50 ಸಾವಿರ ರೂ. ಮೇಲ್ಪಟ್ಟು ನಗದು ಸಾಗಿಸಲು ನಿರ್ಬಂಧ

ಚುನಾವಣೆ ಕರ್ತವ್ಯಕ್ಕೆ 21,283 ಸಿಬ್ಬಂದಿ ನಿಯೋಜನೆ | ಸುದ್ದಿಗೋಷ್ಠಿಯಲ್ಲಿ ಚುನಾವಣಾಧಿಕಾರಿ ಬೊಮ್ಮನಹಳ್ಳಿ ಸೂಚನೆ

ಬೆಳಗಾವಿ: ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ 50 ಸಾವಿರ ರೂ. ಮೇಲ್ಪಟ್ಟ ನಗದು ಹಾಗೂ ಬ್ಯಾಂಕುಗಳಲ್ಲಿ 1ಲಕ್ಷ ರೂ. ಮೇಲ್ಪಟ್ಟ ವ್ಯವಹಾರ ಮಾಡಲು ಪೂರಕ ದಾಖಲೆ ಕಡ್ಡಾಯ ಮಾಡಲಾಗಿದ್ದು, ಎಲ್ಲ ರೀತಿಯ ಹಣಕಾಸಿನ ವ್ಯವಹಾರದ ಮೇಲೆ ನಿಗಾ ವಹಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಸಭೆ ಚುನಾವಣೆ ಪಾರದರ್ಶಕ ಮತ್ತು ಭಯ ಮುಕ್ತವಾಗಿ ನಡೆಸಲು ಚುನಾವಣೆ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಷ್ಟ್ರೀಯ ಬ್ಯಾಂಕ್‌ಗಳು, ಸೊಸೈಟಿಗಳು ಸೇರಿದಂತೆ ಎಲ್ಲ ರೀತಿಯ ಬ್ಯಾಂಕ್‌ಗಳಲ್ಲಿ ನಿತ್ಯ ನಡೆಯುವ ಹಣಕಾಸಿನ ವಹಿವಾಟಿನ ಮೇಲೆ ನಿಗಾ ವಹಿಸಲಾಗುತ್ತಿದೆ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ 1ಲಕ್ಷ ರೂ. ಮೇಲ್ಪಟ್ಟು ಹಣ ವರ್ಗಾವಣೆ ಮಾಡಲು ಪೂರಕ ದಾಖಲೆಗಳನ್ನು ಸಲ್ಲಿಸಬೇಕು. 50 ಸಾವಿರ ರೂ. ಮೇಲ್ಪಟ್ಟು ನಗದು ವ್ಯವಹಾರ, ಇಲ್ಲವೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಣಿಕೆ ಮಾಡುವ ವೇಳೆ ದಾಖಲೆಗಳಿರಬೇಕು. ಒಂದು ವೇಳೆ ಯಾವುದೇ ದಾಖಲೆಗಳಿಲ್ಲದೆ ಹಣ ವರ್ಗಾವಣೆ ಮಾಡಿದರೆ ಅಂತಹ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದರು.

ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡ ಲೋಕಸಭೆ ಕ್ಷೇತ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 57 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಚೆಕ್‌ಪೋಸ್ಟ್‌ನಲ್ಲಿ ಸಿಸಿಟಿವಿ, ಜಿಪಿಎಸ್ ಅಳವಡಿಸಲಾಗುತ್ತಿದೆ. ಚುನಾವಣೆಯಲ್ಲಿ ಅಕ್ರಮಗಳ ಕುರಿತು ದೂರುಗಳನ್ನು ಸ್ವೀಕರಿಸಲು, ವಿಡಿಯೋ ಚಿತ್ರೀಕರಣ ಮಾಡಲು ಮತ್ತು ಖರ್ಚು ವೆಚ್ಚಗಳ ಮೇಲೆ ನಿಗಾ ವಹಿಸಲು 185 ತಂಡಗಳನ್ನು ರಚಿಸಲಾಗಿದೆ. ಇವುಗಳ ಮೇಲೆ 353 ಅಧಿಕಾರಿಗಳು ಸಂಪೂರ್ಣ ನಿಗಾ ವಹಿಸಲಿದ್ದಾರೆ ಎಂದು ವಿವರಿಸಿದರು.

ಚುನಾವಣೆ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ನರೇಗಾ, ಕುಡಿಯುವ ನೀರು ಮತ್ತು ಜಾನುವಾರಗಳಿಗೆ ಮೇವು ಬ್ಯಾಂಕ್ ಸ್ಥಾಪನೆ ಕಾಮಗಾರಿಗಳನ್ನು ಹೊರತುಪಡಿಸಿ ಯಾವುದೇ ಹೊಸ ಕಾಮಗಾರಿ ಕೈಗೊಳ್ಳುವಂತಿಲ್ಲ. ಈಗಾಗಲೇ ಆರಂಭವಾಗಿರುವ ಕಾಮಗಾರಿಗಳು ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳ ಪಟ್ಟಿ ನೀಡುವಂತೆ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಮಿಂಚಿನ ನೋಂದಣಿ: ಜಿಲ್ಲೆಯಲ್ಲಿ ಮತದಾನದ ಪಟ್ಟಿಯಿಂದ ಹೊರಗೆ ಉಳಿದಿರುವವರನ್ನು ಮತಟ್ಟಿಗೆ ಸೇರಿಸಲು ಫೆ.16ರಿಂದ ನಡೆದ ಮಿಂಚಿನ ನೋಂದಣಿಗೆ 1,03,053 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 83,120 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 19,933 ಅರ್ಜಿಗಳು ಪರಿಶೀಲನೆ ಹಂತದಲ್ಲಿವೆ. ಏಪ್ರಿಲ್ 4 ವರೆಗೆ ಮತದಾರರ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಚುನಾವಣಾಧಿಕಾರಿ ವಿನಂತಿಸಿದರು.

ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಬಿ.ಬೂದೆಪ್ಪ , ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ರಾಘವೇಂದ್ರ ಸುಹಾಷ ಇನ್ನಿತರರು ಇದ್ದರು.

17 ಸಾವಿರ ಸೇವಾ ಮತದಾರರು

ರಾಜ್ಯದಲ್ಲಿಯೇ ಅತಿ ಹೆಚ್ಚು 17,352 ಸೇವಾ ಮತದಾರರು ಬೆಳಗಾವಿ ಜಿಲ್ಲೆಯಲ್ಲಿದ್ದಾರೆ. ಇದರಲ್ಲಿ ಚಿಕ್ಕೋಡಿ-7487, ಬೆಳಗಾವಿ-6,956 ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ-2,909 ಸೇವಾ ಮತದಾರರಿದ್ದಾರೆ. 23,332 ಅಂಗವಿಕಲ ಮತದಾರರು ಹಾಗೂ 18 ರಿಂದ 19 ವರ್ಷ ಒಳಗಾಗಿ 60,654 ಯುವ ಮತದಾರರಿದ್ದಾರೆ. ಒಟ್ಟಿನಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶೇ.70.13 ರಷ್ಟು ಜನರು ಮತದಾನದ ಹಕ್ಕು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು.

21 ಸಾವಿರ ಸಿಬ್ಬಂದಿ ನಿಯೋಜನೆ

ಚಿಕ್ಕೋಡಿ, ಬೆಳಗಾವಿ ಹಾಗೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣೆ ಕರ್ತವ್ಯಕ್ಕಾಗಿ 21,283 ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. 4,434 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ ದುರ್ಬಲ ಮತಗಟ್ಟೆಗಳಿಗೆ ಸಿಸಿಟಿವಿ ಅಳವಡಿಸಲಾಗುತ್ತಿದೆ. ಚುನಾವಣೆ ಮುಗಿಯುವರೆಗೆ ಯಾವುದೇ ಸರ್ಕಾರಿ ಸಿಬ್ಬಂದಿಗೆ ರಜೆ ಇಲ್ಲ. ಜಿಲ್ಲೆಯನ್ನು ಬಿಟ್ಟು ಹೊರಗಡೆ ಹೋಗಬೇಕಾದರೆ ಜಿಲ್ಲಾ ಚುನಾವಣಾಧಿಕಾರಿ ಕಡೆಯಿಂದ ಪರವಾನಗಿ ಪಡೆಯುವುದು ಕಡ್ಡಾಯ ಎಂದು ಚುನಾವಣಾಧಿಕಾರಿ ಬೊಮ್ಮನಹಳ್ಳಿ ಸೂಚಿಸಿದರು.

ಜಾತ್ರೆ, ಮದುವೆಗಳಿಗೆ ನಿರ್ಬಂಧ ಇಲ್ಲ: ಲೋಕಸಭೆ ಚುನಾವಣೆ ನೀತಿ ಸಂಹಿತೆಯಿಂದ ವಿವಿಧ ಜಯಂತಿ, ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಸಮಾರಂಭ, ಖಾಸಗಿ ವ್ಯಕ್ತಿಗಳ ಸುದ್ದಿಗೋಷ್ಠಿ, ಶಾಲೆ-ಕಾಲೇಜುಗಳ ವಾರ್ಷಿಕ ಸಮಾರಂಭಗಳಿಗೆ ನಿರ್ಬಂಧ ಇಲ್ಲ. ಈ ಎಲ್ಲ ಕಾರ್ಯಕ್ರಮಗಳಲ್ಲಿ ರಾಜಕೀಯ ಚಟುವಟಕೆಗಳು ನಡೆದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಚುನಾವಣೆ ಅಧಿಕಾರಿಗಳು ತಿಳಿಸಿದರು.

ಬೆಳಗಾವಿ ನಗರ ಕಮಿಷನರೇಟ್ ವ್ಯಾಪ್ತಿಯ 3 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ 792 ಮತಗಟ್ಟೆಗಳಿವೆ. ಚುನಾವಣೆ ಕರ್ತವ್ಯಕ್ಕೆ 1,400 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 485 ರೌಡಿಶೀಟರ್‌ಗಳಿಂದ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.
| ಬಿ.ಎಸ್.ಲೋಕೇಶಕುಮಾರ್, ನಗರ ಪೊಲೀಸ್ ಆಯುಕ್ತ