ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣೆ ಆಯೋಗ ಕಟ್ಟುನಿಟ್ಟಿನ ನಿಗಾ: ಹಿತವೋ? ಅಹಿತವೋ?

ಈ ಸಲದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದೆಂದು ಕೇಂದ್ರ್ರ ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ. ಈ ನಡುವೆ, ಕೇಂದ್ರ ಸರ್ಕಾರ ಕೂಡ ಇಂಥ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ. ಈ ಎಲ್ಲದರ ಕುರಿತಂತೆ ನೆಟ್​ಪ್ರಿಯರಲ್ಲಿ ತರಹೇವಾರಿ ಚರ್ಚೆಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ದೇಶದಲ್ಲಿ ನಮ್ಮಿಷ್ಟದ ಅನಿಸಿಕೆಗಳನ್ನು ವ್ಯಕ್ತಪಡಿಸಲು, ವಿಮರ್ಶೆ-ಟೀಕೆಗಳನ್ನು ಮಾಡಲು ಅವಕಾಶ ಇಲ್ಲವೆಂದರೆ ಏನರ್ಥ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇನ್ನು ಕೆಲವರದು ಬೇರೆಯದೇ ವಾದ. ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೆಂದು ಬೇಕಾಬಿಟ್ಟಿ ಬಳಸಲಾಗದು. ಅದಕ್ಕೊಂದು ಲಕ್ಷ್ಮಣರೇಖೆ ಇರಬೇಕು. ಅದಿಲ್ಲವಾದಲ್ಲಿ ಅನರ್ಥವಾಗುವ ಸಂಭವವೂ ಇರುತ್ತದೆ; ಇಂಥ ಎಷ್ಟೋ ಘಟನೆಗಳು ನಡೆದಿವೆ ಎಂಬುದು ಇವರ ಪ್ರತಿಪಾದನೆ. ಅಂತೂ, ಈ ಬಗ್ಗೆ ಚರ್ಚೆಯಂತೂ ಕಾವು ಪಡೆದಿದೆ.