More

  ಚುನಾವಣೆ ಬಂದಾಗ ಪ್ರತ್ಯಕ್ಷವಾಗುವ ಪಕ್ಷಗಳು!, ದ.ಕ. ಜಿಲ್ಲೆಯಲ್ಲಿ 2018ರಲ್ಲಿ 11 ಪಾರ್ಟಿಗಳು ಸ್ಪರ್ಧೆ, ಈ ಬಾರಿ 13 ಪಕ್ಷ ಕಣದಲ್ಲಿ

  ಪಿ.ಬಿ.ಹರೀಶ್ ರೈ ಮಂಗಳೂರು

  ಚುನಾವಣೆ ಬಂದಾಗಲೆಲ್ಲಾ ಹೊಸ ಪಕ್ಷಗಳು ಹುಟ್ಟಿಕೊಳ್ಳುವುದು, ಬಳಿಕ ಹೇಳ ಹೆಸರಿಲ್ಲದಂತೆ ಮಾಯವಾಗುವುದು ಸಾಮಾನ್ಯವಾಗಿದೆ. ಐದು ವರ್ಷದಿಂದ ಎಲ್ಲಿಯೂ ಕಾಣಿಸಿಕೊಳ್ಳದ ಪಕ್ಷಗಳು ಚುನಾವಣೆ ಬರುತ್ತಿದ್ದಂತೆ ದಕ್ಷಿಣ ಕನ್ನಡಕ್ಕೂ ಪ್ರವೇಶ ಪಡೆಯುತ್ತವೆ. ಸೋಲು ಖಚಿತ ಎಂದು ತಿಳಿದಿದ್ದರೂ ಹೊಸ ಪಕ್ಷಗಳಿಂದ ಸ್ಪರ್ಧಿಸಲು ಕೆಲವರು ಅಣಿಯಾಗುತ್ತಾರೆ.

  ಈ ಬಾರಿಯ ವಿಧಾನಸಭಾ ಚುನಾವಣೆಗೆ ದ.ಕ. ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಸಹಿತ ಒಟ್ಟು 13 ಪಕ್ಷಗಳು ಅಖಾಡಕ್ಕಿಳಿದಿವೆ. 2018ರ ಚುನಾವಣೆಯಲ್ಲಿ ಒಟ್ಟು 11 ಪಕ್ಷಗಳ ಅಭ್ಯರ್ಥಿಗಳಿದ್ದರು.

  * 8 ಕ್ಷೇತ್ರದಲ್ಲಿ ಆಪ್: ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿರುವ ಆಮ್ ಅದ್ಮಿ ಪಾರ್ಟಿ ಇದೇ ಪ್ರಥಮ ಬಾರಿಗೆ ಜಿಲ್ಲೆಯ ಎಲ್ಲ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

  ಜೆಡಿಎಸ್ ಮಂಗಳೂರು ಕ್ಷೇತ್ರ ಹೊರತು ಪಡಿಸಿ ಉಳಿದ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಸ್‌ಡಿಪಿಐ (ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ) 5 ಕ್ಷೇತ್ರಗಳಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.

  * ಎಂಇಪಿ ಮಾಯ: ಎಂಇಪಿ (ಆಲ್ ಇಂಡಿಯಾ ಮಹಿಳಾ ಎಂಪವರ್‌ಮೆಂಟ್ ಪಾರ್ಟಿ) ಕಳೆದ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಚುನಾವಣೆಯಲ್ಲಿ ಆ ಪಕ್ಷ ಮಾಯವಾಗಿದೆ.

  ಈ ಹಿಂದೆ ಉಳ್ಳಾಲ, ಬಂಟ್ವಾಳ ಮತ್ತು ವಿಟ್ಲ ಕ್ಷೇತ್ರದಲ್ಲಿ ಶಾಸಕರನ್ನು ಹೊಂದಿದ್ದ ಎಡಪಕ್ಷ ಪ್ರತಿ ಚುನಾವಣೆಯಲ್ಲಿ ಮತ ಗಳಿಕೆಯಲ್ಲಿ ಹಿನ್ನಡೆ ಅನುಭವಿಸುತ್ತಾ ಬಂದಿದೆ. 2018ರ ಚುನಾವಣೆಯಲ್ಲಿ 4 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸಿಪಿಐಎಂ ಈ ಬಾರಿ ಸ್ಪರ್ಧೆಯಿಂದಲೇ ದೂರ ಉಳಿದಿದೆ. ಕರ್ನಾಟಕ ರಾಷ್ಟ್ರ ಸಮಿತಿ, ಅಖಿಲ ಭಾರತ ಹಿಂದು ಮಹಾಸಭಾ, ಹಿಂದೂಸ್ಥಾನ್ ಜನತಾ ಪಾರ್ಟಿ ಸೆಕ್ಯುಲರ್, ಸರ್ವೋದಯ ಕರ್ನಾಟಕ ಪಕ್ಷ, ಉತ್ತಮ ಪ್ರಜಾಕೀಯ ಪಕ್ಷ, ಜನಹಿತ ಪಕ್ಷ, ತುಳುವೆರೆ ಪಕ್ಷ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದಾರೆ.

  * ನೂರಾರು ಪಕ್ಷಗಳು: ಚುನಾವಣಾ ಆಯೋಗವು ರಾಷ್ಟ್ರೀಯ ಪಕ್ಷಗಳು, ರಾಜ್ಯ ಪಕ್ಷಗಳು, ಇತರ ರಾಜ್ಯದ ಪಕ್ಷಗಳು ಮತ್ತು ನೋಂದಾಯಿತ (ಮಾನ್ಯತೆ ಇಲ್ಲದ) ಪಕ್ಷಗಳು ಹೀಗೆ ನಾಲ್ಕು ವಿಭಾಗವಾಗಿ ವಿಂಗಡಿಸಿವೆ. 2018ರ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಬಿಎಸ್‌ಪಿ, ಸಿಪಿಐ, ಸಿಪಿಎಂ, ಎನ್‌ಸಿಪಿ ರಾಷ್ಟ್ರೀಯ ಪಕ್ಷಗಳು ಹಾಗೂ ಜೆಡಿಎಸ್ ಏಕೈಕ ರಾಜ್ಯ ಪಕ್ಷವಾಗಿತ್ತು. ಇತರ ರಾಜ್ಯದ 6 ಪಕ್ಷಗಳು ಹಾಗೂ ನೋಂದಾಯಿತ (ಮಾನ್ಯತೆ ಇಲ್ಲದ) 70 ಪಕ್ಷಗಳು ರಾಜ್ಯದಲ್ಲಿ ಸ್ಪರ್ಧಿಸಿದ್ದವು.

  ———-

  ಪಕ್ಷ ಹಾಗೂ ಅಭ್ಯರ್ಥಿ ಸಂಖ್ಯೆ:

  * 2023: ಬಿಜೆಪಿ-8, ಕಾಂಗ್ರೆಸ್-8, ಆಪ್-8, ಜೆಡಿಎಸ್-7, ಎಸ್‌ಡಿಪಿಐ-5, ಕೆಆರ್‌ಎಸ್-5, ಹಿಂದು ಮಹಾ ಸಭಾ-2, ಹಿಂದುಸ್ಥಾನ್ ಜನತಾ ಪಾರ್ಟಿ ಸೆಕ್ಯುಲರ್-2, ಉತ್ತಮ ಪ್ರಜಾಕೀಯ ಪಕ್ಷ-2, ಸರ್ವೋದಯ ಕರ್ನಾಟಕ ಪಕ್ಷ-1, ತುಳುವೆರೆ ಪಕ್ಷ-1, ಕಲ್ಯಾಣ ರಾಜ್ಯ ಪ್ರಗತಿ ಪಕ್ಷ-1, ಜನಹಿತ ಪಕ್ಷ-1.

  * 2018: ಕಾಂಗ್ರೆಸ್-8, ಬಿಜೆಪಿ-8, ಜೆಡಿಎಸ್-5, ಎಂಇಪಿ-7, ಸಿಪಿಐಎಂ-4, ಲೋಕ ಅವಾಜ್ ದಳ-2, ಹಿಂದೂ ಮಹಾ ಸಭಾ-2, ಬಿಎಸ್‌ಪಿ-1, ಜೆಡಿಯು-1, ಪ್ರಜಾಪರಿರ್ವತನಾ ಪಾರ್ಟಿ-1, ಸಂಯುಕ್ತ ಜನತಾ ಪಾರ್ಟಿ, (ಲೋಕತಾಂತ್ರಿಕ)-1.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts