ದೇಶದ ವಿವಿಧೆಡೆ ಐಟಿ ದಾಳಿ ಹಿನ್ನೆಲೆ: ಕೇಂದ್ರೀಯ ನೇರ ತೆರಿಗೆ ನಿಗಮದ ಚೇರ್ಮನ್​ ಜತೆ ಇಸಿ ಚರ್ಚೆ

ನವದೆಹಲಿ: ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ಮುಖ್ಯ ಚುನಾವಣಾ ಆಯೋಗದ ಅಧಿಕಾರಿಗಳು ಮಂಗಳವಾರ ಕೇಂದ್ರೀಯ ನೇರ ತೆರಿಗೆಗಳ ನಿಗಮದ (ಸಿಬಿಡಿಟಿ) ಚೇರ್ಮನ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ ಎಂಬ ಕಾಂಗ್ರೆಸ್​ ಆರೋಪದ ಹಿನ್ನೆಲೆಯಲ್ಲಿ ಕಂದಾಯ ಕಾರ್ಯದರ್ಶಿ ಎ.ಬಿ. ಪಾಂಡೆ ಮತ್ತು ಸಿಬಿಡಿಟಿ ಚೇರ್ಮನ್​ ಪಿ.ಸಿ. ಮೋಡಿ ಅವರನ್ನು ಕಚೇರಿಗೆ ಕರೆಯಿಸಿಕೊಂಡ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿಗಳ ಕುರಿತು ಮಾಹಿತಿ ಪಡೆದುಕೊಂಡರು.

ಕಾನೂನು ಅನುಷ್ಠಾನ ಸಂಸ್ಥೆಗಳು ತಟಸ್ಥವಾಗುಳಿಯುವುದು, ಪಕ್ಷಪಾತರಹಿತವಾಗಿ ಮತ್ತು ತಾರತಮ್ಯರಹಿತವಾಗಿ ಕಾರ್ಯನಿರ್ವಹಿಸಬೇಕು ಎಂದು 2019ರ ಏಪ್ರಿಲ್​ 7ರ ಚುನಾವಣಾ ಆಯೋಗದ ಆದೇಶ ಮತ್ತು ಅದನ್ನು ಜಾರಿಗೊಳಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಚುನಾವಣಾ ಆಯೋಗದ ವಕ್ತಾರ ತಿಳಿಸಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಕಾನೂನು ಅನುಷ್ಠಾನ ಸಂಸ್ಥೆಗಳನ್ನು ಬಳಸಿಕೊಳ್ಳುವುದಾದರೆ, ಈ ಕುರಿತು ಚುನಾವಣಾ ಆಯೋಗಕ್ಕೂ ಮಾಹಿತಿ ನೀಡಬೇಕು ಎಂದು ಚುನಾವಣಾ ಆಯೋಗ ಭಾನುವಾರ ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಕೆಲದಿನಗಳ ಹಿಂದೆ ಕರ್ನಾಟಕ ಹಾಗೂ ಇತ್ತೀಚೆಗೆ ಮಧ್ಯಪ್ರದೇಶ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ಅದಿಕಾರಿಗಳು ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಹಣಕಾಸು ಸಚಿವಾಲಯಕ್ಕೆ ಈ ಸೂಚನೆ ನೀಡಿತ್ತು ಎನ್ನಲಾಗಿದೆ.

ನೀತಿ ಸಂಹಿತೆ ಜಾರಿಗೆ ಬಂದ ನಂತರದಲ್ಲಿ ಈ ದಾಳಿಗಳನ್ನು ಸಂಘಟಿಸುವ ಮೂಲಕ ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ತನಗೆ ಬೇಕಾದಂತೆ ಬಳಸಿಕೊಂಡು ಪ್ರತಿಪಕ್ಷಗಳ ವಿರುದ್ಧ ಕತ್ತಿ ಮಸೆಯುತ್ತಿದೆ ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದರು. (ಏಜೆನ್ಸೀಸ್​)