ಕೋಟೆನಾಡಿನಲ್ಲಿ ಶಾಂತಿಯುತ ಮತದಾನ

ಬಾಗಲಕೋಟೆ: ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ನಡೆದ ಸಾರ್ವತ್ರಿಕ ಚುನಾವಣೆ ಮತದಾನ ಸಣ್ಣಪುಟ್ಟ ಗಲಾಟೆ ಹೊರತು ಪಡಿಸಿ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ. 65.31 ರಷ್ಟು ಮತದಾನವಾಗಿದೆ.

ಶ್ರಾವಣ ಮಾಸದ ಸಂಪತ್ ಶುಕ್ರವಾರ ಹಿನ್ನೆಲೆ ಮತದಾರರು ಲಕ್ಷ್ಮಿ ಪೂಜೆಯಲ್ಲಿ ತಲ್ಲೀನರಾಗಿದ್ದರಿಂದಾಗಿ ಬೆಳಗ್ಗೆ ಮತದಾನದಲ್ಲಿ ಕೊಂಚ ಇಳಿಮುಖವಾಗಿತ್ತು. ಇದರಿಂದ ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಲಕ್ಷ್ಮಿ ಪೂಜೆ ಬಳಿಕ ಮಧ್ಯಾಹ್ನ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಿದರು.

ನಗರ ಸೇರಿ ಇಳಕಲ್ಲ, ಮುಧೋಳ, ರಬಕವಿ-ಬನಹಟ್ಟಿ, ಜಮಖಂಡಿ ನಗರಸಭೆ, ಗುಳೇದಗುಡ್ಡ, ಬಾದಾಮಿ, ಮಹಾಲಿಂಗಪುರ, ಹುನಗುಂದ, ತೇರದಾಳ ಪುರಸಭೆ, ಕೆರೂರ, ಬೀಳಗಿ ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ತಂಟೆ- ತಕಾರರು ಹೊರತು ಪಡಿಸಿದಲ್ಲಿ ಉಳಿದೆಡೆ ಬಹುತೇಕ ಶಾಂತಿಯುತ ಮತದಾನವಾಗಿದೆ.

ಎಲ್ಲ ನಗರ ಪ್ರದೇಶಗಳಲ್ಲಿ ಯುವಕ- ಯುವತಿಯರು, ಮಹಿಳೆಯರು, ವೃದ್ಧರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು. ಮತಗಟ್ಟೆ ಕೇಂದ್ರಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತದಾನ ಮಾಡುತ್ತಿರುವುದು ಕಂಡು ಬಂದಿತು. ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಮಧ್ಯಾಹ್ನ 1ರ ವೇಳೆಗೆ ಜಿಲ್ಲೆಯ 12 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 37.72 ಮತದಾನ ದಾಖಲಾಗಿತ್ತು. ಸಂಜೆ 4 ಗಂಟೆ ನಂತರ ಮತ್ತೆ ಬಿರುಸಿನ ಮತದಾನವಾಗಿದೆ.

ವೃದ್ಧರು, ಅಂಗವಿಕಲರು ಸಹಾಯಕರೊಂ ದಿಗೆ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿ ದರು. ಮತದಾರರನ್ನು ಮತ ಕೇಂದ್ರಕ್ಕೆ ಕರೆತರಲು ವಿವಿಧ ರಾಜಕೀಯ ಮುಖಂಡರು ಟಂಟಂ ಸೇರಿ ವಿವಿಧ ವಾಹನಗಳ ವ್ಯವಸ್ಥೆ ಮಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಶ್ರೀರಾಮುಲು ಅವರ ಪ್ರತಿಷ್ಠೆ ಕ್ಷೇತ್ರವೆಂದೇ ಹೆಸರಾದ ಬಾದಾಮಿ ಕ್ಷೇತ್ರದ ಎರಡು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ಚುನಾವಣೆಯೂ ಸಾಂಗವಾಗಿ ನಡೆಯಿತು.

ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಬಾದಾಮಿಯಲ್ಲಿ, ತೇರದಾಳ ಶಾಸಕ ಸಿದ್ದು ಸವದಿ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವೆ ಉಮಾಶ್ರೀ, ಶಾಸಕ ಗೋವಿಂದ ಕಾರಜೋಳ ಮುಧೋಳದಲ್ಲಿ, ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಬೀಳಗಿ ಪಟ್ಟ ಣದ ವಾರ್ಡ್ ನಂಬರ್ 10 ರಲ್ಲಿ ವಿಧಾನ ಪರಿ ಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಎಸ್.ಆರ್. ಪಾಟೀಲ ತಮ್ಮ ಹಕ್ಕು ಚಲಾಯಿಸಿದರು. ಅಲ್ಲದೆ, ಜಿಲ್ಲೆಯ ವಿವಿಧ ನಾಯಕರು ತಮ್ಮ ಹೆಸರಿರುವ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು.