ಮಾರ್ಚ್​ ಮೊದಲ ವಾರ ಘೋಷಣೆಯಾಗಲಿದೆ ಲೋಕಸಭೆ ಚುನಾವಣೆ ವೇಳಾಪಟ್ಟಿ: 6-7 ಹಂತದಲ್ಲಿ ಮತದಾನ?

ನವದೆಹಲಿ: ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣೆ ಆಯೋಗವು ಮಾರ್ಚ್​ ಮೊದಲ ವಾರ ಘೋಷಣೆ ಮಾಡಲಿದ್ದು, ಆರರಿಂದ ಏಳು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಗಳಿವೆ.
ಚುನಾವಣೆ ಆಯೋಗ ಬಲ್ಲ ಮೂಲಗಳ ಮಾಹಿತಿಯನ್ನು ಉಲ್ಲೇಖಿಸಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಮತ್ತು ಪಿಟಿಐ ವರದಿ ಮಾಡಿವೆ.

ಎಷ್ಟು ಹಂತಗಳಲ್ಲಿ ಚುನಾವಣೆ ನಡೆಯಬೇಕು, ಯಾವ ತಿಂಗಳಲ್ಲಿ ಮತದಾನ ನಡೆಯಬೇಕು ಎಂಬುದರ ಕುರಿತು ಚುನಾವಣೆ ಆಯೋಗ ಚರ್ಚೆ ನಡೆಸುತ್ತಿದೆ. ಭದ್ರತಾ ಸಿಬ್ಬಂದಿಯ ಅಗತ್ಯ ಸವಲತ್ತುಗಳನ್ನು ಗಮನದಲ್ಲಿಟ್ಟುಕೊಂಡು ಆಯೋಗ ತನ್ನ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಲಾಗಿದೆ.

ಇದರ ಜತೆಗೇ, ಒಡಿಶಾ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಸಿಕ್ಕಿಂ, ಜಮ್ಮು ಕಾಶ್ಮೀರ ವಿಧಾನಸಭೆಗಳಿಗೂ ಲೋಕಸಭೆ ಚುನಾವಣೆ ಜತೆಗೇ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಈ ಲೋಕಸಭೆಯ ಅವಧಿ ಜೂನ್​ 3ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಅಷ್ಟರ ಒಳಗಾಗಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಕಳೆದ ಲೋಕಸಭೆ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣೆ ಆಯೋಗವು 2014ರ ಮಾರ್ಚ್​ 5 ರಂದು ಪ್ರಕಟಿಸಿತ್ತು. ಏಪ್ರಿಲ್​, ಮೇ ತಿಂಗಳಲ್ಲಿ 9 ಹಂತಗಳಲ್ಲಿ ಚುನಾವಣೆ ನಡೆದಿತ್ತು.