ಸಚಿವ ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿ: ಐಟಿ ಅಧಿಕಾರಿಗಳು ಎನ್ನುವುದಕ್ಕೆ ಪ್ರೂಫ್‌ ತೋರಿಸಿ ಎಂದ ಚುನಾವಣೆ ಅಧಿಕಾರಿಗಳು

ಹಾಸನ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸಚಿವ ಎಚ್.ಡಿ.ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಚುನಾವಣಾಧಿಕಾರಿಗಳು ಐಟಿ ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾರೆ.

ಮನೆಯೊಳಗೆ ಪರಿಶೀಲನೆ ವೇಳೆ ಬೆಲ್ ಮಾಡಿದ ಚುನಾವಣಾಧಿಕಾರಿಗಳು ಯಾರು ನೀವು? ಎಲ್ಲಿ ಐಡಿ ಕಾರ್ಡ್ ತೋರಿಸಿ ಎಂದು ಪ್ರಶ್ನಿಸಿ ನೀವು ಐಟಿ ಅಧಿಕಾರಿಗಳೇ ಎನ್ನುವುದಕ್ಕೆ ಪ್ರೂಫ್ ತೋರಿಸಿ ಎಂದು ಪ್ರಶ್ನಿಸಿದ್ದಾರೆ.
ಆಗ, ನೀವು ಚುನಾವಣಾಧಿಕಾರಿಗಳು ಅನ್ನೋದಕ್ಕೆ ಪ್ರೂಫ್ ತೋರಿಸಿ ಎಂದು ಐಟಿ ಅಧಿಕಾರಿಗಳು ಮರುಪ್ರಶ್ನೆ ಹಾಕಿದ್ದಾರೆ. ಆಗ ಚುನಾವಣಾಧಿಕಾರಿಗಳು ಕಾರಿನಲ್ಲಿದ್ದ ಐಡಿ ತಂದು ತೋರಿಸಿದ್ದಾರೆ. ಇತ್ತ ತಮ್ಮ ಕೊರಳಲ್ಲಿದ್ದ ಗುರುತಿನ ಚೀಟಿಯನ್ನು ಐಟಿ ಇಲಾಖೆ ಅಧಿಕಾರಿಗಳು ತೋರಿಸಿದ್ದಾರೆ.

ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಕಳೆದ ಐದು ದಿನದ ಹಿಂದೆ‌ ಹರದನಹಳ್ಳಿಯಲ್ಲಿ ಅಪರಿಚಿತರಿಬ್ಬರು ದಾಳಿ ಮಾಡಿದ್ದರು. ತಾವು ಚುನಾವಣಾ ಅಧಿಕಾರಿ ಹಾಗೂ ಐಟಿಯವರೆಂದು ಹೇಳಿ ಇಬ್ಬರು ದಾಳಿ ನಡೆಸಿದ್ದರು.

ಮೂರ್ನಾಲ್ಕು ದಿನಗಳ ಹಿಂದಷ್ಟೇ ಹರದನಹಳ್ಳಿ ಈಶ್ವರ ದೇವಾಲಯದ ಅರ್ಚಕನ ಮನೆ ಹಾಗೂ ದೇವಾಲಯವನ್ನು ಪರಿಶೀಲನೆ ಮಾಡಿದ್ದರು. ಆದರೆ, ಐಟಿ ತಮ್ಮ ಅಧಿಕಾರಿಗಳು ದಾಳಿ ನಡೆಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಬಳಿಕ‌ ಈ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದೇ ಅನುಮಾನದ ಮೇಲೆ‌‌ ಇಂದು ಐಟಿ ಅಧಿಕಾರಿಗಳಿಂದ ಚುನಾವಣೆ ಅಧಿಕಾರಿಗಳು ದಾಳಿ ಮಾಹಿತಿಯನ್ನು ಪಡೆದಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಹೇಮಂತ್‌ರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಐಟಿ ದಾಳಿ ದೃಢಪಡಿಸಲು ಚುನಾವಣಾಧಿಕಾರಿಗಳು ತಾಕೀತು ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)