ನೀಡಿದ ಭರವಸೆ ಈಡೇರಿಸದಿದ್ದರೆ ನನ್ನ ಮಗನ ಬಟ್ಟೆ ಹರಿಯಿರಿ ಎಂದ ಮುಖ್ಯಮಂತ್ರಿ!

ಧಾನೊರಾ: ನಾನು ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ನನ್ನ ಮಗನ ಬಟ್ಟೆಗಳನ್ನು ಹರಿಯಿಸಿ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ ನಾಥ್‌ ಜನತೆಗೆ ತಿಳಿಸಿದ್ದಾರೆ.

ಛಿಂದ್ವಾರ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರನನ್ನು ಕಣಕ್ಕಿಳಿಸಿರುವ ಅವರು, ಈ ಕ್ಷೇತ್ರದೊಂದಿಗೆ ನನಗೆ 40 ವರ್ಷಗಳ ನಂಟಿದೆ, ಛಿಂದ್ವಾರ ಲೋಕಸಭಾ ಕ್ಷೇತ್ರದ ಜನತೆಯ ಸೇವೆಯನ್ನು ಮಾಡುವ ಜವಾಬ್ದಾರಿಯನ್ನು ತನ್ನ ಮಗನಿಗೆ ಒಪ್ಪಿಸುತ್ತಿದ್ದೇನೆ. ನಾನು ಮಧ್ಯಪ್ರದೇಶದತ್ತ ಪೂರ್ತಿ ಗಮನಗರಿಸಬಹುದಾಗಿ ಹೇಳಿದ್ದಾರೆ.

ನಾನು ಎಲ್ಲಿಯೇ ಇದ್ದರೂ ಕೂಡ ಅದು ನೀವು ನೀಡಿದ ಪ್ರೀತಿ ಮತ್ತು ಬಲದಿಂದ ಸಾಧ್ಯ. ನಕುಲ್‌ ಇಂದು ಇಲ್ಲಿರದಿರಬಹುದು ಆದರೆ ಅವನು ನಿಮ್ಮ ಸೇವೆಯನ್ನು ಮಾಡುತ್ತಾನೆ. ನಾನು ಅವನಿಗೆ ಜವಾಬ್ದಾರಿಯನ್ನು ನೀಡಿದ್ದೇನೆ. ಒಂದು ವೇಳೆ ನೀಡಿದ ಭರವಸೆಗಳನ್ನು ಈಡೇರಿಸದಿದ್ದರೆ ಅವನ ಬಟ್ಟೆಗಳನ್ನು ಹರಿಯಿಸಿ ಎಂದು 72 ವರ್ಷದ ಕಾಂಗ್ರೆಸ್‌ ನಾಯಕ ಸ್ಥಳೀಯರಿಗೆ ತಿಳಿಸಿದರು.

ಚಿನ್ನವಾಡ ಜಿಲ್ಲೆಯ ಧಾನೋರಾ ಗ್ರಾಮದಲ್ಲಿ ನಡೆದ ಚುನಾವಣೆ ರ್ಯಾಲಿಯಲ್ಲಿ ಶನಿವಾರ ಮಾತನಾಡಿದ ಅವರು, ನಾವು ಹೊಸ ಪ್ರಯಾಣವನ್ನು ಶುರುಮಾಡಿದ್ದೇವೆ ಮತ್ತು ಇತಿಹಾಸ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.

ಸುಮಾರು 9 ಅವಧಿಗೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಇದೀಗ ತಮ್ಮ ಪುತ್ರನಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 26 ಕ್ಷೇತ್ರಗಳಲ್ಲಿ ಜಯ ಸಾಧಿಸಿದರೆ, ಕಾಂಗ್ರೆಸ್‌ ಕೇವಲ ಮೂರು ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. (ಏಜೆನ್ಸೀಸ್)