ಲೋಕಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ಸ್ಪರ್ಧಿಸುವುದಿಲ್ಲ: ಆಪ್

ಲಖನೌ: ಆಮ್‌ ಆದ್ಮಿ ಪಕ್ಷದ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸ್ಪರ್ಧಿಸುವುದಿಲ್ಲ. ಆದರೆ ಅಲ್ಲಿಂದ ಪಕ್ಷದಿಂದ ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತದೆ ಎಂದು ಆಪ್‌ ತಿಳಿಸಿದೆ.

ಆಪ್‌ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್‌ ಸಿಂಗ್‌ ಮಾತನಾಡಿ, ತಮ್ಮ ರಾಜ್ಯಕ್ಕೆ ವಿಶೇಷ ಗಮನಹರಿಸುವ ಸಲುವಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಜ್ರಿವಾಲ್‌ ಅವರು ಸ್ಪರ್ಧಿಸುವುದಿಲ್ಲ. ಆಪ್‌ನಿಂದ ದೆಹಲಿ, ಪಂಜಾಬ್‌, ಹರಿಯಾಣ ಮತ್ತು ಗೋವಾ ರಾಜ್ಯಗಳ ಲೋಕಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.

ಉತ್ತರ ಪ್ರದೇಶದ ಕೆಲ ಸ್ಥಾನಗಳಲ್ಲಿ ಪಕ್ಷ ಸ್ಪರ್ಧಿಸಲಿದ್ದು, ಫೆಬ್ರವರಿ ಕೊನೆಯಲ್ಲಿ ಈ ಕುರಿತ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ವಾರಾಣಸಿ ಹೊರತುಪಡಿಸಿ ಪಕ್ಷವು ಪ್ರಬಲ ಸಂಘಟನೆಯಿರುವ ಪೂರ್ವ ಮತ್ತು ಪಶ್ಚಿಮ ಉತ್ತರ ಪ್ರದೇಶಗಳ ಸ್ಥಾನದಿಂದ ಸ್ಪರ್ಧಿಸಲಿದೆ ಎಂದರು.

ದೆಹಲಿಯಲ್ಲಿ ನಮ್ಮ ಪಕ್ಷವು ಶಿಕ್ಷಣ, ಆರೋಗ್ಯ, ರೈತರು, ವಿದ್ಯುತ್‌ ಮತ್ತು ಕುಡಿಯುವ ನೀರನ್ನು ಒದಗಿಸುವತ್ತ ಗಮನ ಹರಿಸಿದೆ. ಅದರಂತೆ ರಾಷ್ಟ್ರರಾಜಕಾರಣದಲ್ಲೂ ತೊಡಗಿಕೊಂಡರೆ ಎಲ್ಲರಿಗೂ ಶಿಕ್ಷಣ, ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉಚಿತ ಶಿಕ್ಷಣವನ್ನು ನೀಡುವುದು, ನಿರುದ್ಯೋಗ ನಿರ್ಮೂಲನೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸುವ ಕುರಿತು ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)