More

    ಮತದಾನದ ಪ್ರಕ್ರಿಯೆ ಮೇಲೆ ನಿಗಾವಹಿಸಿ: ಸಾಮಾನ್ಯ ವೀಕ್ಷಕ ತನ್ಮಯ್ ಚಕ್ರಭರ್ತಿ ಸೂಚನೆ

    ಮಂಡ್ಯ: ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆಂದು ನೇಮಕವಾಗಿರುವ ಸೂಕ್ಷ್ಮವೀಕ್ಷಕರು ಮೇ.10ರಂದು ತಮಗೆ ನಿಯೋಜಿಸಲಾಗುವ ಮತಗಟ್ಟೆಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಯ ಬಗ್ಗೆ ನಿಗಾ ವಹಿಸಿ ಸಾಮಾನ್ಯ ವೀಕ್ಷಕರಿಗೆ ವರದಿ ನೀಡಬೇಕು ಎಂದು ಮಂಡ್ಯ ಮತ್ತು ನಾಗಮಂಗಲ ಕ್ಷೇತ್ರದ ಸಾಮಾನ್ಯ ವೀಕ್ಷಕ ತನ್ಮಯ್ ಚಕ್ರಭರ್ತಿ ತಿಳಿಸಿದರು.
    ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಮೇ.9ರಂದು ತಮಗೆ ನಿಯೋಜಿಸಲಾಗಿರುವ ಮತಗಟ್ಟೆಯ ಬಗ್ಗೆ ಮಾಹಿತಿ ದೊರೆಯುತ್ತದೆ. ತಾವು ಅಲ್ಲಿಗೆ ತೆರಳಿ 10ರಂದು ಬೆಳಗ್ಗೆ ಮತಯಂತ್ರದ ನೈಜ್ಯತೆಯ ಬಗ್ಗೆ ನಡೆಯುವ ಪರಿಶೀಲನಾ ಸಂದರ್ಭದಲ್ಲಿ ತಪ್ಪದೇ ಹಾಜರಿರಬೇಕು. ಮಾಕ್‌ಪೋಲ್ ಮುಗಿದ ನಂತರ ಮತಯಂತ್ರದಲ್ಲಿ ಕ್ಲೋಸ್ ಬಟನ್ ಅನ್ನು ಚುನಾವಣೆಗೆ ನಿಯೋಜಿಸಿರುವ ಸಿಬ್ಬಂದಿ ಒತ್ತಬೇಕು. ಅದನ್ನು ಸರಿಯಾಗಿ ವೀಕ್ಷಿಸಿ. ಮಾಕ್‌ಪೋಲ್ ಪ್ರಮಾಣ ಪತ್ರದಲ್ಲಿ ನಿಗದಿಪಡಿಸಿರುವವರು ಸಹಿ ಮಾಡಿರುವ ಬಗ್ಗೆ ಗಮನಿಸಬೇಕು. ಮತದಾರರ ರಿಜಿಸ್ಟರ್, ಮತದಾನ ಸಂಪೂರ್ಣವಾದ ನಂತರ ಮತಯಂತ್ರದಲ್ಲಿ ಚಲಾಯಿಸಿರುವ ಸಂಖ್ಯೆಯನ್ನು ಗಮನಿಸಬೇಕು ಎಂದರು.
    ಮಳವಳ್ಳಿ ಮತ್ತು ಮದ್ದೂರು ಕ್ಷೇತ್ರದ ಸಾಮಾನ್ಯ ವೀಕ್ಷಕ ಅಮಿತ್‌ಕುಮಾರ್ ಮಾತನಾಡಿ, ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಲ್ಲಿ ತಕ್ಷಣ ತಮ್ಮ ವ್ಯಾಪ್ತಿಗೆ ಬರುವ ವೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
    ಮೇಲುಕೋಟೆ ಮತ್ತು ಕೆ.ಆರ್.ಪೇಟೆ ಕ್ಷೇತ್ರದ ಸಾಮಾನ್ಯ ವೀಕ್ಷಕ ಅಮಿತ್ವ ಬ್ಯಾನರ್ಜಿ ಮಾತನಾಡಿ, ಮತದಾನ ಪ್ರಕ್ರಿಯೆ ಮುಗಿದ ನಂತರ ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಮತಗಟ್ಟೆವಾರು ವರದಿ ನೀಡಬೇಕು. ಕೆಲವು ಕಡೆ ಎರಡು ಮತಗಟ್ಟೆಗಳು ಒಟ್ಟಿಗೆ ಇದ್ದು, ಒಬ್ಬರೇ ಮೈಕ್ರೋ ಅಬ್ಸರ್‌ವರ್ ಇದ್ದಾಗ ಎರಡು ಪ್ರತ್ಯೇಕ ವರದಿ ನೀಡಬೇಕು ಎಂದರು.
    ಶ್ರೀರಂಗಪಟ್ಟಣ ಕ್ಷೇತ್ರದ ಸಾಮಾನ್ಯ ವೀಕ್ಷಕ ಡಾ.ಎಸ್.ಸುರೇಶ್‌ಕುಮಾರ್ ಮಾತನಾಡಿ, ಶ್ರೀರಂಗಪಟ್ಟಣದಲ್ಲಿ ಹೆಚ್ಚಿನ ಅಭ್ಯರ್ಥಿಗಳಿದ್ದಾರೆ. ಎರಡು ಬ್ಯಾಲೆಟ್ ಯುನಿಟ್‌ಗಳು ಇರುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಕಾರ್ಯನಿರ್ವಹಿಸುವವರು ಹೆಚ್ಚಿನ ಗಮನವಿಟ್ಟು ಕಾರ್ಯನಿರ್ವಹಿಸಬೇಕು ಎಂದರು.
    ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ತರಬೇತಿ ನೀಡಿದರು. ಜಿಲ್ಲಾಧಿಕಾರಿ ಡಾ.ಎಚ್.ಎಲ್.ಗೋಪಾಲಕೃಷ್ಣ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts