ನಿಮ್ಮ ಮತಕ್ಕೆ 72 ರೂಪಾಯಿ ಖರ್ಚು

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಖರ್ಚು- ವೆಚ್ಚದ ಪ್ರಕಾರ ಭಾರತದಲ್ಲಿ ಪ್ರತಿ ಮತದಾರರ ಮೇಲೆ 72 ರೂ. ವ್ಯಯಿಸಲಾಗುತ್ತಿದೆ. ಅದೇ ರಾಜಕೀಯ ಪಕ್ಷಗಳು 8 ಪಟ್ಟು ಅಧಿಕವಾಗಿ 555 ರೂ. ಖರ್ಚು ಮಾಡುತ್ತಿವೆ!

ಮತೋತ್ಸವದಲ್ಲಿ ಸಾರ್ವಜನಿಕರ ಮತದಾನಕ್ಕೆ ಬೆಲೆ ಕಟ್ಟಲಾಗದು. ಆದಾಗ್ಯೂ ಚುನಾವಣಾ ಆಯೋಗದ ಬಜೆಟ್ ಹಾಗೂ ದೆಹಲಿ ಮೂಲದ ಮಾಧ್ಯಮ ಅಧ್ಯಯನ ಸಂಶೋಧನಾ ಸಂಸ್ಥೆ ಪ್ರಕಾರ ಈ ಅಂಕಿ-ಅಂಶಗಳು ಬಹಿರಂಗವಾಗಿವೆ.

17ನೇ ಲೋಕಸಭಾ ಚುನಾವಣೆಗೆ 6500 ಕೋಟಿ ರೂ. ಖರ್ಚಾಗುವ ಅಂದಾಜಿದೆ. ಭಾರತದಲ್ಲಿ 90 ಕೋಟಿ ಮತದಾರರಿದ್ದು, ಪ್ರತಿ ಮತದಾರರ ಮೇಲೆ 72 ರೂ. ವ್ಯಯಿಸಿದಂತಾಗುತ್ತದೆ. 2014ರ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬ ಮತದಾರನ ಮೇಲೆ 46 ರೂ. ಖರ್ಚು ಮಾಡಲಾಗಿತ್ತು. ಆಗ ಚುನಾವಣಾ ಬಜೆಟ್ 3870 ಕೋಟಿ ರೂ. ಇಡಲಾಗಿತ್ತು. ಇದು ಚುನಾವಣಾ ಆಯೋಗದ ಖರ್ಚಿಗೆ ಸೀಮಿತವಾಗಿದೆ. ಪ್ರತಿ ಅಭ್ಯರ್ಥಿಯು ಖರ್ಚು ಮಾಡುವ 70 ಲಕ್ಷ ರೂ. ಹಾಗೂ ರಾಜಕೀಯ ಪಕ್ಷಗಳ ಖರ್ಚು ಸೇರಿಸಿದರೆ ಈ ಮೊತ್ತ ಇನ್ನಷ್ಟು ಹೆಚ್ಚಾಗಲಿದೆ.

ಪೈಸೆಗಳ ಚುನಾವಣೆ!: ಅಂದ್ಹಾಗೆ 1952ರಲ್ಲಿ ನಡೆದ ಮೊದಲ ಚುನಾವಣೆಗೆ ಪ್ರತಿಯೊಬ್ಬ ಮತದಾರನ ಮೇಲೆ ಖರ್ಚಾಗಿದ್ದು ಕೇವಲ 60 ಪೈಸೆ. ಆ ಚುನಾವಣೆಯ ಒಟ್ಟು ಬಜೆಟ್ 10.45 ಕೋಟಿ ರೂ. ಆಗಿತ್ತು. ನಂತರ ನಡೆದ 4 ಲೋಕಸಭಾ ಚುನಾವಣೆಗಳು ಇದಕ್ಕಿಂತ ಕಡಿಮೆ ಮೊತ್ತದಲ್ಲಿ ನಡೆದಿವೆ. ಪ್ರತಿ ಮತದಾರರಿಗೆ 30ರಿಂದ 40 ಪೈಸೆವರೆಗೆ ಮಾತ್ರ ಖರ್ಚು ಮಾಡಲಾಗುತ್ತಿತ್ತು. 1980ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಪ್ರತಿ ಮತದಾರರಿಗೆ 1.5 ರೂ. ವ್ಯಯಿಸಲು ಆರಂಭಿಸಲಾಯಿತು.

ನೀತಿ ಸಂಹಿತೆ ಉಲ್ಲಂಘನೆ

ನವದೆಹಲಿ: ಮಹಾರಾಷ್ಟ್ರದ ಲಾತೂರ್​ನಲ್ಲಿ ಚುನಾವಣಾ ಪ್ರಚಾರದ ವೇಳೆ ಪುಲ್ವಾಮಾ ಹಾಗೂ ಬಾಲಾಕೋಟ್ ದಾಳಿಯನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದು ಮೇಲ್ನೋಟಕ್ಕೆ ನೀತಿಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ. ಪ್ರಥಮ ಬಾರಿಗೆ ಮತ ಚಲಾಯಿಸುವವರು ತಮ್ಮ ಮತವನ್ನು ಬಾಲಾಕೋಟ್​ನಲ್ಲಿ ವಾಯದಾಳಿ ನಡೆಸಿದ ವೀರ ಯೋಧರಿಗೆ ಹಾಗೂ ಪುಲ್ವಾಮಾದ ಹುತಾತ್ಮರಿಗೆ ಅರ್ಪಿಸಬೇಕು ಎಂದು ಮೋದಿ ಹೇಳಿಕೆ ನೀಡಿದ್ದರು. ಈ ಕುರಿತ ವರದಿಯನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ.

50 ಸಾವಿರ ಕೋಟಿ ರೂ. ಚುನಾವಣೆ

ದೆಹಲಿ ಮೂಲದ ಅಧ್ಯಯನ ಸಂಸ್ಥೆ ಪ್ರಕಾರ 2019ರ ಲೋಕಸಭಾ ಚುನಾವಣೆಗೆ ಬರೋಬ್ಬರಿ 50 ಸಾವಿರ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇದು ಅಮೆರಿಕದ ಚುನಾವಣೆಗಿಂತ ದುಬಾರಿ ಎನಿಸಿದೆ. 2014ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚುನಾವಣಾ ವೆಚ್ಚದಲ್ಲಿ ಶೇ.40 ಏರಿಕೆಯಾಗಿದ್ದು, ಪ್ರತಿಯೊಬ್ಬರಿಗೆ 555 ರೂ. ಆಗಲಿದೆ.

Leave a Reply

Your email address will not be published. Required fields are marked *