ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಇಂದು ಮುಹೂರ್ತ ಫಿಕ್ಸ್‌

ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ ಮತ್ತು ಮಿಝೋರಾಂ ರಾಜ್ಯಗಳಿಗೆ ನಡೆಯಲಿರುವ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಪ್ರಕಟಿಸಲಿದ್ದು, ವಿಧಾನಸಭೆಯನ್ನು ವಿಸರ್ಜಿಸಿರುವ ತೆಲಂಗಾಣದ ಚುನಾವಣೆ ದಿನಾಂಕವು ಕೂಡ ಇಂದು ನಿಗದಿಯಾಗಲಿದೆ ಎನ್ನಲಾಗಿದೆ.

ಇಂದು ಮಧ್ಯಾಹ್ನ ಕೇಂದ್ರ ಚುನಾವಣೆ ಆಯೋಗದ ಆಯುಕ್ತ ಓಂ ಪ್ರಕಾಶ್‌ ರಾವತ್‌ ಅವರು ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕವನ್ನು ಪ್ರಕಟಿಸಲಿದ್ದು, ತಕ್ಷಣವೇ ಚುನಾವಣೆ ನೀತಿ ಸಂಹಿತೆ ಕೂಡ ಜಾರಿಗೆ ಬರಲಿದೆ.

ಮೂಲಗಳ ಪ್ರಕಾರ ಪಂಚರಾಜ್ಯಗಳ ಚುನಾವಣೆಯನ್ನು ಡಿಸೆಂಬರ್‌ ಮೊದಲ ವಾರದೊಳಗೆ ಪೂರ್ಣಗೊಳಿಸಲಾಗುವುದು. ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನವೇ ಎಲ್ಲ ಚುನಾವಣೆಯನ್ನು ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ.

ಛತ್ತೀಸ್‌ಗಡದಲ್ಲಿ ಎರಡು ಹಂತಗಳಲ್ಲಿ ನಡೆಯಲಿದ್ದು, ಇತರೆ ರಾಜ್ಯಗಳಲ್ಲಿ ಚುನಾವಣೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎನ್ನಲಾಗಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿದ್ದು, ನಾಲ್ಕು ರಾಜ್ಯಗಳಲ್ಲಿ ನಡೆಯುವ ಚುನಾವಣೆಯು ಭಾರಿ ಮಹತ್ವ ಪಡೆದುಕೊಂಡಿದೆ. (ಏಜೆನ್ಸೀಸ್)