ಚುನಾವಣೆ ಅಕ್ರಮ ತಡೆಯಲು ಕ್ರಮ

ಜಮಖಂಡಿ: ಮತಕ್ಷೇತ್ರದಲ್ಲಿ ಪಾರದರ್ಶಕ, ಅಕ್ರಮ ರಹಿತ ಚುನಾವಣೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶಾಂತಾರಾಮ ಕೆ.ಜಿ. ಹೇಳಿದರು.

ಮತದಾರರಿಗೆ ಅನುಕೂಲವಾಗುವಂತೆ 226 ಮತಗಟ್ಟೆಗಳಲ್ಲಿ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸೆಕ್ಟರ್ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಧಿಕಾರಿಗಳು ಅಂಗವಿಕಲರ ನಿವಾಸಕ್ಕೆ ಭೇಟಿ ನೀಡಿ ಮತದಾನ ಮಾಡುವಂತೆ ಮನವೊಲಿಸುವ ಕಾರ್ಯ ಮಾಡುತ್ತಾರೆ. ಅವರಿಗೆ ವೀಲ್​ಚೇರ್, ವಾಕಿಂಗ್ ಸ್ಟಿಕ್, ಸಹಾಯಕರೊಬ್ಬರನ್ನು ನೇಮಿಸುವ ಕುರಿತು ರ್ಚಚಿಸಲಾಗುತ್ತಿದೆ ಎಂದರು.

ಚುನಾವಣೆ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ 18 ಪಾಳಿಯಲ್ಲಿ 6 ಅಧಿಕಾರಿಗಳ ತಂಡ ಕಾರ್ಯ ನಿರ್ವಹಿಸಲಿವೆ. ಅಧಿಕಾರಿಗಳ ತಂಡಗಳ ವ್ಯಾಪ್ತಿಯಲ್ಲಿ ದೂರು ಬಂದರೆ 15ರಿಂದ 20 ನಿಮಿಷದಲ್ಲಿ ಅಲ್ಲಿನ ಅಧಿಕಾರಿಗಳ ತಂಡ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ತಂಡವನ್ನು ನಿಯೋಜಿಸಲಾಗಿದೆ ಎಂದರು.

ಹುಲ್ಯಾಳ ಕ್ರಾಸ್, ಹುನ್ನೂರ, ಚಿನಗುಂಡಿ ಕ್ರಾಸ್, ಚಿಕ್ಕಲಕಿ ಕ್ರಾಸ್, ತುಬಚಿ ಕ್ರಾಸ್​ನಲ್ಲಿ ಚೆಕ್​ಪೋಸ್ಟ್​ಗಳನ್ನು ನಿರ್ವಿುಸಲಾಗಿದೆ. ಸೋಮವಾರ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಚುನಾವಣಾ ವೀಕ್ಷಕರಾಗಿ, ಪೊಲೀಸ್ ಚುನಾವಣೆ ವೀಕ್ಷಕರೊಬ್ಬರು ಆಗಮಿಸಲಿದ್ದಾರೆ ಎಂದರು.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಜಿಪಂ ಸಿಇಒ ಅವರು ಕ್ರಮ ಜರುಗಿಸುತ್ತಾರೆ. ರವಿ ಶಿವಪ್ಪ ಪಡಸಲಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದರು.

ಪ್ರತಿ ಮತಗಟ್ಟೆಗೆ 5 ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗುವುದು. ಶೇ.10 ಹೆಚ್ಚುವರಿ ಸಿಬ್ಬಂದಿ ಒಳಗೊಂಡಂತೆ 1250 ಸಿಬ್ಬಂದಿ ಅವಶ್ಯಕತೆ ಇದೆ. ಮುಧೋಳ, ಜಮಖಂಡಿ, ಬೀಳಗಿ ತಾಲೂಕುಗಳಿಂದ ನಿಯೋಜನೆ ಮಾಡಿ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಜಿಲ್ಲಾಮಟ್ಟದ ಮಾಧ್ಯಮ ಸಮಿತಿ ರಚಿಸಲಾಗಿದ್ದು, ಅಭ್ಯರ್ಥಿಗಳು ಮಾಧ್ಯಮದಲ್ಲಿ ಪ್ರಕಟಿಸಬೇಕಾದ ಜಾಹಿರಾತುಗಳಿಗೆ ಸಮಿತಿಯಿಂದ ಪರವಾನಗಿ ಪಡೆದುಕೊಳ್ಳಬೇಕು ಎಂದರು.

ಎಸ್ಪಿ ಸಿ.ಬಿ. ರಿಷ್ಯಂತ ಮಾತನಾಡಿ, ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನು ಮರುಪರಿಶೀಲನೆ ಮಾಡುತ್ತಿದ್ದೇವೆ. ಶಾಂತಿ ಕದಡುವ 22 ಜನರಿಂದ ಬಾಂಡ್ ಬರೆಸಿಕೊಳ್ಳಲಾಗಿದೆ. ಗಸ್ತು ತಿರುಗುವ ತಂಡದಲ್ಲಿ ಕಡ್ಡಾಯವಾಗಿ ಎಎಸ್​ಐ ಇರುತ್ತಾರೆ. ಅವರೆ ದೂರು ದಾಖಲಿಸಿಕೊಳ್ಳುತ್ತಾರೆ ಎಂದರು.

ಚುನಾವಣಾಧಿಕಾರಿ ಮೊಹಮ್ಮದ ಇಕ್ರಾಮುಲ್ ಷರೀಫ್, ಸಹಾಯಕ ಚುನಾವಣಾಧಿಕಾರಿ ಪ್ರಶಾಂತ ಪಾಟೀಲ, ಪ್ರಶಾಂತ ಚನಗೊಂಡ ಇತರರಿದ್ದರು.

ದೂರು ನಿರ್ವಹಣೆ ಕೇಂದ್ರ

ಜಮಖಂಡಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ 247 ದೂರು ನಿರ್ವಹಣೆ ಕೇಂದ್ರ ಸ್ಥಾಪಿಸಲಾಗಿದೆ. ಸಾರ್ವಜನಿಕರು ಚುನಾವಣೆ ಕುರಿತು 08353-220023,222623, ಜಿಲ್ಲಾ ದೂರು ನಿರ್ವಹಣೆ ಕೇದ್ರದ ಸಂಖ್ಯೆ 08354-235990 ಈ ನಂಬರ್​ಗಳಿಗೆ ದೂರವಾಣಿ ಮೂಲಕ ದೂರು ನೀಡಬಹುದೆಂದು ಜಿಲ್ಲಾಧಿಕಾರಿ ತಿಳಿಸಿದರು.