ಕ್ರೈಸ್ತ ಸಿಬ್ಬಂದಿಗೆ ಚುನಾವಣೆ ಕರ್ತವ್ಯ ವಿನಾಯಿತಿ: ಮುಖ್ಯ ಚುನಾವಣಾ ಅಧಿಕಾರಿಯಿಂದ ಪೂರಕ ಸ್ಪಂದನೆ

ಮಂಗಳೂರು: ಕ್ರೈಸ್ತರ ಪ್ರಮುಖ ಆಚರಣೆಗಳಲ್ಲಿ ಒಂದಾದ ಗುಡ್‌ಫ್ರೈಡೆ ಹಿಂದಿನ ದಿನ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚುನಾವಣೆ ಬರುವುದರಿಂದ ಚುನಾವಣಾ ಕರ್ತವ್ಯಕ್ಕೆ ನೀಯೋಜಿಸಲಾಗಿರುವ ಕ್ರೈಸ್ತ ಧರ್ಮದ ಸಿಬ್ಬಂದಿಗೆ ವಿನಾಯಿತಿ ನೀಡಬೇಕು ಎಂದು ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಸಲ್ಲಿಸಿದ ಮನವಿಗೆ ಪೂರಕ ಸ್ಪಂದನೆ ಸಿಕ್ಕಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಚುನಾವಣಾಧಿಕಾರಿಗೆ ಅವರು ಪತ್ರ ಬರೆದಿದ್ದಾರೆ ಎಂದು ಕರ್ನಾಟಕ ಕ್ರೈಸ್ತರ ಸಾಮಾಜಿಕ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ ಅಧ್ಯಕ್ಷ ಹ್ಯಾರಿ ಡಿಸೋಜ ತಿಳಿಸಿದರು.

ಗುಡ್ ್ರೈೆಡೇ ದಿನದ ಮುಂಚಿನ ದಿನ ಪವಿತ್ರ ಗುರುವಾರವಾಗಿದ್ದು, ಕ್ರೈಸ್ತರು ಸಾಕಷ್ಟು ಪೂಜೆ, ಆರಾಧನೆ ಜತೆಗೆ ಉಪವಾಸದ ಮೂಲಕ ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಚರ್ಚ್‌ಗಳಲ್ಲಿ ವಿಶೇಷ ಪೂಜೆಗಳು ಇರುತ್ತವೆ. ಜಿಲ್ಲೆಯ ಹೆಚ್ಚಿನ ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಚರ್ಚ್‌ಗಳ ಆವರಣದಲ್ಲಿದ್ದು, ಮತಗಟ್ಟೆ ಇರುವ ಹಿನ್ನೆಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸುವುದರಿಂದ ಚರ್ಚ್‌ನಲ್ಲಿ ಪೂಜೆ ಸಲ್ಲಿಸಲು ಬರುವವರಿಗೂ ಸಮಸ್ಯೆಯಾಗುತ್ತದೆ. ಆದ್ದರಿಂದ ಇಂತಹ ಮತಗಟ್ಟೆಯನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿತ್ತು. ಇದನ್ನೂ ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಅಸೋಸಿಯೇಶನ್ ಪದಾಧಿಕಾರಿಗಳಾದ ಡಾ.ಎಡ್ವರ್ಡ್ ಲೂವಿಸ್, ಸ್ಟ್ಯಾನಿ ಲೋಬೋ, ಪ್ಯಾಟ್ರಿಕ್ ಪಾಯಸ್, ಸ್ಟ್ಯಾನಿ ವಾಜ್ ಉಪಸ್ಥಿತರಿದ್ದರು.