ಬೆಂಗಳೂರಿನಲ್ಲಿ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದ ಆಯುಧಗಳೆಷ್ಟು ಗೊತ್ತೇ?

ಬೆಂಗಳೂರು: ರಾಜಧಾನಿ ಬೆಂಗಳೂರು ವ್ಯಾಪ್ತಿಯ ಮೂರು ಲೋಕಸಭೆ ಕ್ಷೇತ್ರಗಳ ಚುನಾವಣೆ ಸಿದ್ಧತೆಗಳ ಕುರಿತು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​ ಮತ್ತು ಪೊಲೀಸ್​ ಆಯುಕ್ತ ಸುನೀಲ್​ ಕುಮಾರ್​ ಅವರು ಇಂದು ಸುದ್ದಿಗೋಷ್ಠಿ ನಡೆಸಿದರು. ಈ ವರೆಗೆ ಆಗಿರುವ ತಯಾರಿಗಳು ಮುಂದಿನ ಸಿದ್ಧತೆಗಳ ಕುರಿತು ಇಬ್ಬರೂ ಅಧಿಕಾರಿಗಳು ಮಾಹಿತಿ ನೀಡಿದರು.

ಕ್ರಿಮಿನಲ್​ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣು

ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮಾತನಾಡಿ,”ಬೆಂಗಳೂರು ವ್ಯಾಪ್ತಿಯ ಮೂರು ಕ್ಷೇತ್ರಗಳಿಗೆ ಡಿಸಿಪಿ ನೇತೃತ್ವದಲ್ಲಿ ಭದ್ರತೆ ನೀಡಲಾಗಿದೆ. ಐಪಿಎಸ್​ ಅಧಿಕಾರಿ ರಾಹುಲ್ ಅವರನ್ನು ಬೆಂಗಳೂರು ಕೇಂದ್ರಕ್ಕೆ, ಶಶಿಕುಮಾರ್​ ಅವರನ್ನು ಉತ್ತರ ಕ್ಷೇತ್ರಕ್ಕೆ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಣ್ಣ ಮಲೈ ಅವರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ನಾಗರಿಕರು ಪರವಾನಗಿ ಸಹಿತ ಶಸ್ತ್ರಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಹಿಂದಿರುಗಿಸಬೇಕು ಎಂದು ತಿಳಿಸಿದ ಸುನೀಲ್ ಕುಮಾರ್​, ಈ ವರೆಗೆ 7 ಸಾವಿರ ಆಯುಧಗಳನ್ನು ಹಿಂದಕ್ಕೆ ಪಡೆಯಲಾಗಿದೆ ಎಂದರು. ಅಲ್ಲದೆ, ಬೆಂಗಳೂರಿನಲ್ಲಿ ಒಟ್ಟಾರೆ 9 ಸಾವಿರ ಪರವಾನಗಿ ಸಹಿತ ಆಯುಧಗಳಿವೆ ಎಂದು ಮಾಹಿತಿ ನೀಡಿದರು.

ಈಗಾಗಲೇ ರೌಡಿಗಳ ಪರೇಡ್ ನಡೆಸಿ, ಅವರ ಚಟುವಟಿಕೆ ಮೇಲೆ ನಿಗಾ ಇಡಲಾಗಿದೆ. 5 ಸಾವಿರ ರೌಡಿಗಳ ಮೇಲೆ ಕಣ್ಣಿಡಲಾಗಿದೆ. ಪಶ್ಚಿಮ ವಲಯದಲ್ಲಿ ಒಬ್ಬ ವ್ಯಕ್ತಿಯನ್ನು ಗೂಂಡಾ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಬೆಂಗಳೂರು ನಗರ ಚುನಾವಣಾ ಅಧಿಕಾರಿ ಮಂಜುನಾಥ್ ಪ್ರಸಾದ್, ” ರಾಷ್ಟ್ರಪತಿಯವರು ಈಗಾಗಲೇ ಚುನಾವಣೆ ಅಧಿಸೂಚನೆ ಹೊರಡಿಸಿದ್ದಾರೆ. ಮೊದಲ ಹಂತದಲ್ಲಿ ಏ.18 ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಚುನಾವಣೆ ನಡೆಯಲಿದೆ. ಮೂರು ಕಡೆ ನಾಮಪತ್ರ ಸ್ವೀಕಾರ ಕಚೇರಿಗಳನ್ನು ತೆರೆರಯಲಾಗಿದೆ. ಕಚೇರಿಯ ನೂರು ಮೀಟರ್ ವ್ಯಾಪ್ತಿಯಲ್ಲಿ ವಾಹನಗಳಿಗೆ ನಿರ್ಬಂಧಿಸಲಾಗಿದೆ. ನಾಮಪತ್ರ ಸಲ್ಲಿಸಲು ಅಭ್ಯರ್ಥಿ ಸೇರಿದಂತೆ 5 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ನಾಮಪತ್ರದ ಜೊತೆ ನಮೂನೆ 26ರಲ್ಲಿ ಅಫಿಡವಿಟ್​ ಸಲ್ಲಿಸಬೇಕು. ಆಸ್ತಿ, ಕ್ರಿಮಿನಲ್ ಮೊಕದ್ದಮೆಗಳ ಮಾಹಿತಿ ಮತ್ತು ಕುಟುಂಬದವರ ಕೊನೆಯ ಐದು ವರ್ಷದ ಆದಾಯದ ಮಾಹಿತಿಯನ್ನು ಅಫಿಡವಿಟ್​ನಲ್ಲಿ ಸಲ್ಲಿಸಬೇಕು ಎಂದು ತಿಳಿಸಿದರು.

” ಅಭ್ಯರ್ಥಿಗಳು ತಮ್ಮ ವಿರುದ್ಧ ಇರುವ ಕ್ರಮಿನಲ್ ಪ್ರಕರಣಗಳ ಕುರಿತು ಮೂರು ಬಾರಿ ಪತ್ರಿಕೆಗಳಲ್ಲಿ ಹಾಗೂ ಟಿವಿಗಳಲ್ಲಿ ಜಾಹೀರಾತು ನೀಡಬೇಕು. ಚುನಾವಣೆಗೆ ಸ್ಪರ್ಧಿಸ ಬಯಸುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು 12,500 ರೂ. ಸಾಮಾನ್ಯ ವರ್ಗದ ಅಭ್ಯರ್ಥಿಗಳು 25 ಸಾವಿರ ರೂ.ಗಳ ಠೇವಣಿ ಇಡಬೇಕು ಎಂದು ತಿಳಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ತೇಜಸ್ವಿನಿ ಅನಂತ್​ಕುಮಾರ್​ ಅವರು ತಮ್ಮ ಸಾಮಾಜಿಕ ಸೇವಾ ಸಂಸ್ಥೆ ಅದಮ್ಯ ಚೇತನದ ಮೂಲಕ ಸಂಘ ಸಂಸ್ಥೆಗಳಿಗೆ ಆಹಾರ ಪೂರೈಕೆ ಮಾಡುತ್ತಿರುವ ಬಗ್ಗೆ ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ ಪ್ರತಿಕ್ರಿಯೆ ನೀಡಿದರು. ಈ ಬಗ್ಗೆ ಚುನಾವಣಾ ಆಯುಕ್ತರ ಬಳಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.