*ಎರಡೂ ಜಿಲ್ಲೆ ಜಿಲ್ಲಾಧಿಕಾರಿಗಳ ಜಂಟಿ ಕರ್ತವ್ಯ
ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರದಲ್ಲಿ ಅಚ್ಚುಕಟ್ಟು ನಿರ್ವಹಣೆ ಮೂಲಕ ಚಿಕ್ಕಬಳ್ಳಾಪುರ ಹಾಗೂ ಗ್ರಾಮಾಂತರ ಜಿಲ್ಲಾಡಳಿತ ಸೈ ಎನಿಸಿಕೊಂಡಿದೆ.
ಪೊಲೀಸ್ ಭದ್ರತೆ ಜತೆಗೆ ಹೆಜ್ಜೆಹೆಜ್ಜೆಗೂ ಕಟ್ಟುನಿಟ್ಟಿನ ತಪಾಸಣೆ ಮೂಲಕ ಮತ ಎಣಿಕೆ ಕೇಂದ್ರದಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಎರಡೂ ಜಿಲ್ಲಾಡಳಿತ ಕಾರ್ಯನಿರ್ವಹಿಸಿದವು. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಜಂಟಿ ಕರ್ತವ್ಯದ ಮೂಲಕ ಚುನಾವಣಾ ಮತ ಎಣಿಕೆ ಕಾರ್ಯ ನಿರ್ವಹಿಸಿದರು. ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಚಿಕ್ಕಬಳ್ಳಾಪುರ ಎಸ್ಪಿ ಚುನಾವಣಾ ಕಾರ್ಯದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ಮತ ಎಣಿಕೆ ಕೇಂದ್ರವಾದ ಚಿಕ್ಕಬಳ್ಳಾಪುರ ಗಡಿಭಾಗದಲ್ಲಿನ ದೇವನಹಳ್ಳಿ ತಾಲೂಕು ವ್ಯಾಪ್ತಿಯ ನಾಗಾರ್ಜುನ ಕಾಲೇಜಿನಲ್ಲಿ ಮಂಗಳವಾರ ಮುಂಜಾನೆ 7.30ಕ್ಕೆ ಸ್ಟ್ರಾಂಗ್ ರೂಂ ತೆರೆಯಲಾಯಿತು.
ಚುನಾವಣಾ ಸಾಮಾನ್ಯ ವೀಕ್ಷಕರಾದ ನ್ಯಾಲಿ ಎಟೆ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಡಿಸಿ ಡಾ.ಎನ್.ಶಿವಶಂಕರ ಸಮ್ಮುಖದಲ್ಲಿ ಪ್ರತಿ ವಿಧಾನ ಸಭಾಕ್ಷೇತ್ರದ ಮತದಾನ ಪೆಟ್ಟಿಗೆ ಇರಿಸಲಾಗಿದ್ದ ಪ್ರತ್ಯೇಕ ಕೊಠಡಿಗಳನ್ನು ತೆರೆಯಲಾಯಿತು. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಮತದಾನದ ಕಾರಣ ಎರಡು ಹೆಚ್ಚುವರಿ ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು.
ಸೂರ್ಯೋದಯಕ್ಕೆ ಮುನ್ನ ದೌಡಾಯಿಸಿದ್ದ ಸಿಬ್ಬಂದಿ ಮಂಗಳವಾರ ಮುಂಜಾನೆ 4 ಗಂಟೆಯಷ್ಟರಲ್ಲೆ ಚುನಾವಣಾ ಸಿಬ್ಬಂದಿ ಮತ ಎಣಿಕೆ ಕೇಂದ್ರದತ್ತ ದೌಡಾಯಿಸಿದ್ದರು. 5 ಗಂಟೆ ಸುಮಾರಿಗೆ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಯಾದಿಯಾಗಿ ಹಿರಿಯ, ಕಿರಿಯ ಅಧಿಕಾರಿಗಳು ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದರು. ನಾಗಾರ್ಜುನ ಕಾಲೇಜಿನ ಪ್ರವೇಶ ದ್ವಾರದಿಂದಲೇ ತಪಾಸಣೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಚುನಾವಣಾ ಕರ್ತವ್ಯಕ್ಕೆ ಇಲಾಖೆಯಿಂದ ವಿತರಿಸಿದ್ದ ವಿಶೇಷ ಗುರುತಿನ ಚೀಟಿ ಪರಿಶೀಲಿಸಿ ಮತ ಎಣಿಕೆ ಕೇಂದ್ರಗಳತ್ತ ಸಾಗಲು ಅವಕಾಶ ಮಾಡಿಕೊಡಲಾಯಿತು. ಕೆಲ ಸಿಬ್ಬಂದಿ ಗುರುತಿನ ಚೀಟಿ ಮರೆತು ಬಂದಿದ್ದು ಪ್ರವೇಶಕ್ಕೆ ಅನುಮತಿ ನೀಡುವಂತೆ ದುಂಬಾಲು ಬಿದ್ದಿದ್ದ ದೃಶ್ಯ ಕಂಡುಬಂದವು. ಆದರೆ ಇದಕ್ಕೆ ಸ್ಪಂದಿಸದ ಪೊಲೀಸರು ಪ್ರವೇಶಕ್ಕೆ ಅನುಮತಿ ನಿರಾಕರಿಸಿದರು. ಈ ವೇಳೆ ಕೆಲ ಸಿಬ್ಬಂದಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.
ಗರಂ ಆದ ಜಿಲ್ಲಾಧಿಕಾರಿ ಮತ ಎಣಿಕೆ ಕಾರ್ಯ ಆರಂಭಿಸುವ ಮೊದಲು ಸ್ಟ್ರಾಂಗ್ ರೂಂ ತೆರೆಯುವ ವೇಳೆ ದೇವನಹಳ್ಳಿ ಮತಪೆಟ್ಟಿಗೆಗಳಿದ್ದ ಸ್ಟ್ರಾಂಗ್ ರೂಂ ಬೀಗದ ಕೀ ತರುವುದನ್ನು ಅಧಿಕಾರಿ ಮರೆತಿದ್ದಾರಂತೆ ಎಂಬ ಸುದ್ದಿ ಹರಿದಾಡಿತು. ಕ್ಷಣ ಕಾಲ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳು ಗರಂ ಆದರು. ‘ಯಾರ‌್ರೀ ಅವರು…. ಎಲ್ಲಿದ್ದಾರೆ, ಏನಂತೆ?’ ಎಂದು ಚುನಾವಣಾ ಹಿರಿಯ ಅಧಿಕಾರಿಗಳಿಗೆ ಡಿಸಿ ಧ್ವನಿ ಏರಿಸಿದರು. ಕೆಲವೇ ಕ್ಷಣದಲ್ಲಿ ಹಾಜರಾದ ಅಧಿಕಾರಿ ಕೀ ಇದೆ ಸರ್ ಎಂದು ಕೀ ತೋರಿಸಿ ಸ್ಟ್ರಾಂಗ್ ರೂಂ ತೆರೆಯುತ್ತಿದ್ದವರ ಕೈಗೆ ಹಸ್ತಾಂತರಿಸಿದರು.
ಪ್ರವೇಶದ್ವಾರದ ಬಳಿ ಜನದಟ್ಟಣೆ ಒಂದೊಂದು ಸುತ್ತಿನ ಮತ ಎಣಿಕೆ ನಡೆಯುತ್ತಿದ್ದಂತೆ ನಾಗಾರ್ಜುನ ಕಾಲೇಜಿನ ಹೊರಭಾಗದಲ್ಲಿ ಜಮಾಯಿಸಿದ್ದ ಸಾವಿರಾರು ಮಂದಿ ಎರಡೂ ಪಕ್ಷದ ಬೆಂಬಲಿಗರ ಹೃದಯ ಬಡಿತ ಹೆಚ್ಚಿಸುತ್ತಿತ್ತು. ಒಂದೊಂದು ಸುತ್ತಿನ ಮತ ಎಣಿಕೆ ಮುಕ್ತಾಯವಾದಗಲೂ ಕಾರ್ಯಕರ್ತರು ಅಭ್ಯರ್ಥಿಗಳ ಪರ ಜಯಘೋಷ ಕೂಗುತ್ತಿದ್ದರು. ಈ ವೇಳೆ ಗದ್ದಲ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಲೌಡ್ ಸ್ಪೀಕರ್ ಮೂಲಕ ಪ್ರತಿ ಸುತ್ತಿನ ಮತ ಎಣಿಕೆಯನ್ನು ಅನೌನ್ಸ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಮಾಧ್ಯಮ ಕೊಠಡಿಯಲ್ಲಿ ಎಲ್ಇಡಿ ಪರದೆ ಸೇರಿ ಹತ್ತಕ್ಕೂ ಹೆಚ್ಚು ಟಿವಿ ಅಳವಡಿಸುವ ಮೂಲಕ ಪ್ರತಿ ಕ್ಷಣದ ಮಾಹಿತಿ ಅಪ್‌ಡೇಟ್ ಮಾಡಲಾಗುತ್ತಿತ್ತು.
ಹೆಜ್ಜೆಹೆಜ್ಜೆಗೂ ಖಾಕಿ ಕಣ್ಗಾವಲು ನಾಗಾರ್ಜುನ ಕಾಲೇಜಿನ 500 ಮೀಟರ್ ವ್ಯಾಪ್ತಿಯಲ್ಲಿ ಪೊಲೀಸರು ಕಣ್ಗಾವಲು ಇರಿಸಿದ್ದರು. ಹೆದ್ದಾರಿಯಿಂದ ಮತ ಎಣಿಕೆ ಕೇಂದ್ರಕ್ಕೆ ಸಾಗುವ ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾಲೇಜಿನ ಪ್ರವೇಶದ್ವಾರದಿಂದ ಮತ ಎಣಿಕೆ ಸ್ಥಳದವರೆ 8 ಕಡೆ ತಪಾಸಣೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ಕಡೆಗಳ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯ ವೀಕ್ಷಿಸಲು ಪ್ರತ್ಯೇಕ ಕೊಠಡಿ ಮೀಸಲಿಡಲಾಗಿತ್ತು. ಇದಕ್ಕಾಗಿ ಪೊಲೀಸ್ ಸೇರಿ ಐವತ್ತಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತುರ್ತು ಸೇವೆಗಾಗಿ ನಾಲ್ಕು ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನಗಳನ್ನು ಸಜ್ಜು ಗೊಳಿಸಲಾಗಿತ್ತು.
ಅಭ್ಯರ್ಥಿಗಳ ಭೇಟಿ, ಎಕ್ಸಿಟ್ ಮತ ಎಣಿಕೆ ಆರಂಭದಲ್ಲೇ ಪ್ರತ್ಯೇಕವಾಗಿ ಮತ ಕೇಂದ್ರದ ಬಳಿ ಪ್ರತ್ಯಕ್ಷರಾದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಹಾಗೂ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್ ಕೆಲಕಾಲ ಮತ ಎಣಿಕೆ ಕೇಂದ್ರದ ಬಳಿ ಸುಳಿದಾಡಿದರು. ರಕ್ಷಾರಾಮಯ್ಯ ಎಂದಿನಂತೆ ರಾಜಕಾರಣಿ ಗೆಟಪ್‌ನಲ್ಲಿ ಕಾಣಿಸಿಕೊಂಡು ಏಜೆಂಟರ್‌ಗಳ ಜತೆ ಮಾತುಕತೆ ನಡೆಸಿ ಹೊರಟರು. ಬಿಜೆಪಿ ಮುನ್ನಡೆಯಲ್ಲಿದ್ದರಿಂದ ಸಹಜವಾಗಿಯೇ ಅವರ ಮುಖದಲ್ಲಿ ಆತಂಕ ಮಡುಗಟ್ಟಿತ್ತು. ಇನ್ನೂ ಎನ್‌ಡಿಎ ಅಭ್ಯರ್ಥಿ ಸುಧಾಕರ್ ಬಿಳಿ ಪಂಚೆ, ಕೇಸರಿ ಶಾಲಿನಲ್ಲಿ ಕಾಣಿಸಿಕೊಂಡರು. ಕಾಂಗ್ರೆಸ್ ಅಭ್ಯರ್ಥಿಗಿಂತ ಮತಗಳ ಅಂತರ ಹೆಚ್ಚಿದ್ದರಿಂದ ಸಹಜವಾಗಿ ಗೆಲುವಿನ ನಗೆಯೊಂದಿಗೆ ಜನರತ್ತ ಕೈಬೀಸಿ ಕಾರಿನಲ್ಲಿ ಹೊರ ಹೊರಟರು. ಏತನ್ಮಧ್ಯೆ ಮತ್ತೆ ಮತ ಎಣಿಕೆ ಕೇಂದ್ರದಲ್ಲಿ ಪ್ರತ್ಯಕ್ಷರಾದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಆತಂಕಭರಿತ ಕುತೂಹಲದ ಮುಖಭಾವನೆಯಲ್ಲಿ ಸುಳಿದಾಡಿದರು. ಪ್ರತಿ ಸ್ಪರ್ಧಿ ಸುಧಾಕರ್ ಎಂಬತ್ತು ಸಾವಿರ ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೂ ಕೊನೇ ಸುತ್ತುಗಳಲ್ಲಿ ಮ್ಯಾಜಿಕ್ ನಡೆಯಬಹುದೆಂಬ ನಿರೀಕ್ಷೆಯಲ್ಲಿ ಓಡಾಡುತ್ತಿದ್ದ ದೃಶ್ಯ ಕಂಡುಬಂತು.
ಮೊಬೈಲ್ ನಿಷೇಧ, ಪ್ರತ್ಯೇಕ ಕೌಂಟರ್ ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಕೊಂಡೊಯ್ಯಲು ನಿಷೇಧ ಹೇರಲಾಗಿತ್ತು. ಇದಕ್ಕಾಗಿಯೇ ಪ್ರತಿ ವಿಧಾನಸಭಾ ಕ್ಷೇತ್ರವಾರು 8 ಪ್ರತ್ಯೇಕ ಕೌಂಟರ್ ತೆರೆದಿದ್ದು ಮೊಬೈಲ್ಗಳನ್ನು ಇರಿಸಿಕೊಳ್ಳಲಾಗುತ್ತಿತ್ತು. ಇದಕ್ಕಾಗಿ ಟೋಕನ್ ವ್ಯವಸ್ಥೆ ಮಾಡಿದ್ದು, ಮೊಬೈಲ್ ಕೊಟ್ಟು ಟೋಕನ್ ಪಡೆದು ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಜಾಗ ಖಾಲಿ ಮಾಡಿದ ಕೈ ಕಾರ್ಯಕರ್ತರು ಎನ್‌ಡಿಎ ಅಭ್ಯರ್ಥಿ ಡಾ.ಸುಧಾಕರ್ ಒಂದೂವರೆ ಲಕ್ಷ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾಗಲೇ ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಿದ್ದ ಕಾಂಗ್ರೆಸ್ ಬೆಂಬಲಿಗರು ಜಾಗ ಖಾಲಿ ಮಾಡಿದರು. ಫಲಿತಾಂಶ ೋಷಣೆಗೂ ಮೊದಲೇ ಕಾಂಗ್ರೆಸ್ ಸುಲಭ ಸೋಲೊಪ್ಪಿಕೊಂಡರೆ, ಬಿಜೆಪಿ ಬೆಂಬಲಿಗರು ಮತ ಎಣಿಕೆ ಕೇಂದ್ರದ ಮುಂದೆಯೇ ಸಂಭ್ರಮಿಸಿದರು.