ರಾಜಕೀಯ ಪಕ್ಷಗಳ ಎಲೆಕ್ಷನ್ ವೆಚ್ಚಕ್ಕೂ ಮಿತಿ?

ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣೆ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗ ಸರ್ವಪಕ್ಷಗಳ ಸಭೆಯಲ್ಲಿನ ಸಲಹೆ ಆಧರಿಸಿ ಕೇಂದ್ರ ಕಾನೂನು ಇಲಾಖೆಗೆ ಶೀಘ್ರವೇ ಕರಡು ನಿಯಮ ಕಳುಹಿಸಿಕೊಡಲು ನಿರ್ಧರಿಸಿದೆ.

ಈ ನಿಯಮದ ಪ್ರಕಾರ ಸದ್ಯ ಅಭ್ಯರ್ಥಿಗಳ ವೆಚ್ಚಕ್ಕೆ ಇರುವ ಮಿತಿ ಪಕ್ಷಗಳಿಗೂ ವಿಸ್ತರಣೆ ಆಗಲಿದೆ. ಕಳೆದ ಆಗಸ್ಟ್​ನಲ್ಲಿ ಚುನಾವಣಾ ಆಯೋಗ ಸರ್ವಪಕ್ಷ ಸಭೆಯಲ್ಲಿ ಈ ಪ್ರಸ್ತಾಪ ಮುಂದಿಟ್ಟಿತ್ತು. ಬಿಜೆಪಿ ಹೊರತುಪಡಿಸಿ ಬಹುತೇಕ ಪಕ್ಷಗಳು ಪ್ರಸ್ತಾಪಕ್ಕೆ ಸಮ್ಮತಿದ್ದವು. ಸಾಮಾನ್ಯವಾಗಿ ಚುನಾವಣಾ ಅಭ್ಯರ್ಥಿಗಳ ವೆಚ್ಚವನ್ನಷ್ಟೇ ಆಯೋಗ ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ. ಸ್ಟಾರ್ ಪ್ರಚಾರಕರು, ಕೇಂದ್ರ ನಾಯಕರ ಪ್ರಚಾರ ಹಾಗೂ ಮೆಗಾ ರ‍್ಯಾಲಿ ಗಳ ಖರ್ಚನ್ನು ಪಕ್ಷವೇ ಭರಿಸುತ್ತವೆ. ಇದನ್ನು ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುವುದಿಲ್ಲ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಸ್ಟಾರ್ ಪ್ರಚಾರಕರನ್ನು ಕರೆತಂದು, ಅಪಾರ ವೆಚ್ಚ ಮಾಡಲಾಗುತ್ತಿತ್ತು. ಇದು ಆಯೋಗದ ಲೆಕ್ಕಕ್ಕೆ ಸಿಗುತ್ತಿರಲಿಲ್ಲ. ಹೊಸ ನಿಯಮದಿಂದಾಗಿ ಇದಕ್ಕೆ ಕಡಿವಾಣ ಬೀಳಲಿದೆ.

ಅಭ್ಯರ್ಥಿಗಳ ವೆಚ್ಚದ ಮಿತಿ: ಲೋಕಸಭೆ ಚುನಾವಣೆ: 50ರಿಂದ 70 ಲಕ್ಷ ರೂ., ವಿಧಾನಸಭೆ ಚುನಾವಣೆ: 25ರಿಂದ 28 ಲಕ್ಷ ರೂ..