ಕಾಂಗ್ರೆಸ್‌ ತೊರೆದ ಕೆಲವೇ ಗಂಟೆಗಳಲ್ಲಿ ಶಿವಸೇನೆ ಸೇರ್ಪಡೆಯಾದ ಪ್ರಿಯಾಂಕ ಚತುರ್ವೇದಿ

ನವದೆಹಲಿ: ಕಾಂಗ್ರೆಸ್‌ನಲ್ಲಿ ಗೂಂಡಾಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಪಕ್ಷ ತೊರೆದ ಮಾಜಿ ಎಐಸಿಸಿ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅಧಿಕೃತವಾಗಿ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಟ್ವೀಟ್‌ ಮೂಲಕ ರಾಜೀನಾಮೆ ಪತ್ರ ರವಾನಿಸಿದ ಕೆಲವೇ ಗಂಟೆಗಳಲ್ಲಿಯೇ ಪ್ರಿಯಾಂಕ ಚತುರ್ವೇದಿ ಅವರು ಪಕ್ಷದ ಮುಖ್ಯಸ್ಥ ಉದ್ಧವ್​​ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಹಕ್ಕುಗಳ ಪರವಾಗಿ ನಿಲ್ಲದ ರಾಜಕೀಯ ಪಕ್ಷವೊಂದಕ್ಕೆ ನನ್ನ ಜೀವನದ 10 ವರ್ಷಗಳನ್ನು ನೀಡಿದ್ದು ನನಗೆ ನೋವುಂಟು ಮಾಡಿದೆ. ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಗೆಲ್ಲಿಸಲು ಶ್ರಮಿಸುತ್ತೇನೆ. ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಉದ್ಧವ್​​ ಠಾಕ್ರೆ ಅವರಿಗೆ ಧನ್ಯವಾದ ಎಂದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್‌ ಬಯಸಿದ್ದು ನಿಜ. ಆದರೆ, ಇದೊಂದೇ ಕಾರಣಕ್ಕಾಗಿ ನಾನು ಪಕ್ಷವನ್ನು ತೊರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ರಫೇಲ್‌ ಡೀಲ್‌ ಕುರಿತಾಗಿ ಮಥುರಾದಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿದ್ದ ವೇಳೆ ಸ್ಥಳೀಯ ಕಾಂಗ್ರೆಸ್‌ ನಾಯಕ ಪ್ರಿಯಾಂಕ ಚತುರ್ವೇದಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಈ ವೇಳೆ ಆತನನ್ನು ಕಾಂಗ್ರೆಸ್‌ ಪಕ್ಷದಿಂದ ತೆಗೆದುಹಾಕಿತ್ತು. ಆದರೆ, ಇದೀಗ ಚುನಾವಣೆ ಅಂಗವಾಗಿ ಸ್ಥಳೀಯ ಬೆಂಬಲಕ್ಕಾಗಿ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು.

ಇದರಿಂದಾಗಿ ಬೇಸರಗೊಂಡ ಪ್ರಿಯಾಂಕ, ಬೆವರು ಮತ್ತು ರಕ್ತವನ್ನು ನೀಡಿದವರಿಗೆ ಬೆಲೆ ನೀಡದೆ ಗೂಂಡಾಗಳಿಗೆ ಕಾಂಗ್ರೆಸ್‌ನಲ್ಲಿ ಮನ್ನಣೆ ನೀಡುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದು ಟ್ವೀಟ್‌ ಮಾಡಿದ್ದರು. (ಏಜೆನ್ಸೀಸ್)

One Reply to “ಕಾಂಗ್ರೆಸ್‌ ತೊರೆದ ಕೆಲವೇ ಗಂಟೆಗಳಲ್ಲಿ ಶಿವಸೇನೆ ಸೇರ್ಪಡೆಯಾದ ಪ್ರಿಯಾಂಕ ಚತುರ್ವೇದಿ”

Comments are closed.