ಮೆಸ್ಕಾಂ ಜನಸಂಪರ್ಕ ಸಭೆ ದಿಢೀರ್ ರದ್ದು

ಕಳಸ: ಸಾರ್ವಜನಿಕರ ಕುಂದು ಕೊರತೆ ಆಲಿಸಲು ಮೆಸ್ಕಾಂನಿಂದ ಏರ್ಪಡಿಸಿದ್ದ ಸಭೆಯನ್ನು ಚುನಾವಣೆಯ ನೆಪ ನೀಡಿ ದಿಢೀರ್ ರದ್ದುಗೊಳಿಸಿದ್ದರಿಂದ ಆಕ್ರೋಶಗೊಂಡ ಸಾರ್ವಜನಿಕರು ಅಧಿಕಾರಿಗಳು ಮತ್ತು ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು.

ಕಳಸ ಹೋಬಳಿ ವ್ಯಾಪ್ತಿಯ ಮೆಸ್ಕಾಂ ಜೆಇ ಶನಿವಾರ ಬೆಳಗ್ಗೆ 10ಕ್ಕೆ ಮೆಸ್ಕಾಂ ಕಚೇರಿ ಆವರಣದಲ್ಲಿ ಜನಸಂಪರ್ಕ ಸಭೆ ಆಯೋಜಿಸಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಹೋಬಳಿ ವ್ಯಾಪ್ತಿಯ ನೂರಾರು ಗ್ರಾಮಸ್ಥರು ತಮ್ಮ ಗ್ರಾಮಗಳ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಮೆಸ್ಕಾಂ ಕಚೇರಿ ಆವರಣದಲ್ಲಿ ಹಾಜರಿದ್ದರು.

ಆದರೆ 11ಗಂಟೆಯಾದರೂ ಜೆಇ ಸೇರಿ ಯಾವ ಅಧಿಕಾರಿಗಳೂ ಸ್ಥಳಕ್ಕೆ ಬಂದಿರಲಿಲ್ಲ. ಈ ಬಗ್ಗೆ ಕಚೇರಿಗೆ ವಿಚಾರಿಸಲು ಹೋದವರಿಗೆ ಶಾಕ್ ಕಾದಿತ್ತು. ಕಚೇರಿ ಗೋಡೆ ಮೇಲೆ ಚುನಾವಣಾ ನೀತಿ ಸಂಹಿತೆ ಕಾರಣ ಸಭೆ ರದ್ದು ಪಡಿಸಲಾಗಿದೆ ಎಂಬ ಬರಹ ಕಂಡು ಸಾರ್ವಜನಿಕರು ಕಚೇರಿ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಪಟ್ಟಣದ ಕೆಲ ವರ್ತಕರು ಮೆಸ್ಕಾಂ ಜೆಇಗೆ ಕರೆ ಮಾಡಲು ಮುಂದಾದರೂ ಜೆಇ ತಮ್ಮ ಮೊಬೈಲ್ ಸ್ವಿಚ್​ಆಫ್ ಮಾಡಿಕೊಂಡಿದ್ದರು.

ಗ್ರಾಪಂ ಸದಸ್ಯ ಹಿನಾರಿ ಸಂತೋಷ್, ಕಾಂಗ್ರೆಸ್ ಮುಖಂಡ ರಿಝ್ವಾನ್ ಮತ್ತಿತರರು ಇದ್ದರು.

ನೀತಿ ಸಂಹಿತೆ ನೆಪ ಹೇಳಿದ ಸಿಬ್ಬಂದಿ;ಮೂರು ತಿಂಗಳಿಗೊಮ್ಮೆ ಮೆಸ್ಕಾಂ ಜನಸಂಪರ್ಕ ಸಭೆ ನಡೆಸಬೇಕೆಂಬ ಸುತ್ತೋಲೆ ಇದ್ದರೂ ಕಳಸ ಹೋಬಳಿ ವ್ಯಾಪ್ತಿಯಲ್ಲಿ ಇದುವರೆಗೂ ಒಂದೂ ಸಭೆ ನಡೆಸಿಲ್ಲ. ಮೆಸ್ಕಾಂ ಅಧಿಕಾರಿಗಳು ಶನಿವಾರ ಜನಸಂಪರ್ಕ ಸಭೆ ನಡೆಸುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಿದ್ದರು. ಆದರೆ ಯಾವುದೇ ಮುನ್ಸೂಚನೆ ನೀಡದೆ ಸಭೆ ರದ್ದುಮಾಡಿದ್ದಾರೆ. ಸಿಬ್ಬಂದಿ ವಿಚಾರಿಸಿದರೆ ನೀತಿ ಸಂಹಿತೆ ನೆಪ ನೀಡುತ್ತಾರೆ ಎಂದು ದೂರಿದರು.

ಚುನಾವಣಾ ದಿನಾಂಕ ಘೊಷಣೆಯಾದ ನಂತರ ಸಭೆ ಇರುವ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ. ನೀತಿ ಸಂಹಿತೆ ಇರುವುದು ಅಧಿಕಾರಿಗಳಿಗೆ ಮೊದಲೇ ಗೊತ್ತಿರಲಿಲ್ಲವೇ? ಸಭೆ ರದ್ದಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಬಹುದಾಗಿತ್ತು ಎಂದು ಮೆಸ್ಕಾಂ ಕಚೇರಿ ಎದುರು ಜಮಾಯಿಸಿದ್ದ ನೂರಾರು ಗ್ರಾಮಸ್ಥರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.

ಸಭೆ ರದ್ದಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ತಿಳಿಯುತ್ತಿದ್ದಂತೆ ಮೆಸ್ಕಾಂ ಜೆಇ ದೂರವಾಣಿ ಮೂಲಕ ಮುಖಂಡರೊಂದಿಗೆ ಮಾತನಾಡಿ, ಚುನಾವಣೆ ಮುಗಿದ ಬಳಿಕ ಮೆಸ್ಕಾಂ ಜನಸಂಪರ್ಕ ಸಭೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಮೆಸ್ಕಾಂನಿಂದ ಮೊದಲ ಬಾರಿಗೆ ಜನಸಂಪರ್ಕ ಸಭೆ ನಡೆಸುವ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಲಾಗಿದೆ. ಆದರೆ ಶನಿವಾರ ನಿಗದಿಯಾಗಿದ್ದ ಸಭೆಯನ್ನು ಅಧಿಕಾರಿಗಳು ಮುನ್ಸೂಚನೆ ನೀಡದೆ ರದ್ದು ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಲು ಜೆಇ ಅವರ ಮೊಬೈಲ್ ಸ್ವಿಚ್​ಆಫ್ ಮಾಡಿದ್ದಾರೆ. ಸಭೆಯಲ್ಲಿ ಭಾಗವಹಿಸಲು ನೂರಾರು ಗ್ರಾಮಸ್ಥರು ತಮ್ಮ ಕೆಲಸ ಬಿಟ್ಟು ಬಂದಿದ್ದಾರೆ. ಇಲ್ಲಿನ ಮೆಸ್ಕಾಂ ಅಧಿಕಾರಿಗಳು ಮನಸೋ ಇಚ್ಛೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವರ್ತಕ ಟಿಟ್ಟು ಥಾಮಸ್ ಆರೋಪಿಸಿದ್ದಾರೆ.