ನಮೋ ಭಾರತ ಕೇಸರಿ: ಲೋಕಸಮರದಲ್ಲಿ ಬಿಜೆಪಿ ತ್ರಿವಿಕ್ರಮ

ಮೋದಿ ಅಲೆ ಮರುಕಳಿಸಿದೆ. ಲೋಕಸಭೆ ಚುನಾವಣೆಯಲ್ಲೆದ್ದ ನಮೋ ಸುನಾಮಿಗೆ ವಿಪಕ್ಷಗಳು ತರಗೆಲೆಗಳಂತೆ ನೆಲಕಚ್ಚಿದರೆ ದೇಶದ ಇತಿಹಾಸದಲ್ಲಿ ಸತತ ಎರಡನೇ ಬಾರಿ ಬಿಜೆಪಿ ಪೂರ್ಣ ಬಹುಮತದ ದಾಖಲೆ ನಿರ್ವಿುಸಿದೆ. ಅತ್ತ ಇಂಗ್ಲೆಂಡ್​ನಲ್ಲಿ ಕ್ರಿಕೆಟ್ ಏಕದಿನ ವಿಶ್ವಕಪ್ ದಿನಗಣನೆ ನಡೆದಿರುವಂತೆ, ಇತ್ತ ಇಂಡಿಯಾ ಎಲೆಕ್ಷನ್ ಕಪ್​ನಲ್ಲಿ ಮೋದಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಒಟ್ಟು 542 ಕ್ಷೇತ್ರಗಳ ಪೈಕಿ 351ರಲ್ಲಿ ಗೆಲುವು ಸಾಧಿಸುವ ಮೂಲಕ ಎನ್​ಡಿಎ ಮೈತ್ರಿಕೂಟ ಮತ್ತೊಮ್ಮೆ ದೆಹಲಿಯ ಗದ್ದುಗೆ ಏರಿದರೆ, ಕಮಲ ಕಂಪನಕ್ಕೆ ಹಸ್ತವ್ಯಸ್ತಗೊಂಡ ಯುಪಿಎ ಹಾಗೂ ತೃತೀಯರಂಗದ ಅಧಿಕಾರದ ಕನಸು ನುಚ್ಚುನೂರಾಗಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಮೇಠಿಯಲ್ಲಿ ಸೋತಿರುವುದು ಭಾರೀ ಮುಖಭಂಗವಾದರೆ, ಐದಕ್ಕೂ ಹೆಚ್ಚು ರಾಜ್ಯಗಳು ಕಾಂಗ್ರೆಸ್​ವುುಕ್ತವಾಗಿರುವುದು ಹಸ್ತಪಡೆಗೆ ಆಘಾತ ತಂದಿದೆ. ವಯನಾಡಿನ ಗೆಲುವೊಂದೇ ರಾಹುಲ್​ಗೆ ಸಮಾಧಾನಕರ ಅಂಶ. ಇತ್ತ ಕರ್ನಾಟಕದಲ್ಲೂ ಬಿಜೆಪಿ ಭರ್ಜರಿ ಸಾಧನೆ ಮಾಡಿದ್ದು ಒಟ್ಟು 28 ಕ್ಷೇತ್ರಗಳ ಪೈಕಿ 25ರಲ್ಲಿ ಗೆದ್ದು ಬೀಗಿದೆ. ವಿಧಾನಸಭೆ ಉಪಸಮರದಲ್ಲಿ ಬಿಜೆಪಿ ಚಿಂಚೋಳಿಯನ್ನು ತೆಕ್ಕೆಗೆ ಹಾಕಿಕೊಂಡಿದೆ. ಈ ಸಾಧನೆ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಕಂಪನ ಎಬ್ಬಿಸಿದ್ದು, ದೋಸ್ತಿ ಸರ್ಕಾರದಲ್ಲಿ ಬಂಡಾಯ ಎದ್ದಿರುವ ಶಾಸಕರು ಬಿಜೆಪಿಯತ್ತ ಚಿತ್ತಹರಿಸುವಂತೆ ಮಾಡಿದೆ.

ಪ್ರಥಮಗಳು…

 • ನೆಹರು, ಇಂದಿರಾ ಗಾಂಧಿ ನಂತರ ಸತತ ಎರಡನೇ ಬಾರಿ ಪೂರ್ಣ ಬಹುಮತದ ದಾಖಲೆ ಬರೆದ ಬಿಜೆಪಿ
 • 52 ವರ್ಷಗಳ ಬಳಿಕ ಪಕ್ಷೇತರ ಅಭ್ಯರ್ಥಿಯಾಗಿ ಕರ್ನಾಟಕದಲ್ಲಿ ಗೆಲುವು ಸಾಧಿಸಿದ ಮೊದಲ ಮಹಿಳೆ ಸುಮಲತಾ
 • ಕಾಪೋರೇಟರ್ ಆಗಿ ಸಂಸತ್ ಪ್ರವೇಶಿಸಿದ ದಾಖಲೆ ಬರೆದ ಕೋಲಾರದ ಮುನಿಸ್ವಾಮಿ

ಮುಂದೇನು?

 • ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಹೆಸರು ಅಂತಿಮಗೊಳ್ಳುತ್ತದೆ
 • ಈ ಪ್ರಕ್ರಿಯೆ ಬಳಿಕ ಮೋದಿ ಬುಧವಾರ (29)ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ

ರಾಜ್ಯದ ಸಮ್ಮಿಶ್ರ ಸರ್ಕಾರ ಪತನ!?

ಲೋಕಸಭೆ ಚುನಾವಣೆಯಲ್ಲಿನ ಬಿಜೆಪಿ ಸಾಧನೆ ರಾಜ್ಯದ ಸಮ್ಮಿಶ್ರ ಸರ್ಕಾರದ ಪತನಕ್ಕೆ ವೇದಿಕೆಯಾಗುವುದೇ? ಎರಡು ದಿನದಲ್ಲಿ ರಾಜ್ಯ ಸರ್ಕಾರ ಪತನವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆ ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್​ನಿಂದ ಒಂದು ಕಾಲು ಹೊರಗಿಟ್ಟಿರುವ ಶಾಸಕ ರಮೇಶ್ ಜಾರಕಿಹೊಳಿ ಫಲಿತಾಂಶಕ್ಕೆ ಮೊದಲೇ ಕಾಂಗ್ರೆಸ್​ನ ಇತರ ಕೆಲವು ಬಂಡಾಯ ಶಾಸಕರನ್ನು ಭೇಟಿಮಾಡಿ ಕುತೂಹಲ ಕೆರಳಿಸಿದ್ದರು. ಇದೀಗ ಲೋಕಸಭೆ ಚುನಾವಣೆ ಜತೆಯಲ್ಲೇ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿರುವುದರಿಂದ ಬಿಜೆಪಿ ಮೇಲೆ ಕಾಂಗ್ರೆಸ್​ನ ಹಲವು ಬಂಡಾಯ ಶಾಸಕರ ದೃಷ್ಟಿಹರಿದಿರುವುದಾಗಿ ಹೇಳಲಾಗುತ್ತಿದೆ. ಒಂದೊಮ್ಮೆ ಕಾಂಗ್ರೆಸ್​ನ ಅತೃಪ್ತರು ಬಿಜೆಪಿಗೆ ಜಿಗಿದಲ್ಲಿ ಸರ್ಕಾರಕ್ಕೆ ಸಂಚಕಾರ ಎದುರಾಗುವುದು ನಿಶ್ಚಿತ.

ರಾಜ್ಯಕಾರಣದ ಸಾಧ್ಯಾಸಾಧ್ಯತೆ

 • ಲೋಕಸಭೆ ಚುನಾವಣೆಯಷ್ಟೇ ಕಾಂಗ್ರೆಸ್ ವರಿಷ್ಠರ ಗುರಿಯಾಗಿದ್ದರಿಂದ ರಾಜ್ಯ ಸರ್ಕಾರದ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದಿರಬಹುದು
 • ಸಚಿವ ಸ್ಥಾನ ಸಿಗದವರು, ಸೂಕ್ತ ಸ್ಥಾನಮಾನ ಬಯಸಿ ಬಿಜೆಪಿಯತ್ತ ಜಿಗಿಯಬಹುದು
 • ಹೀಗೆ ಬಂದವರಿಂದ ರಾಜೀನಾಮೆ ಕೊಡಿಸಿ ಬಹುಮತಕ್ಕೆ ಅಗತ್ಯವಾದ ಸಂಖ್ಯಾಬಲವನ್ನು ಕಮಲ ನಾಯಕರು ಹಿಗ್ಗಿಸಿಕೊಳ್ಳಬಹುದು
 • ಸರ್ಕಾರ ರಚನೆ ಬಳಿಕ ರಾಜೀನಾಮೆ ಕೊಟ್ಟ ಕ್ಷೇತ್ರದಲ್ಲೇ ಸ್ಪರ್ಧಿಸಲು ಅವಕಾಶ ನೀಡಿ ಟಿಕೆಟ್ ಕೊಡಿಸಬಹುದು

ಬಿಜೆಪಿ ಗೆದ್ದಿದ್ದೇಕೆ?

 • ಭ್ರಷ್ಟಾಚಾರ ರಹಿತ ಮೋದಿ ಆಡಳಿತ, ಜನಪ್ರಿಯ ಯೋಜನೆಗಳು
 • ಪಾಕ್ ವಿರುದ್ಧದ ಸರ್ಜಿಕಲ್ ದಾಳಿ, ಉಗ್ರರ ಹುಟ್ಟಡಗಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎದೆತಟ್ಟಿ ನಿಂತದ್ದು
 • ಯುಪಿಎ, ಮಹಾಮೈತ್ರಿಕೂಟದಲ್ಲಿ ಪ್ರಧಾನಿ ಹುದ್ದೆಗೆ ಮೂಡದ ಒಮ್ಮತ

ವಿಪಕ್ಷಗಳು ಸೋತಿದ್ದೇಕೆ?

 • ಮೋದಿ ವಿರುದ್ಧ ಪ್ರಚಾರಕ್ಕೆ ಸಿಗದ ಗಂಭೀರ ವಿಷಯ
 • ಯುಪಿಎ, ಮಹಾಮೈತ್ರಿಕೂಟದ ವಿಚಾರದಲ್ಲಿನ ಗೊಂದಲ
 • ಆಡಳಿತ ವೈಫಲ್ಯಕ್ಕಿಂತ ಮೋದಿ ವಿರುದ್ಧ ವೈಯಕ್ತಿಕ ಟೀಕೆಗೆ ಮುಂದಾಗಿದ್ದು
 • ಬಿಜೆಪಿ ಕಾರ್ಯಕರ್ತರ ತಳಮಟ್ಟದ ಸಂಘಟನೆ

ಸಬ್ ಕಾ ಸಾಥ್+ಸಬ್ ಕಾ ವಿಕಾಸ್+ಸಬ್​ಕಾ ವಿಶ್ವಾಸ್=ವಿಜಯೀ ಭಾರತ್ ನಾವು ಒಟ್ಟಾಗಿ ಬೆಳೆಯೋಣ, ಒಟ್ಟಾಗಿ ಏಳ್ಗೆ ಹೊಂದೋಣ, ನಾವು ಒಟ್ಟಾಗಿ ಬಲಿಷ್ಠ ಮತ್ತು ಎಲ್ಲರನ್ನೂ ಒಳಗೊಂಡ ಭಾರತವನ್ನು ನಿರ್ವಿುಸೋಣ. ಭಾರತ ಮತ್ತೊಮ್ಮೆ ಗೆಲುವು ಕಂಡಿತು!

| ನರೇಂದ್ರ ಮೋದಿ ಪ್ರಧಾನಿ

ಗೆದ್ದವರು

 • ನರೇಂದ್ರ ಮೋದಿ-ವಾರಾಣಸಿ
 • ಅಮಿತ್ ಷಾ-ಗಾಂಧಿನಗರ
 • ರಾಹುಲ್ ಗಾಂಧಿ-ವಯನಾಡು
 • ಸೋನಿಯಾ ಗಾಂಧಿ-ರಾಯ್ಬರೇಲಿ
 • ಹೇಮಾಮಾಲಿನಿ-ಮಥುರಾ
 • ಡಿ.ವಿ.ಸದಾನಂದಗೌಡ-ಬೆಂಗಳೂರು ಉತ್ತರ
 • ಗೌತಮ್ ಗಂಭೀರ್- ಪೂರ್ವ ದೆಹಲಿ

ಬಿದ್ದವರು

 • ಎಚ್.ಡಿ.ದೇವೇಗೌಡ-ತುಮಕೂರು
 • ಮಲ್ಲಿಕಾರ್ಜುನ ಖರ್ಗೆ-ಕಲಬುರಗಿ
 • ವೀರಪ್ಪ ಮೊಯ್ಲಿ-ಚಿಕ್ಕಬಳ್ಳಾಪುರ
 • ಕೆ.ಎಚ್.ಮುನಿಯಪ್ಪ-ಕೋಲಾರ
 • ಮೆಹಬೂಬಾ ಮುಫ್ತಿ-ಅನಂತನಾಗ್(ಕಾಶ್ಮೀರ)

ಫಲಿತಾಂಶದ ಬಗ್ಗೆ ರ್ಚಚಿಸಲು ಇದು ಸಕಾಲವಲ್ಲ. ಜನಾದೇಶಕ್ಕೆ ತಲೆಬಾಗುವೆ. ಪ್ರಧಾನಿಗೆ ಗೌರವದ ನಮನ. ದೇಶದ ಹಿತ ಕಾಪಾಡುವಂತೆ ಅವರಿಗೆ ಮನವಿ ಮಾಡುವೆ.

| ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ

ಅಮೇಠಿಯಲ್ಲಿ ರಾಹುಲ್ ಸೋಲು

ಕಾಂಗ್ರೆಸ್​ನ ಪ್ರಧಾನಿ ಅಭ್ಯರ್ಥಿಯಾಗಿದ್ದ ರಾಹುಲ್ ಗಾಂಧಿ ಅಮೇಠಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋಲುಂಡರೆ ಕೇರಳದ ವಯನಾಡಲ್ಲಿ ದಾಖಲೆಯ ಜಯ ಕಂಡಿದ್ದಾರೆ.

ಪ್ರಮಾಣಕ್ಕೆ ಗಣ್ಯರ ಹಿಂಡು

ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೇರಿ ಸಾರ್ಕ್ ರಾಷ್ಟ್ರಗಳ ಪ್ರತಿನಿಧಿಗಳು(ಪಾಕ್ ಹೊರತುಪಡಿಸಿ) ಆಗಮಿಸುವ ಸಾಧ್ಯತೆ ಇದೆ.

ರಾಹುಲ್ ರಾಜೀನಾಮೆ?

ಕಾಂಗ್ರೆಸ್​ನ ಸೋಲಿನ ಹೊಣೆಹೊತ್ತಿರುವ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಅದರೆ ಈ ಅಭಿಪ್ರಾಯಕ್ಕೆ ಸೋನಿಯಾ ಸೇರಿ ಯಾರೂ ಬೆಂಬಲ ಸೂಚಿಸಿಲ್ಲವೆಂದು ತಿಳಿದುಬಂದಿದೆ.

ಬೆಂಗಳೂರು ಬಿಜೆಪಿ ಭದ್ರಕೋಟೆ

ಬೆಂಗಳೂರು ಬಿಜೆಪಿಯ ಭದ್ರಕೋಟೆ ಎಂಬುದು ಮತ್ತೆ ಸಾಬೀತಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿನ ಗೊಂದಲ, ವಿರೋಧದಿಂದಾಗಿ ಬೆಂಗಳೂರು ದಕ್ಷಿಣ ಕ್ಷೇತ್ರ ಈ ಬಾರಿ ಬಿಜೆಪಿ ಕೈತಪು್ಪವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿದ್ದವು. ಬೆಂಗಳೂರು ಉತ್ತರದಲ್ಲೂ ಆಡಳಿತ ವಿರೋಧಿ ಅಲೆಯಿಂದಾಗಿ ಡಿ.ವಿ.ಸದಾನಂದಗೌಡ ಮತ್ತೆ ಗೆಲ್ಲುವುದು ಅನುಮಾನ ಎಂದು ಹೇಳಲಾಗಿತ್ತು. ಇಷ್ಟಾದರೂ ಬಿಜೆಪಿ ಈ ಎರಡೂ ಕ್ಷೇತ್ರ ಉಳಿಸಿಕೊಂಡಿದೆ. ಬೆಂಗಳೂರು ಸೆಂಟ್ರಲ್​ನಲ್ಲಿ ಪಿ.ಸಿ.ಮೋಹನ್ ಕಷ್ಟಪಟ್ಟು ಗೆದ್ದಿದ್ದಾರೆ.