ತುಮಕೂರು: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವಿಶ್ವವಿದ್ಯಾಲಯದ ವಿಜ್ಞಾನ ಮತ್ತು ಕಲಾ ಕಾಲೇಜುಗಳಲ್ಲಿ ಮೇ 13ರಂದು ನಡೆಯಲಿದ್ದು ಮತ ಎಣಿಕೆ ಕೇಂದ್ರ ಸುತ್ತಮುತ್ತ ಹಾಗೂ ಜಿಲ್ಲಾದ್ಯಂತ ಮೇ 12 ಸಂಜೆ 6 ರಿಂದ 13ರ ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಯು ಆದ ಜಿಲ್ಲಾಧಿಕಾರಿ ವೈ.ಎಸ್ . ಪಾಟೀಲ ಆದೇಶ ಹೊರಡಿಸಿದ್ದಾರೆ.
ಚುನಾವಣೆಯಲ್ಲಿ ಜಯಗಳಿಸಿದ ಆಭ್ಯರ್ಥಿಗಳು ವಿಜಯೋತ್ಸವ ಆಚರಿಸಲು ಮೆರವಣಿಗೆ ಮೂಲಕ ಘೋಷಣೆಗಳನ್ನು ಕೂಗುವ ಸಾಧ್ಯತೆ ಇದೆ. ಪರಾಭವಗೊಂಡ ಅಭ್ಯರ್ಥಿಗಳ ಬೆಂಬಲಿಗರು ಹಾಗೂ ಜಯಗಳಿಸಿದ ಅಭ್ಯರ್ಥಿಗಳ ಬೆಂಬಲಿಗರ ಮಧ್ಯೆ ಗಲಾಟೆ ಆಗುವ ಸಾಧ್ಯತೆಗಳು ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ರಾಜಕೀಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಷೇಧಾಜ್ಷೆ ಜಾರಿಗೊಳಿಸಲಾಗಿದೆ.