ಜ. 2ಕ್ಕೆ ಗ್ರಾಪಂ ಚುನಾವಣೆ

ಶಿವಮೊಗ್ಗ: ಜಿಲ್ಲೆಯ 8 ಗ್ರಾಪಂಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ 10 ಸದಸ್ಯ ಸ್ಥಾನಕ್ಕೆ 2019ರ ಜ 2ರಂದು ಚುನಾವಣೆ ನಿಗಧಿಪಡಿಸಿ ಜಿಲ್ಲಾ ಚುನಾವಣಾಧಿಕಾರಿ ಕೆ..ದಯಾನಂದ್ ವೇಳಾಪಟ್ಟಿ ಪ್ರಕಟಿಸಿದ್ದಾರೆ.

ಶಿವಮೊಗ್ಗ ತಾಲೂಕಿನ ಮೇಲಿನಹನಸವಾಡಿಯ ಮೂರು, ಭದ್ರಾವತಿಯ ಮೈದೊಳಲು, ಸನ್ಯಾಸಿಕೊಡುಮಗ್ಗೆ, ಎಮ್ಮಹಟ್ಟಿ ಮತ್ತು ಕಂಬದಾಳ್ ಹೊಸೂರು ಗ್ರಾಪಂನ ತಲಾ ಒಂದು, ತೀರ್ಥಹಳ್ಳಿಯ ಬಿದರಗೋಡು, ಹೊಸನಗರದ ಹೊಸೂರು ಸಂಪೆಕಟ್ಟೆ ಮತ್ತು ಕರಿಮನೆ ಗ್ರಾಮಪಂಚಾಯತಿಗಳ ತಲಾ ಒಂದು ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಏಳನೇ ಬಾರಿಗೆ ಅಧಿಸೂಚನೆ: ಶಿವಮೊಗ್ಗ ತಾಲೂಕಿನ ಮೇಲಿನಹನಸವಾಡಿ ಗ್ರಾಪಂನ ಮೂರು ಕ್ಷೇತ್ರಗಳು ಹಾಗೂ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಪಂನ ಬಾಳೆಹಳ್ಳಿ ಕ್ಷೇತ್ರಕ್ಕೆ ಈಗ ಆರನೇ ಬಾರಿಗೆ ಅಧಿಸೂಚನೆ ಹೊರಡಿಸಲಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆ ವೇಳೆ ಮೀಸಲಾತಿ ನಿಗದಿಯಲ್ಲಿ ಲೋಪವಾಗಿದೆ ಎಂದು ಆರೋಪಿಸಿದ್ದ ಸ್ಥಳೀಯರು ಈ ನಾಲ್ಕು ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿರಲಿಲ್ಲ.

ಅಂದಿನಿಂದ ಇದುವರೆಗೆ ಆರು ಬಾರಿ ಉಪಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದರೂ ಯಾರೊಬ್ಬರೂ ನಾಮಪತ್ರ ಸಲ್ಲಿಸದೆ ಕ್ಷೇತ್ರಗಳು ಖಾಲಿ ಉಳಿದಿವೆ. ಇದೀಗ ಆರನೇ ಬಾರಿ ಅಧಿಸೂಚನೆ ಹೊರಡಿಸಿದ್ದು, ಈ ಬಾರಿಯಾದರೂ ಚುನಾವಣೆ ನಡೆಯುವುದೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ನಾನಾ ಕಾರಣಗಳಿಂದ ತೆರವಾಗುವ ಗ್ರಾಪಂ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಸುವ ಸಂದರ್ಭದಲ್ಲಿ ಮೇಲಿನ ಹನಸವಾಡಿ ಹಾಗೂ ಬಾಳೆಹಳ್ಳಿ ಕ್ಷೇತ್ರದ ಚುನಾವಣೆಗೂ ಅಧಿಸೂಚನೆ ಹೊರಡಿಸಲಾಗುತ್ತಿದೆ. ಆದರೆ ಸ್ಥಳೀಯರು ಒಮ್ಮತದ ತೀರ್ವನಕ್ಕೆ ಬಂದು ಯಾರೂ ನಾಮಪತ್ರ ಸಲ್ಲಿಕೆ ಮಾಡುತ್ತಿಲ್ಲ.

ಈಗಾಗಲೇ ಗ್ರಾಪಂ ಚುನಾವಣೆ ನಡೆದು ಮೂರು ವರ್ಷ ಕಳೆದಿವೆ. ಇನ್ನು ಎರಡು ವರ್ಷಗಳಲ್ಲಿ ಸಾರ್ವತ್ರಿಕ ಚುನಾವಣೆ ಬರುತ್ತದೆ. ಈ ಹಿನ್ನೆಲೆಯಲ್ಲಿ ಮೇಲಿನ ಹನಸವಾಡಿ ಹಾಗೂ ಬಾಳೆಹಳ್ಳಿ ಕ್ಷೇತ್ರದಲ್ಲಿ ಸಾರ್ವಜನಿಕರು ಯಾವ ತೀರ್ವನಕ್ಕೆ ಬರುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

  • ಡಿ. 17ರಂದು ಅಧಿಸೂಚನೆ ಪ್ರಕಟ
  • ಡಿ. 20 ನಾಮಪತ್ರ ಸಲ್ಲಿಕೆಗೆ ಕಡೇ ದಿನ
  • ಡಿ. 21 ನಾಮಪತ್ರಗಳ ಪರಿಶೀಲನೆ
  • ಡಿ. 24 ನಾಮಪತ್ರ ವಾಪಸ್​ಗೆ ಕಡೇ ದಿನ
  • . 2 ಮತದಾನ
  • . 4 ತಾಲೂಕು ಕೇಂದ್ರಗಳಲ್ಲಿ ಮತ ಎಣಿಕೆ

ಮದ್ಯ ಮಾರಾಟ ನಿಷೇಧಡಿ 17 ರಿಂದ ಜ 4ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಈ ವೇಳೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಮದ್ಯ ಮಾರಾಟ, ಸಂಗ್ರಹ ಹಾಗೂ ಸಾಗಾಟ ನಿಷೇಧಿಸಲಾಗಿದೆ. ಈ ಅವಧಿಯಲ್ಲಿ ಎಲ್ಲಾ ಮದ್ಯದ ಅಂಗಡಿ ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿ ಮೊಹರು ಮಾಡಿ ಅದರ ಕೀಗಳನ್ನು ಸಂಬಂಧಿಸಿದ ತಹಶೀಲ್ದಾರ್​ಗೆ ನೀಡಬೇಕು ಎಂದು ಜಿಲ್ಲಾಚುನಾವಣಾಧಿಕಾರಿ ಕೆ..ದಯಾನಂದ್ ತಿಳಿಸಿದ್ದಾರೆ.

ಹೊಳಲೂರು ಎಪಿಎಂಸಿ ಕ್ಷೇತ್ರಕ್ಕೆ ಚುನಾವಣೆ: ಶಿವಮೊಗ್ಗ ಎಪಿಎಂಸಿ ಹೊಳಲೂರು ಕ್ಷೇತ್ರದ ಸದಸ್ಯ ಹನುಮಂತಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಜ 6ರಂದು ಚುನಾವಣೆ ನಡೆಯಲಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕೃಷಿಕ ಕ್ಷೇತ್ರದ ಚುನಾವಣೆಗೆ ಡಿ 18 ರಿಂದ 24ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದು. ಡಿ 26ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಡಿ 28 ಕಡೇ ದಿನ. 6ರ ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, 8ರ ಬೆಳಗ್ಗೆ 8 ರಿಂದ ಮತ ಎಣಿಕೆ ನಡೆಯಲಿದೆ.