ಉಪಸಮರ ಮತದಾನಕ್ಕೆ ಚುನಾವಣಾ ಆಯೋಗ ಸರ್ವ ಸನ್ನದ್ಧ

ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆ ನ.3ರಂದು ನಡೆಯಲಿದ್ದು, ಚುನಾವಣಾ ಆಯೋಗ ಸರ್ವ ಸನ್ನದ್ಧವಾಗಿದೆ. ಮತದಾನ ತಯಾರಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಮತದಾರರು ಯಾವುದೇ ಆಮಿಷ ಹಾಗೂ ಒತ್ತಡಕ್ಕೆ ಒಳಗಾಗದೆ ಮತ ಚಲಾಯಿಸಬೇಕು ಎಂದರು. ಬಳ್ಳಾರಿ, ಶಿವಮೊಗ್ಗ, ಮಂಡ್ಯ ಲೋಕಸಭಾ ಹಾಗೂ ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 6,453 ಮತದಾನ ಕೇಂದ್ರಗಳಿದ್ದು 1,502 ಮತದಾನ ಕೇಂದ್ರಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಇಲ್ಲಿ ಛಾಯಾಗ್ರಾಹಕರ ನೇಮಕ, ಅಂತರ್ಜಾಲ ಪ್ರಸಾರ ವ್ಯವಸ್ಥೆ, ಮೈಕ್ರೋ ವೀಕ್ಷಕರ ನೇಮಕ ಮಾಡಲಾಗುತ್ತಿದೆ ಎಂದು ವಿವರಿಸಿದರು.

ವಿವಿಧ ಕಾರಣಗಳಿಗಾಗಿ ಬಳ್ಳಾರಿಯಲ್ಲಿ 11, ಶಿವಮೊಗ್ಗದಲ್ಲಿ 2 ಹಾಗೂ ರಾಮನಗರದಲ್ಲಿ ಒಂದು ಕೇಂದ್ರ ಬದಲಿಸಲಾಗಿದೆ. 57 ಸಖೀ ಮತದಾನ ಕೇಂದ್ರ ತೆರೆಯಲಾಗುತ್ತದೆ. ಇಲ್ಲಿ ಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ಕಾರ್ಯನಿರ್ವಹಿಸುತ್ತಾರೆ. ಭದ್ರತೆಗಾಗಿ 39 ಸಿಆರ್​ಪಿಎಫ್ ತುಕಡಿ ನಿಯೋಜಿಸಲಾಗಿದೆ ಎಂದರು. ಈವರೆಗೆ 8,022 ಶಸ್ತ್ರಾಸ್ತ್ರ ಠೇವಣಿ ಇಟ್ಟುಕೊಳ್ಳಲಾಗಿದೆ, 60,508 ಲೀಟರ್ ಮದ್ಯ, 1.4 ಕೆಜಿ ಮಾದಕ ವಸ್ತು ಹಾಗೂ 54.80 ಲಕ್ಷ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ. ಚುನಾವಣೆ ಅಕ್ರಮ ತಡೆಗಟ್ಟಲು 273 ಸ್ಥಿರ ಕಣ್ಗಾವಲು ತಂಡ, 169 ಫ್ಲೇಯಿಂಗ್ ದಳ, 45 ಛಾಯಾಗ್ರಹಣ ತಂಡ, 29 ಲೆಕ್ಕ ಪರಿವೀಕ್ಷಕರು, 28 ಲೆಕ್ಕ ನಿರ್ವಹಣಾ ತಂಡ, 142 ಚೆಕ್ ಪೋಸ್ಟ್ ರಚಿಸಲಾಗಿದೆ ಎಂದು ತಿಳಿಸಿದರು.

ಕ್ರಿಮಿನಲ್ ಕಥೆ ಹೇಳಲೇಬೇಕು!

ಈ ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಅವರ ಕ್ರಿಮಿನಲ್ ಪ್ರಕರಣಗಳ ಕಥೆ ಜಾಹೀರುಗೊಳಿಸುವುದು ಅನಿವಾರ್ಯ ಹಾಗೂ ಕಡ್ಡಾಯ. ಸುಪ್ರೀಂ ಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೂಚನೆಯೊಂದನ್ನು ನೀಡಿದ್ದು, ಸ್ಪರ್ಧೆಯಲ್ಲಿರುವ ಅಭ್ಯರ್ಥಿ ಕ್ರಿಮಿನಲ್ ಮೊಕದ್ದಮೆ ಬಾಕಿ ಇದ್ದಲ್ಲಿ ಅಥವಾ ದಂಡನೆಗೆ ಒಳಪಟ್ಟಿದ್ದಲ್ಲಿ ಅಂಥ ಪೂರ್ಣ ವಿವರಗಳನ್ನು ಆಯೋಗ ನಿಗದಿಪಡಿಸಿರುವ ನಮೂನೆ- ಸಿ1ರಲ್ಲಿ ಘೋಷಿಸಿ, ಕ್ಷೇತ್ರದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ದಿನಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮ ಮೂಲಕ ಮತದಾನ ಮುಕ್ತಾಯವಾಗುವ ನಿಕಟಪೂರ್ವ 48 ಗಂಟೆಗಳ ಅವಧಿಯಲ್ಲಿ ಪ್ರಚಾರ ಮಾಡಬೇಕು. ರಾಜಕೀಯ ಪಕ್ಷಗಳು ಅಭ್ಯರ್ಥಿಯ ಕ್ರಿಮಿನಲ್ ಮೊಕದ್ದಮೆ ಕುರಿತು ಪಕ್ಷದ ವೆಬ್​ಸೈಟ್​ನಲ್ಲಿ ನಮೂನೆ ಸಿ-2ನಲ್ಲಿ ಪ್ರಕಟಿಸಬೇಕು. ಈ ಎರಡು ಕ್ರಮ ಆಗದಿದ್ದಲ್ಲಿ, ಮಾಹಿತಿ ಅರ್ಧಂಬರ್ಧ ನೀಡಿದಲ್ಲಿ ಅಭ್ಯರ್ಥಿಯ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲು ಆಯೋಗಕ್ಕೆ ಅವಕಾಶವಿದೆ.

ಅಂಗವಿಕಲರಿಗೆ ವಾಹನ ಸೇವೆ

ಐದೂ ಕ್ಷೇತ್ರಗಳಲ್ಲಿ ಅಂಗವಿಕಲರು ಮತದಾನದ ದಿನದಂದು ಮತ ಕೇಂದ್ರಕ್ಕೆ ತೆರಳಲು ವಾಹನ ವ್ಯವಸ್ಥೆ ಪಡೆದುಕೊಳ್ಳಲು ಅವಕಾಶವಿದೆ. ಆಯೋಗದ ಮೊಬೈಲ್ ಆಪ್ ಮೂಲಕ ಬುಕಿಂಗ್ ಮಾಡಿದರೆ, ಉಚಿತ ಪಿಕಪ್ ಡ್ರಾಪ್ ಸೌಲಭ್ಯ ಸಿಗಲಿದೆ.