ಚುನಾವಣೆಯಲ್ಲಿ ಒಳ ಒಪ್ಪಂದವಿಲ್ಲ

ಬಾಗಲಕೋಟೆ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಯಾವುದೇ ಕಾಂಗ್ರೆಸ್ ನಾಯಕರ ಜತೆ ಒಳ ಒಪ್ಪಂದವಾಗಿಲ್ಲ. ಬಿಜೆಪಿ ಪಕ್ಷದ ಅಭ್ಯರ್ಥಿ ಗೂಳಪ್ಪ ಶೆಟಗಾರ ನಿಶ್ಚಿತವಾಗಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ. ಎಲ್ಲೆಡೆ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಮಾಲೀಕರು. ಅವರು ನೀಡುವ ತೀರ್ಪು ಅಂತಿಮ. ಈ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವ ಮೂಲಕ ಮತದಾರರು ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಚಾಟಿ ಏಟು ಕೊಟ್ಟು ಸಂದೇಶ ರವಾನಿಸಬೇಕು ಎಂದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ದೊಡ್ಡ ನಾಯಕತ್ವ ಹೊಂದಿದ ವ್ಯಕ್ತಿ. ಮೋದಿಗೂ ರಾಹುಲ್ ಗಾಂಧಿಗೂ ಬಹಳ ವ್ಯತ್ಯಾಸವಿದೆ. 140 ಸೀಟು ಬಂದಿದ್ದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುತ್ತಿತ್ತು. ಕೃಷ್ಣಾ ಮೇಲ್ದಂಡೆ ಯೋಜನೆಗೂ ಒತ್ತು ನೀಡಲು ಸಾಧ್ಯ ವಿತ್ತು. ಈ ಸಮ್ಮಿಶ್ರ ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ದೂರಿದರು.

ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಬಗ್ಗೆ ವಿಧಾನ ಪರಿಷತ್​ನಲ್ಲಿ ಚರ್ಚೆ ಆಗುತ್ತಿರಲಿಲ್ಲ. ಈ ಭಾಗದ ನದಿ ನೀರು ಹಂಚಿಕೆ, ನೀರಾವರಿ ಕುರಿತು ಪರಿಷತ್​ನಲ್ಲಿ ಯಾರೊಬರೂ ಮಾತನಾಡುತ್ತಿರಲಿಲ್ಲ. ನಾನು ವಿಧಾನ ಪರಿಷತ್ ಸದಸ್ಯನಾದ ಬಳಿಕ ಅಲ್ಲಿ ಚರ್ಚೆ ಮಾಡಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಗೌರವ ಧನ ಹೆಚ್ಚಿಸುವ ಬಗ್ಗೆ ಸರ್ಕಾರದ ಗಮನಕ್ಕೆ ತಂದೆ. ಆಗ ಸಚಿವರಿದ್ದ ಎಚ್.ಕೆ.ಪಾಟೀಲ ಮತ್ತು ಈಶ್ವರ ಖಂಡ್ರೆ ಗೌರವ ಧನ ಹೆಚ್ಚಳ ಮಾಡಿದರು. ಪರಿಷತ್​ನಲ್ಲಿ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವವರು ಬೇಕಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಗೂಳಪ್ಪ ಶೆಟಗಾರ ಅವರನ್ನು ಗೆಲ್ಲಿಸ ಬೇಕು ಎಂದು ಮನವಿ ಮಾಡಿದರು.ಸಂಸದ ಪಿ.ಸಿ. ಗದ್ದಿಗೌಡರ, ಶಾಸಕರಾದ ಗೋವಿಂದ ಕಾರಜೋಳ, ಮುರುಗೇಶ ನಿರಾಣಿ, ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮತ್ತಿತರರಿದ್ದರು.