ಚುನಾವಣೆ ಬಳಿಕ ಬಿಜೆಪಿಯಿಂದ ಮತ್ತೇ ಅಪರೇಷನ್ ಕಮಲ-ಸತೀಶ ಜಾರಕಿಹೊಳಿ

ಬೆಳಗಾವಿ: ಲೋಕಸಭಾ ಚುನಾವಣೆ ಮುಗಿದ ಬಳಿಕ ಬಿಜೆಪಿ ಮುಖಂಡರು ಮತ್ತೊಮ್ಮೆ ಅಪರೇಷನ್ ಕಮಲ ಮಾಡುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಈಗಾಗಲೇ ಭಾರತೀಯ ಜನತಾ ಪಕ್ಷದ ಮುಖಂಡರು, ಅಪರೇಷನ್ ಕಮಲ ಮಾಡಲು ಹೋಗಿ ಮುಖಭಂಗ ಅನುಭವಿಸಿದ್ದಾರೆ. ಆದರೂ ಕೂಡ ಮತ್ತೇ ಅಪರೇಷನ್ ಕಮಲ ನಡೆಸುವ ಸಾಧ್ಯತೆಯಿದೆ ಎಂದರು. ಬಿಜೆಪಿಯಲ್ಲಿ ಅಸಮಾಧಾನ ಇದ್ದಾಗ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ನಮ್ಮ ಪಕ್ಷಕ್ಕೆ ಬರುತ್ತಿರಾ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ಸ್ವಾಭಾವಿಕವಾಗಿ ಕೇಳಿರಬಹುದು. ಪಕ್ಷಗಳಲ್ಲಿ ಅಸಮಾಧಾನವಿದ್ದಾಗ ಈ ರೀತಿಯಾಗಿ ಕೇಳುವುದು ಸಹಜವಾಗಿರುತ್ತದೆ. ಅದನ್ನೇ ದೊಡ್ಡದು ಮಾಡುವ ಅಗತ್ಯವಿಲ್ಲ ಎಂದರು.

ಚುನಾವಣೆಯಿಂದ ತಟಸ್ಥ: ಕಳೆದ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಕ್ಷ್ಮೀ ಹೆಬ್ಬಾಳಕರ ಅವರ ಪರವಾಗಿ ಎಲ್ಲ ವಿಧಾನ ಸಭೆ ಕ್ಷೇತ್ರಗಳಲ್ಲಿ ರಮೇಶ ಜಾರಕಿಹೊಳಿ ಅವರು ಪ್ರಚಾರ ಮಾಡಿದ್ದರು. ಆದರೆ ಈ ಬಾರಿ ರಮೇಶ ಅವರು ತಟಸ್ಥ ಉಳಿಯಬಹುದು ಎಂದರು. ಇಲ್ಲದಿದ್ದರೇ ಗೋಕಾಕ ವಿಧಾನಸಭೆ ಕ್ಷೇತ್ರದಲ್ಲಿ ಮಾತ್ರ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಬಹುದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಡೈರಿ ಮುಚ್ಚಿ ಹಾಕುವ ಪ್ರಯತ್ನ

ಬಿಜೆಪಿಯವರು ಆದಾಯ ತೆರಿಗೆ ಅಧಿಕಾರಿಗಳ ಮೂಲಕ ಡೈರಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸತೀಶ ಜಾರಕಿಹೊಳಿ ಆರೋಪಿಸಿದ್ದಾರೆ. ಅದು ಕಾಂಗ್ರೆಸ್ ಡೈರಿಯಲ್ಲ. ಐಟಿದಾಳಿಯಾಗಿದ್ದ ಸಂದರ್ಭದಲ್ಲಿ ಪತ್ತೆಯಾಗಿರುವ ಡೈರಿಯಾಗಿದೆ. ಈಗಾಗಲೇ ಒಂದು ಡೈರಿ ರಿಪ್ಲೇಕ್ಟ್ ಆಗಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ.

ಬಿಎಸ್‌ವೈ ಸಂಸ್ಕೃತಿ ಬಹಿರಂಗ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವರು ಇನ್ನೂ ಬಚ್ಛಾ ಇದ್ದಾರೆ ಎಂದು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ನೋಡಿದರೇ, ಇದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಸಂಸ್ಕೃತಿಯನ್ನು ತೋರಿಸುತ್ತಿದೆ. ಇದರಿಂದ ಬಿಎಸ್‌ವೈ ಅವರ ಪ್ರಬುದ್ಧತೆ, ಸಂಸ್ಕೃತಿ ಬಹಿರಂಗಗೊಂಡಿದೆ ಎಂದು ಸಚಿವ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ.