ಐದು ಕ್ಷೇತ್ರಗಳಲ್ಲಿ ಮತದಾನ ಇಂದು

ಬೆಂಗಳೂರು: ಲೋಕಸಭೆಯ 3, ವಿಧಾನಸಭೆಯ 2 ಸ್ಥಾನಗಳಿಗೆ ಉಪ ಚುನಾವಣೆಗೆ ಮತಗಟ್ಟೆ ಸಿಬ್ಬಂದಿ ಸಾಮಗ್ರಿಯೊಂದಿಗೆ ತೆರಳಿದ್ದಾರೆ.

ಶನಿವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ನ.6 ರಂದು ಮತ ಎಣಿಕೆ ನಡೆಯಲಿದೆ. ಐದೂ ಕ್ಷೇತ್ರಗಳಲ್ಲಿ ಒಟ್ಟು 54,54,275 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ 1,901, ಶಿವಮೊಗ್ಗದಲ್ಲಿ 2,002, ಮಂಡ್ಯದಲ್ಲಿ 2,047, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ 226, ರಾಮನಗರದಲ್ಲಿ 277 ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು 6,453 ಮತಗಟ್ಟೆಗಳಿಗೆ 9,822 ಬ್ಯಾಲೆಟ್ ಯೂನಿಟ್, 8,438 ಕಂಟ್ರೋಲ್ ಯೂನಿಟ್ ಮತ್ತು 8,922 ವಿ.ವಿ.ಪ್ಯಾಟ್​ಗಳನ್ನು ಸಿದ್ಧಪಡಿಸಲಾಗಿದೆ. ಬಳ್ಳಾರಿಯಲ್ಲಿ 17,13,653, ಶಿವಮೊಗ್ಗ 16,45,519, ಮಂಡ್ಯ 16,85,037, ಜಮಖಂಡಿಯಲ್ಲಿ 2,03,706, ರಾಮನಗರದಲ್ಲಿ 2,06,360 ಮತದಾರರಿದ್ದಾರೆ.

ಚುನಾವಣೆ ರದ್ದತಿಗೆ ಬಿಜೆಪಿ ಆಗ್ರಹ

ಬೆಂಗಳೂರು: ರಾಮನಗರದಲ್ಲಿ ಚುನಾವಣೆಯ ಅಂತಿಮ ಹಂತದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಆಮಿಷ ಅಥವಾ ಬೆದರಿಕೆಯೊಡ್ಡಿ ಸೆಳೆದಿದ್ದು, ಚುನಾವಣೆಯನ್ನು ರದ್ದುಪಡಿಸಿ ಮತ್ತೊಮ್ಮೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ.

ಈ ಕುರಿತು ರಾಷ್ಟ್ರೀಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಿ. ನಾ. ರಾಮು ಕೇಂದ್ರ ಚುನಾವಣಾ ಆಯೋಗಕ್ಕೆ ಗುರುವಾರ ರಾತ್ರಿ ಇ-ಮೇಲ್ ಮೂಲಕ ತಿಳಿಸಿದ್ದಾರೆ. ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಇದರಿಂದ ಅಡ್ಡಿಯಾಗಿದೆ. ಪಕ್ಷ ನಿಡಿರುವ ಬಿ ಫಾರಂ ಅನ್ನು ರದ್ದುಪಡಿಸಿ ಬೇರೆ ಅಭ್ಯರ್ಥಿಗೆ ಅವಕಾಶ ಮಾಡಿಕೊಡಬೇಕು ಎಂದಿದ್ದಾರೆ.

ಬೆಂಗಳೂರಿನಲ್ಲಿ ಮುಖ್ಯ ಚುನಾವಣಾಧಿ ಕಾರಿಗೂ ಈ ಕುರಿತು ಬಿಜೆಪಿ ದೂರು ನೀಡಿದೆ. ಅನ್ಯಾಯದ ಮಾರ್ಗದಲ್ಲಿ ಪಕ್ಷದ ಅಭ್ಯರ್ಥಿಯನ್ನು ಸೆಳೆಯಲಾಗಿದೆ. ಈ ಕಾರ್ಯಕ್ಕೆ ಚಂದ್ರಶೇಖರ್, ಡಿ.ಕೆ. ಸುರೇಶ್, ಅನಿತಾ ಕುಮಾರಸ್ವಾಮಿ, ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಕುದುರೆ ವ್ಯಾಪಾರ ಮಾಡಿದ ಕಾರಣಕ್ಕೆ ಪ್ರಕರಣ ದಾಖಲಿಸಬೇಕು, ಚುನಾವಣೆ ಮುಂದೂಡಬೇಕೆಂದು ಆಗ್ರಹಿಸಿದ್ದಾರೆ.

ದಲಿತ ಪರರಿಗೆ ಮತ ನೀಡಿ: ಎಲ್ಲ ದಲಿತ ಸಮುದಾಯದ ಮತದಾರರೂ ಬಿಜೆಪಿಗೆ ಮತ ನೀಡಬೇಕೆಂದು ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಡಿ.ಎಸ್. ವೀರಯ್ಯ ಮನವಿ ಮಾಡಿದ್ದಾರೆ.

ಪಕ್ಷಕ್ಕೆ ಮತವಿರಲಿ ಎಂದ ಭಾಜಪ!

ಬೆಂಗಳೂರು: ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಕೊನೇ ಕ್ಷಣದಲ್ಲಿ ನಿವೃತ್ತರಾಗಿದ್ದಕ್ಕೆ ಆಘಾತಗೊಂಡಿದ್ದರೂ ಸ್ಥಳೀಯ ಕಾರ್ಯಕರ್ತರ ಸಿಟ್ಟನ್ನು ಕಡಿಮೆಗೊಳಿಸುವ ಪ್ರಯತ್ನವಾಗಿ ‘ಪಕ್ಷಕ್ಕೆ ನಮ್ಮ ಮತ, ಅಭ್ಯರ್ಥಿಗಲ್ಲ’ ಎಂಬ ಅಭಿಯಾನವನ್ನು ಬಿಜೆಪಿ ಬೆಂಬಲಿಗರು ಶುಕ್ರವಾರ ನಡೆಸಿದರು.

ಫೇಸ್​ಬುಕ್, ಟ್ವಿಟರ್, ವಾಟ್ಸ್ ಆಪ್​ನಲ್ಲಿ ಹತ್ತಾರು ಪೋಸ್ಟರ್ ರೂಪಿಸಿ ದಿನಪೂರ್ತಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. 150-200 ಕಾರ್ಯಕರ್ತರು ಶುಕ್ರವಾರ ಬೆಳಗ್ಗೆಯೇ ರಾಮನಗರಕ್ಕೆ ತೆರಳಿದ್ದಾರೆ. ಅಭ್ಯರ್ಥಿ ಯಾರೇ ಇರಲಿ, ಇಲ್ಲದಿರಲಿ ನನ್ನ ಮತ ಬಿಜೆಪಿಗೆ. ನೋಟಾ ಒತ್ತಿ ಮೂರ್ಖರಾಗುವವರು ನಾವಲ್ಲ ಎಂಬಂತಹ ಅನೇಕ ಪೋಸ್ಟರ್ಸ್ ರೂಪಿಸಲಾಗಿದೆ. ಪ್ರಧಾನಿ ಮೋದಿ ಭಾವಚಿತ್ರವಿರುವ ಪೋಸ್ಟರ್​ನಲ್ಲಿ, ‘ಈ ವ್ಯಕ್ತಿಯ ಪ್ರಾಮಾಣಿಕತೆ, ಶ್ರದ್ಧೆಗೆ, ತ್ಯಾಗಕ್ಕೆ ನನ್ನ ಮತ’ ಎಂದು ಬರೆಯಲಾಗಿದೆ. ಇದೇ ರೀತಿ ರೂಪಿಸಿರುವ ಮತ್ತೊಂದು ಪೋಸ್ಟರ್​ನಲ್ಲಿ ಅಭ್ಯರ್ಥಿ ಹೆಸರು ಹಿಂದುತ್ವ ಎಂದು ನಮೂದಿಸಿ ಮೋದಿ, ಶ್ಯಾಮ್್ರಸಾದ್ ಮುಖರ್ಜಿ, ಪಂ.ದೀನದಯಾಳ್ ಉಪಾಧ್ಯಾಯ ಅವರ ಭಾವಚಿತ್ರ ಹಾಕಲಾಗಿದೆ. ಕಮಲದ ಗುರುತಿಗೆ ನನ್ನ ಮತ ಎಂದಿರುವ ಪೋಸ್ಟರನ್ನು ಬಿಜೆಪಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಫೇಸ್​ಬುಕ್​ನಲ್ಲಿ ಪ್ರಕಟಿಸಿದ್ದಾರೆ. ಚುನಾವಣೆ ಮುಗಿಯುವವರೆಗೆ ನಡೆಯುವ ಈ ಅಭಿಯಾನದಿಂದ ‘ಎಲ್ಲರಿಗೂ’ ತಕ್ಕ ಪಾಠವಾಗಲಿದೆ ಎಂದಿದ್ದಾರೆ.