ಎಲೆಕ್ಷನ್​ಗಾಗೇ ಕರೆನ್ಸಿ ಮಾಯ

ಬೆಂಗಳೂರು: ರಾಜ್ಯಾದ್ಯಂತ ಎಟಿಎಂಗಳಲ್ಲಿ ಎದುರಾಗಿರುವ ಕರೆನ್ಸಿ ಸಮಸ್ಯೆಗೆ ಚುನಾವಣೆಯೇ ಕಾರಣ ಎಂಬುದು ಕೊನೆಗೂ ಸಾಬೀತಾಗಿದೆ. ಚುನಾವಣೆಗಾಗಿ ಮತದಾರರಿಗೆ ಹಂಚಲು ಹಣ ಸಂಗ್ರಹಿಸುತ್ತಿರುವುದರಿಂದಲೇ ಹಣದ ಅಭಾವ ಸೃಷ್ಟಿಯಾಗಿದೆ ಎಂಬುದು ರಾಜ್ಯಾದ್ಯಂತ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಿಂದ ದೃಢಪಟ್ಟಿದೆ.

ನೀತಿ ಸಂಹಿತೆ ಜಾರಿಯಾದ ನಂತರ ಚುನಾವಣಾ ಆಯೋಗ, ಪೊಲೀಸರು ಮತ್ತು ಐಟಿ ಇಲಾಖೆ ರಾಜ್ಯಾದ್ಯಂತ ದಾಳಿ ನಡೆಸಿ ಈವರೆಗೆ ಸೂಕ್ತ ದಾಖಲೆಯಿಲ್ಲದ 37.33 ಕೋಟಿ ರೂ. ನಗದು ಜಪ್ತಿ ಮಾಡಿದೆ. ಈ ಹಣದಲ್ಲಿ 500 ರೂ. ಹಾಗೂ 2 ಸಾವಿರ ರೂ. ಮುಖಬೆಲೆಯೇ ಜಾಸ್ತಿ ಎಂಬುದು ಗಮನಾರ್ಹ ವಿಚಾರವಾಗಿದೆ. ರಾಜ್ಯದ ವಿವಿಧ ಬ್ಯಾಂಕ್​ಗಳ ಎಟಿಎಂಗಳಲ್ಲಿ ನಗದು ಇಲ್ಲದೆ ನೋ ಕ್ಯಾಷ್​ಬೋರ್ಡ್ ಹಾಕಲು ಇದೇ ಪ್ರಮುಖ ಕಾರಣ ಎಂದು ಐಟಿ ಇಲಾಖೆ ಮುಖ್ಯಸ್ಥರು ತಿಳಿಸಿದ್ದಾರೆ.

ಏರ್​ಪೋರ್ಟಲ್ಲಿತ್ತ್ತು 53.50 ಲಕ್ಷ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ರಾಜ್ಯದ ರೈಲ್ವೆ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳ ಮೇಲೆ ಹೆಚ್ಚಿನ ನಿಗಾ ವಹಿಸಿದ್ದು, ಅನುಮಾನಾಸ್ಪದವಾಗಿ ಓಡಾಡುವ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸುತ್ತಿದ್ದಾರೆ. ಈಚೆಗೆ ವಿಮಾನ ನಿಲ್ದಾಣದಲ್ಲಿ ದಾಖಲೆಗಳಿಲ್ಲದ 16.5 ಲಕ್ಷ ರೂ. ಕೊಂಡೊಯ್ಯುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಇದೇ ಪ್ರಕರಣ ಸಂಬಂಧ ಮುಂಬೈನಲ್ಲಿ 37 ಲಕ್ಷ ರೂ. ಜಪ್ತಿ ಮಾಡಲಾಗಿದ್ದು, ಒಟ್ಟು 53.50 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

16 ಕೋಟಿ ರೂ. ಅಘೋಷಿತ ಆಸ್ತಿ: ಮತ್ತೊಂದು ಪ್ರಕರಣದಲ್ಲಿ ರಾಜ್ಯದ ಜಿಲ್ಲೆಯೊಂದರಲ್ಲಿ ಗುತ್ತಿಗೆದಾರನೊಬ್ಬ ತನ್ನ ಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದ. ಆ ವ್ಯಕ್ತಿ ತನ್ನ ಖಾತೆಯಿಂದ 55 ಲಕ್ಷ ರೂ. ತೆಗೆದುಕೊಂಡಿದ್ದ. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಗುತ್ತಿಗೆದಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 16 ಕೋಟಿ ರೂ. ಅಘೋಷಿತ ಹಣ ಗೌಪ್ಯವಾಗಿಟ್ಟಿರುವುದು ಬಯಲಾಗಿದೆ.

9.51 ಕೋಟಿ ರೂ. ಗೃಹಬಳಕೆ ವಸ್ತು ಜಪ್ತಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು 9.51 ಕೋಟಿ ರೂ. ಮೌಲ್ಯದ ಮನೆ ಸಾಮಗ್ರಿಗಳನ್ನು ಮೈಸೂರಿನ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿತ್ತು. ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 9.51 ಕೋಟಿ ರೂ. ಮೌಲ್ಯದ ಮನೆ ಸಾಮಗ್ರಿಗಳು ಪತ್ತೆಯಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಖಾಸಗಿ ವ್ಯಕ್ತಿಯಿಂದ 50 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.

ಗುತ್ತಿಗೆದಾರರ ಮೇಲೂ ಕಣ್ಣು: ಸರ್ಕಾರ ಗುತ್ತಿಗೆದಾರರಿಗೆ ಪಾವತಿ ಮಾಡಿದ ಹಣದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಈ ಹಿಂದಿನ ಸಾಲಿನಲ್ಲಿ ಮಾಡಿದ ಪಾವತಿ ಮತ್ತು ಈ ಸಾಲಿನಲ್ಲಿ ಪಾವತಿ ಮಾಡಿರುವುದನ್ನು ಹೋಲಿಕೆ ಮಾಡಿ ಅಕ್ರಮಗಳು ನಡೆದಿವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

ಸರ್ಕಾರಿ ವಾಹನ ಬಳಕೆ?

ಆಡಳಿತ ಪಕ್ಷ ಅಧಿಕಾರ ದುರ್ಬಳಕೆ ಮಾಡಿಕೊಂಡು ಸರ್ಕಾರಿ ವಾಹನಗಳಲ್ಲಿ ಹಣ ಸಾಗಾಟ ಮಾಡುತ್ತಿರುವುದಾಗಿ ವಿರೋಧ ಪಕ್ಷಗಳು ಆರೋಪಿಸಿವೆ. ಸರ್ಕಾರಿ ವಾಹನಗಳ ಮೂಲಕ ಹಣ ಸಾಗಿಸಿದರೆ ಯಾರಿಗೂ ಅನುಮಾನ ಬರುವುದಿಲ್ಲ. ಪೊಲೀಸರು ಕೂಡ ತಪಾಸಣೆ ಮಾಡುವುದಿಲ್ಲ ಎಂಬುದು ತಂತ್ರಗಾರಿಕೆ. ಇತ್ತೀಚೆಗೆ ಮೈಸೂರು ಭಾಗದಲ್ಲಿ ಸರ್ಕಾರಿ ವಾಹನ ತಪಾಸಣೆ ಮಾಡುತ್ತಿಲ್ಲ ಎಂಬ ಆರೋಪವೂ ಕೇಳಿ ಬಂದಿರುವುದರಿಂದ ಅಧಿಕಾರಿಗಳು ಸರ್ಕಾರಿ ವಾಹನಗಳ ಮೇಲೂ ನಿಗಾ ವಹಿಸಬೇಕಿದೆ.

ಚುನಾವಣೆ ಹಿನ್ನೆಲೆಯಲ್ಲಿ ಹಣ ಹಂಚುವುದು, ಅಘೋಷಿತ ಆಸ್ತಿ ಹೊಂದಿ ರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದರೆ ಐಟಿ ಇಲಾಖೆ ಕಂಟ್ರೋಲ್ ರೂಂಗೆ ಕರೆ ಮಾಡಿ ದೂರು ನೀಡಬಹುದು. ವಿಶೇಷ ತಂಡ ರಚಿಸಿದ್ದು, ಅಕ್ರಮ ಹಣ ಕಂಡು ಬಂದರೆ ಎಲ್ಲ ಜಿಲ್ಲೆಗಳಲ್ಲೂ ದಾಳಿ ಮಾಡಿ ಹಣ ಜಪ್ತಿ ಮಾಡುವ ಅಧಿಕಾರ ಇವರಿಗೆ ನೀಡಲಾಗಿದೆ. | ಐಟಿ ಅಧಿಕಾರಿ

4.13 ಕೋಟಿ ರೂಪಾಯಿ ಜಪ್ತಿ

ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ 4.13 ಕೋಟಿ ರೂ. ಅಘೋಷಿತ ಹಣ ಮತ್ತು 1.32 ಕೋಟಿ ರೂ. ಮೌಲ್ಯದ 4.52 ಕೆ.ಜಿ ಚಿನ್ನ ವಶಕ್ಕೆ ಪಡೆದಿದೆ. 4.13 ಕೋಟಿ ರೂ.ನಲ್ಲಿ 4.03 ಕೋಟಿ ರೂ. 500 ಮತ್ತು 2 ಸಾವಿರ ಮುಖಬೆಲೆ ನೋಟುಗಳಾಗಿವೆ. ಉಳಿದ 10 ಲಕ್ಷ ರೂ. ಮಾತ್ರ 100, 50 ಹಾಗೂ 200ರ ಮುಖಬೆಲೆಯ ನೋಟುಗಳು. 2.47 ಕೋಟಿ ರೂ. ಬೆಂಗಳೂರಲ್ಲೇ ಪತ್ತೆಯಾಗಿದೆ. ಬಳ್ಳಾರಿಯಲ್ಲಿ 55 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *