ತಿ.ನರಸೀಪುರ: ತಾಲೂಕಿನ ಹನುಮನಾಳು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸಿದ್ದೇಗೌಡ ಬಣ ಜಯಭೇರಿ ಬಾರಿಸಿದ್ದು, 6 ಜನ ಅವಿರೋಧವಾಗಿ ಆಯ್ಕೆಗೊಂಡರೆ, ಇನ್ನುಳಿದ ಆರು ಮಂದಿ ಬೆಂಬಲಿಗರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಿದ್ದೇಗೌಡ(ಹಿಂ.ವರ್ಗ ಮೀಸಲು), ಸವಿತಾ ಹಾಗೂ ಸುಮಿತ್ರಾ(ಮಹಿಳಾ ಮೀಸಲು), ಮಾಯಮ್ಮ(ಹಿಂ.ವರ್ಗ ಎ ಮಹಿಳೆ), ಕ್ಷೇತ್ರದಿಂದ ನಂಜುಂಡಪ್ಪ (ಪರಿಶಿಷ್ಟ ಜಾತಿ) ಹಾಗೂ ನಾಗರಾಜು (ಪರಿಶಿಷ್ಟ ವರ್ಗ) ಅವರು ಅವಿರೋಧವಾಗಿ ಆಯ್ಕೆಯಾದರೆ, ಚುನಾವಣೆಯಲ್ಲಿ ಸಿದ್ದೇಗೌಡ(277 ಮತ), ಭಾಸ್ಕರ್(279), ಶಂಕರ್(281), ಮಹೇಶ್(271), ನಾಗರಾಜು(273) ಹಾಗೂ ಗವಿ(273) ಆಯ್ಕೆಯಾದರು.
ಪ್ರತಿಸ್ಪರ್ಧಿಗಳಾಗಿದ್ದ ಚನ್ನಪ್ಪ(87), ನಿಂಗೇಗೌಡ(57), ಪುಟ್ಟಸ್ವಾಮಿ(66) ಹಾಗೂ ರಾಮಕೃಷ್ಣ(52) ಅವರು ಪರಾಭವಗೊಂಡರು.
ನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ಧಿ ಅಧಿಕಾರಿ ಅಸೀನಾ ಕಾರ್ಯನಿರ್ವಹಿಸಿದರು. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ವಿಜೇತರ ವಿಜಯೋತ್ಸವ ಆಚರಿಸಿದರು.
ಸಂಘದ ನೂತನ ನಿರ್ದೇಶಕ ಹನುಮನಾಳು ಸಿದ್ದೇಗೌಡ ಮಾತನಾಡಿ, ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಹಾಲು ಉತ್ಪಾದಕ ರೈತರು ಹಾಗೂ ಗ್ರಾಮಸ್ಥರ ಆಶಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರ, ಮಾರ್ಗದರ್ಶನದೊಂದಿಗೆ ಸಂಘದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿ ಅವುಗಳನ್ನು ಅನುಷ್ಠಾನಗೊಳಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಹಿರಿಯ ಮುಖಂಡ ಮರಿಗೌಡ ಮಾತನಾಡಿ, ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಮೈಮುಲ್‌ನಿಂದ ಸಂಘಕ್ಕೆ ದೊರಕುವ ಸವಲತ್ತುಗಳನ್ನು ಪ್ರಾಮಾಣಿಕವಾಗಿ ರೈತರಿಗೆ ತಲುಪಿಸಲು ಮುಂದಾಗಬೇಕು. ಹೆಚ್ಚು ಸಾಲ ನೀಡುವ ಮೂಲಕ ಹೈನುಗಾರಿಕೆಗೆ ಪೂರಕವಾದ ಆಯವ್ಯಯ ಕಲ್ಪಿಸಿಕೊಡಬೇಕೆಂದು ಸಲಹೆ ನೀಡಿದರು. ಮುಖ್ಯ ಕಾರ್ಯನಿರ್ವಾಣಾಧಿಕಾರಿ ಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.