಸೋಮವಾರ ಕೈಗೊಂಡ ನಿರ್ಧಾರ ನಗರದಲ್ಲಿ ಬಿಸಿ ವಾತಾವರಣಕ್ಕೆ ಕಾರಣವಾಯಿತು. ಒಂದು ಹಂತದಲ್ಲಿ ವೀರಶೈವ ಮತ್ತು ಲಿಂಗಾಯತರ ಮಧ್ಯೆ ಬಿರುಸಿನ ಮಾತಿನ ಚಕಮಕಿ ನಡೆದು, ಕೆಲ ಲಿಂಗಾಯತ ಮುಖಂಡರು ವೀರಶೈವ ಮುಖಂಡರನ್ನು ಥಳಿಸಿದ ಘಟನೆಯೂ ನಡೆಯಿತು. ಹೀಗಾಗಿ ಪರಿಸ್ಥಿತಿ ಕೆಲಕಾಲ ಉದ್ವಿಗ್ನಗೊಂಡಿತ್ತು. ನ್ಯಾ.ನಾಗಮೋಹನದಾಸ್ ನೇತೃತ್ವದ ಸಮಿತಿ ಸಲ್ಲಿಸಿದ ವರದಿಯನ್ನು ಸಚಿವ ಸಂಪುಟ ಸಭೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದ ವಿಷಯ ಅರಿಯುತ್ತಲೇ ಜಗತ್ ವೃತ್ತದಲ್ಲಿ ಸೇರಿದ ಲಿಂಗಾಯತ ಸಮಾಜದ ಗಣ್ಯರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಇತ್ತ ಸಂಪುಟದ ನಿರ್ಧಾರ ವಿರೋಧಿಸಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ವೀರಶೈವ ಸಮಾಜದ ಕೆಲವರು ಎಂ.ಎಸ್. ಪಾಟೀಲ್ ನರಿಬೋಳ ನೇತೃತ್ವದಲ್ಲಿ ಪ್ರತಿಭಟನೆಗಿಳಿದು ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.

ಜಗತ್ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದ ಲಿಂಗಾಯತರು ನಂತರ ಪಟೇಲ್ ವೃತ್ತಕ್ಕೆ ಆಗಮಿಸಿದರು. ಇಲ್ಲಿ ಪ್ರತಿಭಟನೆ ನಡೆದಿದ್ದನ್ನು ಕಂಡು ಆಕ್ರೋಶಗೊಂಡರು. ಈ ವೇಳೆ ಸರ್ಕಾರದ ವಿರುದ್ಧ ವೀರಶೈವ ಸಮುದಾಯದ ಕೆಲವರು ಚಪ್ಪಲಿ ತೋರಿಸಿದ್ದು ಲಿಂಗಾಯತರನ್ನು ಕೆರಳಿಸಿತು. ಬೆರಳೆಣಿಕೆ ಸಂಖ್ಯೆಯಲ್ಲಿದ್ದ ವೀರಶೈವರ ಮೇಲೆ ತಕ್ಷಣವೇ ಕೆಲವರು ಹಲ್ಲೆಗೆ ಮುಂದಾದರು. ಈ ನಡುವೆ ಕೆಲವರು ಎಂ.ಎಸ್. ಪಾಟೀಲ್ ಅವರನ್ನು ಥಳಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಪಾಟೀಲ್ ಅವರನ್ನು ಕರೆದೊಯ್ಯುವ ಮೂಲಕ ಭಾರಿ ಅನಾಹುತ ತಪ್ಪಿಸಿದರು.

ಹಾವೇರಿಯಲ್ಲಿ ವಿಜಯೋತ್ಸವ

ಹಾವೇರಿ: ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನಗರದಲ್ಲಿ ಲಿಂಗಾಯತ ಮುಖಂಡರು ಪಟಾಕಿ-ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಗರದ ಎಂ.ಜಿ. ರಸ್ತೆಯಲ್ಲಿ ಲಿಂಗಾಯತ ಮುಖಂಡರು ಬಸವಣ್ಣನ ಪರ ಘೊಷಣೆ ಕೂಗಿ, ಪ್ರತ್ಯೇಕ ಧರ್ಮ ರಚನೆಗಾಗಿ ಅನೇಕ ಹೋರಾಟ ಮಾಡಿದ ಗಣ್ಯರನ್ನು ಸ್ಮರಿಸಿದರು. ಸಿಎಂ ಸಿದ್ದರಾಮಯ್ಯ, ಸಚಿವರಾದ ವಿನಯ ಕುಲಕರ್ಣಿ, ಎಂ.ಬಿ. ಪಾಟೀಲ, ಜಮಾದಾರ ಪರ ಜೈಕಾರ ಹಾಕಿದರು.

ಹೀಗಿದೆ ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ವ್ಯಾಖ್ಯಾನ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಾಯ್ದೆಯ ಸೆಕ್ಷನ್ 2 (ಡಿ) ಅನ್ವಯ ರಾಜ್ಯದಲ್ಲಿ ನೆಲೆಸಿರುವ ಲಿಂಗಾಯತರು ಮತ್ತು ಬಸವ ತತ್ವ ಒಪು್ಪವ ವೀರಶೈವರನ್ನು ಅಧಿಸೂಚನೆ ಹೊರಡಿಸಿದ ಬಳಿಕ ಧಾರ್ವಿುಕ ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ (ಮುಸ್ಲಿಂ, ಕ್ರೖೆಸ್ತ, ಬೌದ್ಧ, ಜೈನ ಮತ್ತು ಪಾರ್ಸಿ) ಸಿಗುವ ಶೇ. 4 ಮೀಸಲಾತಿ ಲಿಂಗಾಯತರಿಗೆ ದಕ್ಕುವುದಿಲ್ಲ. ಇದೇ ವೇಳೆ ಲಿಂಗಾಯತರು ಮತ್ತು ಬಸವ ತತ್ವ ಅನುಸರಿಸುವ ವೀರಶೈವರಿಗೆ ಧಾರ್ವಿುಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರ ಅಲ್ಪಸಂಖ್ಯಾತರ ಕಾಯ್ದೆಯ ಸೆಕ್ಷನ್ 2 (ಸಿ) ಅನ್ವಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ವನಿಸಿದೆ. ಈ ಶಿಫಾರಸು ಒಪ್ಪಿ ಕೇಂದ್ರ ಸರ್ಕಾರ ದೇಶದಲ್ಲಿರುವ ಹಾಲಿ ಅಲ್ಪಸಂಖ್ಯಾತರಿಗೆ ನೀಡುವ ಶೇ. 4 ಮೀಸಲಾತಿಯಲ್ಲಿ ಲಿಂಗಾಯತರೂ ಧಾರ್ವಿುಕ ಅಲ್ಪಸಂಖ್ಯಾತರೆಂದು ಸೇರಿಸಲು ಲೋಕಸಭೆಯಲ್ಲಿ ಕಾಯ್ದೆಗೆ ತಿದ್ದುಪಡಿ ಜಾರಿಗೊಳಿಸಿದಾಗ ಮೀಸಲಾತಿ ಲಾಭ ದಕ್ಕುತ್ತದೆ.

ಕೇಂದ್ರ ಅಲ್ಪಸಂಖ್ಯಾತರ ಕಾಯ್ದೆಯ ಸೆಕ್ಷನ್ 2 (ಸಿ) ಅನ್ವಯ ಕೇಂದ್ರ ಸರ್ಕಾರ ಲಿಂಗಾಯತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಒಪ್ಪಿದರೆ ಉದ್ಯೋಗ, ಶಿಕ್ಷಣ, ಸಾಮಾಜಿಕ ಸುರಕ್ಷಾ ಯೋಜನೆಗಳು ಸೇರಿ ಮೀಸಲಾತಿ ಅಡಿ ದಕ್ಕುವ ಎಲ್ಲ ಬಗೆಯ ಸೌಲಭ್ಯಗಳಿಗೆ ಲಿಂಗಾಯತರು ದೇಶಾದ್ಯಂತ ಅರ್ಹರಾಗುತ್ತಾರೆ. ಆದರೆ ಇದಾಗಬೇಕಾದರೆ ಸಂಸತ್ತಿನಲ್ಲಿ ಮೀಸಲಾತಿ ಪ್ರಮಾಣದ ಪುನಾರಚನೆ ಆಗಬೇಕು.

ಧಾರ್ವಿುಕ ಅಲ್ಪಸಂಖ್ಯಾತರಾದರೆ ಲಿಂಗಾಯತರಿಗಾಗುವ ಲಾಭ

ರಾಜ್ಯ ಸರ್ಕಾರದ ತೀರ್ವನದಿಂದ ಸದ್ಯಕ್ಕೆ ರಾಜ್ಯದಲ್ಲಿ ಮಾತ್ರ ಧಾರ್ವಿುಕ ಅಲ್ಪಸಂಖ್ಯಾತ ಮಾನ್ಯತೆ ಸಿಗಲಿದ್ದು, ಕೇಂದ್ರ ಸರ್ಕಾರಕ್ಕೆ ರಾಜ್ಯ ಮಾಡಿರುವ ಶಿಫಾರಸು ದೇಶಾದ್ಯಂತ ಜಾರಿಯಾದಾಗ ದೇಶದಲ್ಲೂ ಸೌಲಭ್ಯಗಳು ಸಿಗಲಿವೆ. ಸದ್ಯಕ್ಕೆ ರಾಜ್ಯದಲ್ಲಿ ಉದ್ಯೋಗ ಹಾಗೂ ಶಿಕ್ಷಣ ಸೇರಿ ವೈಯಕ್ತಿಕವಾಗಿ ಅಲ್ಪಸಂಖ್ಯಾತರಿಗೆ ಸಿಗುವ ಯಾವುದೇ ಲಾಭ ಸಿಗುವುದಿಲ್ಲ. ಬದಲಾಗಿ ಕರ್ನಾಟಕ ಧಾರ್ವಿುಕ ಮತ್ತು ಭಾಷಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಕಾಯ್ದೆಯಡಿ ಲಿಂಗಾಯತರ ಶಿಕ್ಷಣ ಸಂಸ್ಥೆಗಳಿಗೆ ತಕ್ಷಣದಿಂದಲೇ ಲಾಭ ಸಿಗಲಿದೆ. ಅಂದರೆ ಲಿಂಗಾಯತರ ಶಿಕ್ಷಣ ಸಂಸ್ಥೆಗಳು ಆರ್​ಟಿಇ ಕಾಯ್ದೆಯಡಿ ಸರ್ಕಾರಕ್ಕೆ ಸೀಟುಗಳನ್ನು ಬಿಟ್ಟುಕೊಡುವುದಿಲ್ಲ, ಎಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳನ್ನು ಸರ್ಕಾರಿ ಕೋಟಾದಡಿ ಬಿಟ್ಟುಕೊಡಬೇಕಿಲ್ಲ. ಈ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ. ಆಯಾ ಶಿಕ್ಷಣ ಸಂಸ್ಥೆಗಳಲ್ಲಿ ನೌಕರರ ನೇಮಕಾತಿ ಸಂಪೂರ್ಣ ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ. ಸರ್ಕಾರದಿಂದ ಅನುದಾನ ಪಡೆಯುವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಪಡೆಯುವುದರಿಂದ ಎಲ್ಲ ಬಗೆಯ ಆಡಳಿತಾತ್ಮಕ ಅಧಿಕಾರ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ದಕ್ಕಲಿದೆ.

ಕೇಂದ್ರದ ನಿರ್ಧಾರವೇ ಅಂತಿಮ

ರಾಜ್ಯ ಸರ್ಕಾರದ ಶಿಫಾರಸನ್ನು ಕೇಂದ್ರ ಸರ್ಕಾರ ಅನುಮೋದಿಸಬಹುದು, ತಿರಸ್ಕರಿಸಲೂಬಹುದು ಅಥವಾ ಇನ್ನಷ್ಟು ವರ್ಷಗಳ ಕಾಲ ಹಾಗೇ ಇಡಬಹುದು. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವುದು, ಬಿಡುವುದು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೈಕೋರ್ಟ್ ವಕೀಲರಾಗಿರುವ ಕೆ.ಬಿ.ಕೆ. ಸ್ವಾಮಿ ಅಭಿಪ್ರಾಯ ಪಡುತ್ತಾರೆ. ಇಷ್ಟೇ ದಿನಗಳಲ್ಲಿ ನಿರ್ಧಾರ ಕೈಗೊಳ್ಳಬೇಕೆಂಬ ನಿಯಮವೇನೂ ಇಲ್ಲ. ರಾಜ್ಯ ಸರ್ಕಾರವೂ ಕೇಂದ್ರದ ಮೇಲೆ ಒತ್ತಡ ಹೇರಲು ಅವಕಾಶವಿಲ್ಲ. ಯಾವುದೇ ಧರ್ಮಕ್ಕೆ ಅಲ್ಪಸಂಖ್ಯಾತ ಮಾನ್ಯತೆ ನೀಡಬೇಕಾದರೆ, ಅದಕ್ಕೆ ನಿರ್ದಿಷ್ಟ ಮಾನದಂಡಗಳಿರುತ್ತವೆ. ಅಂತೆಯೇ ಲಿಂಗಾಯತ ಧರ್ಮದ ಆಚಾರಗಳು, ಸಾಂಸ್ಕೃತಿಕ ಹಿನ್ನೆಲೆ, 12ನೇ ಶತಮಾನದಿಂದಲೂ ನಡೆದು ಬಂದಿರುವ ಹೋರಾಟಗಳು ಎಲ್ಲವನ್ನೂ ಕೇಂದ್ರ ಪರಿಗಣಿಸಬೇಕಾಗುತ್ತದೆ. ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ದೊರೆತ ಮಾತ್ರಕ್ಕೆ ಮೀಸಲಾತಿ ಸಾಧ್ಯವಿಲ್ಲ. ಒಂದೊಮ್ಮೆ ಲಿಂಗಾಯತ ಧರ್ಮ ಅಲ್ಪಸಂಖ್ಯಾತ ಧರ್ಮ ಎಂದು ಘೋಷಿಸಲ್ಪಟ್ಟರೆ, ಅದರದ್ದೇ ಆದ ಶೈಕ್ಷಣಿಕ ಸಂಸ್ಥೆ, ಸಾಂಸ್ಕೃತಿಕ ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಬಹುದು. ಕ್ಯಾಬಿನೆಟ್ ನಿರ್ಧಾರವನ್ನು ಕಾನೂನಿನಲ್ಲಿ ಪ್ರಶ್ನಿಸಲು ಅವಕಾಶವಿಲ್ಲ. ಒಂದೊಮ್ಮೆ ಯಾರಾದರೂ ಕೋರ್ಟ್​ಗೆ ಹೋದರೂ ನ್ಯಾಯಾಲಯವೂ ಏನೂ ಮಾಡಲು ಸಾಧ್ಯವಿಲ್ಲ. ಸಂವಿಧಾನ ದಲ್ಲೇ ಧರ್ಮ ರಚನೆಗೆ ಅವಕಾಶವಿದೆ. ಧರ್ಮ ರಚನೆ ಮಾಡುವ ಅಥವಾ ಮಾಡದಿರುವ ಕೆಲಸ ನ್ಯಾಯಾಲಯದ್ದಲ್ಲವೇ ಅಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ನಿರ್ಧಾರವೇ ಅಂತಿಮ ವಾಗುತ್ತದೆ. ಈಗ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿದೆ.


ಗೊಂದಲ ಹೆಚ್ಚಿಸಿ ಸಮಾಜವನ್ನು ದಿಕ್ಕು ತಪ್ಪಿಸುವ ಯತ್ನ

ಬೆಂಗಳೂರು: ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಸರ್ಕಾರ ಮತ್ತಷ್ಟು ಗೊಂದಲ ಹೆಚ್ಚಿಸಿ, ಸಮಾಜವನ್ನು ದಿಕ್ಕು ತಪ್ಪಿಸುವ ಯತ್ನ ಮಾಡಿದೆ ಎಂದು ಶ್ರೀ ಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು ತಿಳಿಸಿದ್ದಾರೆ.

ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲದಿದ್ದರೂ ಅನಗತ್ಯ ಆಸಕ್ತಿ ವಹಿಸಿ ಧರ್ಮದಲ್ಲಿ ಗೊಂದಲ ಮೂಡಿಸುವ ಯತ್ನ ಮಾಡಿದೆ. ಧರ್ಮದಲ್ಲಿ ಕೆಲ ತಾತ್ವಿಕ ಭಿನ್ನಾಭಿಪ್ರಾಯಗಳು ಈ ಹಿಂದಿನಿಂದ ಇದ್ದವು. ಆದರೆ, ಒಬ್ಬರನ್ನೊಬ್ಬರು ದ್ವೇಷಿಸುವ ಪರಿಸ್ಥಿತಿ ನಿರ್ವಣಗೊಂಡಿ ರಲಿಲ್ಲ. ಇದೀಗ ಸರ್ಕಾರ ಪರಸ್ಪರರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದೆ. ಅಷ್ಟಕ್ಕೂ ಸರ್ಕಾರ ರಚಿಸಿರುವ ತಜ್ಞರ ಸಮಿತಿಯೇ ಸ್ವತಃ ವರದಿ ಸಲ್ಲಿಕೆಗೆ 6 ತಿಂಗಳ ಅವಧಿ ಬೇಕು ಎಂದು ಹೇಳಿತ್ತು. ಆದರೆ, ಕೇವಲ ಎರಡೇ ತಿಂಗಳಲ್ಲಿ ವರದಿ ನೀಡುವ ಮೂಲಕ ಅನುಮಾನ ಮೂಡಿಸಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿಗಳು ಎರಡೂ ಬಣಗಳು ಒಂದಾಗಿ ಬಂದರೆ ಮಾತ್ರ ಶಿಫಾರಸು ಮಾಡುವುದಾಗಿ ಹೇಳಿದ್ದರು. ಇಷ್ಟಾಗಿಯೂ ಸಿಎಂ ತಮ್ಮ ಮಾತನ್ನು ತಾವೇ ಮುರಿದು ನಿರ್ಣಯ ಕೈಗೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಶ್ರೀ ಶೈಲ ಜಗದ್ಗುರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಪ್ರತ್ಯೇಕ ಧರ್ಮದ ಬಗ್ಗೆ ತಟಸ್ಥ ನಿಲುವು ತಾಳಬೇಕಿತ್ತು

ಬೆಂಗಳೂರು: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಸರ್ಕಾರ ತಟಸ್ಥ ನಿಲುವು ತಾಳಬೇಕಿತ್ತು ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

ಪ್ರತ್ಯೇಕ ಧರ್ಮದ ಗೊಂದಲಗಳಿಗೆ ಸಂಬಂಧಿಸಿದಂತೆ ಸರ್ಕಾರ ತಜ್ಞರ ಸಮಿತಿ ರಚಿಸಿ, ವರದಿ ತರಿಸಿಕೊಂಡಿತ್ತು. ತಜ್ಞರಲ್ಲಿ ಐವರು ಲಿಂಗಾಯತ ಪರ ಎಂದು ಬಿಂಬಿಸಿಕೊಂಡವರಿದ್ದಾರೆ. ಹೀಗಿರುವಾಗ ಅವರಿಂದ ವಸ್ತುನಿಷ್ಠ ವರದಿ ಸಲ್ಲಿಸುವುದು ಸಾಧ್ಯವಿಲ್ಲ. ಸರ್ಕಾರ ರಚಿಸಿರುವ ಸಮಿತಿಯೇ ಅವೈಜ್ಞಾನಿಕವಾಗಿದೆ. ಸರ್ಕಾರ ಪೂರ್ವಗ್ರಹ ಪೀಡಿತವಾಗಿ ಕೆಲವರ ಮಾತಿಗೆ ಬೆಲೆ ನೀಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದ್ದು, ಅಂತಿಮ ತೀರ್ಪಿಗೆ ಸರ್ಕಾರ ಬದ್ಧವಾಗಿರಬೇಕು ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಲಾಗಿದೆ. ಇಷ್ಟಾಗಿಯೂ ಸರ್ಕಾರ ತರಾತುರಿಯ ನಿರ್ಧಾರ ಕೈಗೊಂಡಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಈಗಾಗಲೇ ಪಂಚಪೀಠದ ಜಗದ್ಗುರುಗಳು, ವಿರಕ್ತ ಪರಂಪರೆಯ ನಿರಂಜನ ಜಗದ್ಗುರುಗಳು, ಸಾವಿರಾರು ಮಠಾಧೀಶರು ಮತ್ತು ಲಕ್ಷಾಂತರ ಭಕ್ತರು ಸಮಾವೇಶಗೊಂಡು ವೀರಶೈವ-ಲಿಂಗಾಯತ ಒಂದೇ ಎಂಬ ಸಂದೇಶ ಸಾರಿದ್ದಾರೆ. ಜತೆಗೆ ಮುಖ್ಯಮಂತ್ರಿಗಳನ್ನು ಸ್ವತಃ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶತಾಯುಷಿಗಳಾದ ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮಿಗಳು ವೀರಶೈವ- ಲಿಂಗಾಯತ ಒಂದೇ ಎಂಬ ಲಿಖಿತ ಸಂದೇಶ ನೀಡಿದ್ದರೂ ಸರ್ಕಾರಕ್ಕೆ ಈ ಗೊಂದಲದ ನಿರ್ಣಯ ಕೈಗೊಳ್ಳುವ ಅವಶ್ಯಕತೆ ಇರಲಿಲ್ಲ ಎಂದು ಕಾಶಿ ಜಗದ್ಗುರುಗಳು ಅಭಿಪ್ರಾಯ ಪಟ್ಟಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಇದೇ ರೀತಿಯ ಶಿಫಾರಸು ಮಾಡಿದಾಗ ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಅದರ ಅರಿವಿಲ್ಲದೆ ಸರ್ಕಾರ ತುಂಬ ಆತುರದ ನಿರ್ಧಾರ ಕೈಗೊಂಡಿದೆ. ಒಗ್ಗಟ್ಟಾಗಿದ್ದ ಸಮಾಜವನ್ನು ಲಿಂಗಾಯತ, ವೀರಶೈವ-ಲಿಂಗಾಯತ ಹಾಗೂ ಬಸವ ತತ್ವ ಅನುಯಾಯಿ ಎಂಬಂತೆ ಮೂರು ಭಾಗವನ್ನಾಗಿ ವಿಂಗಡಿಸಿದೆ. ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿದಾಗ ಒಟ್ಟಾಗಿ ಬರುವಂತೆ ಹೇಳಿದ್ದ ಸಿಎಂ ಮಾತಿಗೆ ತಪ್ಪಿದ್ದಾರೆ. ರಾಜ್ಯದಲ್ಲಿ 3000 ಮಠಗಳಿವೆ. ತಜ್ಞರ ಸಮಿತಿ ಯಾವುದೇ ಮಠಕ್ಕೆ ಭೇಟಿ ನೀಡಲಿಲ್ಲ, ರಾಜ್ಯದಲ್ಲಿ ಪ್ರವಾಸ ಮಾಡಲಿಲ್ಲ. ರಾಷ್ಟ್ರೀಯ ವೀರಶೈವ ಮಠಾಧೀಶರ ವೇದಿಕೆ ಈಗ ಅಸ್ತಿತ್ವಕ್ಕೆ ಬಂದಿದೆ. ರ್ಚಚಿಸಿ ಮುಂದಿನ ನಿರ್ಧಾರ ಮಾಡುತ್ತೇವೆ.

– ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಉಜ್ಜಯಿನಿ ಮಠ

Leave a Reply

Your email address will not be published. Required fields are marked *

Back To Top