ಯಕ್ಷಗಾನದ ಮೇಲೆ ಆಯೋಗ ಕಣ್ಣು

ಭರತ್ ಶೆಟ್ಟಿಗಾರ್ ಮಂಗಳೂರು

ಕಳೆದ ವಿಧಾನಸಭಾ ಚುನಾವಣೆಯಲ್ಲ್ಲಿ ಯಕ್ಷಗಾನ ಪ್ರದರ್ಶನದ ಮೇಲೆ ಪ್ರಹಾರ ಮಾಡಿದ್ದ ಚುನಾವಣಾ ಆಯೋಗ, ಈ ಬಾರಿಯೂ ಯಕ್ಷಗಾನದ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಉಡುಪಿ ಜಿಲ್ಲೆಯಲ್ಲಿ ನೀತಿ ಸಂಹಿತೆ ನೆಪವೊಡ್ಡಿ ಯಕ್ಷಗಾನ ಪ್ರದರ್ಶನಕ್ಕೆ ರಾತ್ರಿ 10 ಗಂಟೆ ಬಳಿಕ ಮೈಕ್ ಬಳಕೆ ನಿಷೇಧಿಸಲಾಗಿದ್ದು, ದ.ಕ.ಜಿಲ್ಲೆಯಲ್ಲಿ ಶಬ್ಧ ಕಡಿಮೆ ಮಾಡಿ ಪ್ರದರ್ಶನ ಆಯೋಜಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಸೂಚಿಸಿದ್ದಾರೆ. ದ.ಕ-ಉಡುಪಿ-ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ಮೇಳಗಳಿಗೆ ನೀತಿ ಸಂಹಿತೆ ಅವಧಿಯಲ್ಲಿ ಎಲ್ಲೆಲ್ಲ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎನ್ನುವ ಮಾಹಿತಿ ಒದಗಿಸುವಂತೆ ಆಯೋಗ ಸೂಚಿಸಿದೆ. ಆಯೋಗದ ಈ ಕ್ರಮಕ್ಕೆ ಯಕ್ಷಗಾನ ಸಂಘಟಕರು, ಮೇಳದ ಯಜಮಾನರು, ಕಲಾವಿದರಿಂದ ವಿರೋಧ ವ್ಯಕ್ತವಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಯಕ್ಷಗಾನದಲ್ಲಿ ಮೈಕ್ ಬಳಸದಂತೆ ಆಯೋಗ ಸೂಚಿಸಿತ್ತು. ರಾತ್ರಿ ನಾಟಕ ಪ್ರದರ್ಶನಕ್ಕೂ ಆಯೋಗ ಷರತ್ತು ವಿಧಿಸಿದೆ.

ರಾಜಕೀಯ ವಿಡಂಬನೆಗೂ ಆಕ್ಷೇಪ: ರಾಜಕೀಯ ವಲಯದಲ್ಲಿ ನಡೆಯುವ ಕೆಲವೊಂದು ಹಾಸ್ಯ ಸನ್ನಿವೇಶಗಳು, ಮಾತುಕತೆಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುವುದರ ಜತೆಗೆ ಯಕ್ಷಗಾನದ ಹಾಸ್ಯ ಕೇಳಿಬರುತ್ತಿದೆ. ಆದರೆ, ಇದನ್ನು ಹಾಸ್ಯವಾಗಿ ಸ್ವೀಕರಿಸಲು ಸಾಧ್ಯವಾಗದ ಕೆಲವು ನಾಯಕರು ಕಲಾವಿದರ ವಿರುದ್ಧ ದೂರು ನೀಡಿದ್ದಾರೆ. ಹೀಗಾಗಿ ಯಕ್ಷಗಾನದಲ್ಲಿ ರಾಜಕೀಯ ವಿಡಂಬನೆ ಮಾಡದಂತೆ ಆಯೋಗ ಎಚ್ಚರಿಕೆ ನೀಡಿದೆ. ಚುನಾವಣೆಗಳು ಹಿಂದೆಯೂ ನಡೆಯುತ್ತಿದ್ದವು. ಆದರೆ, ಯಕ್ಷಗಾನಕ್ಕೆ ನೀತಿ ಸಂಹಿತೆ ಅಡ್ಡಿ ಆಗುತ್ತಿರಲಿಲ್ಲ. ಈಗ ನೀತಿ ಸಂಹಿತೆ ಹೆಸರಿನಲ್ಲಿ ಕಲೆಯನ್ನು ದಮನಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಅಭಿಪ್ರಾಯ ಯಕ್ಷಗಾನ ಪ್ರೇಮಿಗಳದು.

ಹಾಸ್ಯದಲ್ಲಿ ರಾಜಕೀಯ ಹೊಸತಲ್ಲ: ಯಕ್ಷಗಾನದಲ್ಲಿ ರಾಜಕೀಯ ವಿಡಂಬನೆ ಇದೇ ಮೊದಲಲ್ಲ, ಹಿಂದೆಯೂ ರಾಜಕೀಯವನ್ನು ಹಾಸ್ಯ ಮೂಲಕ ತೋರಿಸಸಲಾಗುತ್ತಿತ್ತು. 1978ರಲ್ಲಿ ಸುರತ್ಕಲ್‌ನಲ್ಲಿ ನಡೆದ ಯಕ್ಷಗಾನ ಪ್ರದರ್ಶನವೊಂದರಲ್ಲಿ ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಮತ್ತು ಪ್ರಧಾನಿ ಇಂದಿರಾ ಗಾಂಧಿಯವರನ್ನು ಕಲಾವಿದರು ಅಣಕಿಸಿದ್ದರು. ಇದನ್ನು ರಾಜಕೀಯ ಪಕ್ಷದ ನಾಯಕರು ನೋಡಿ ಹಾಸ್ಯವಾಗಿ ಸ್ವೀಕರಿಸುತ್ತಿದ್ದರು ಎಂದು ಕಲಾವಿದರೊಬ್ಬರು ನೆನಪಿಸಿದ್ದಾರೆ.

ಕಲಾವಿದರ ಮೇಲೆ ದೂರು, ನೋಟಿಸ್: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಭಾಷಣದಲ್ಲಿ ಬಸವಣ್ಣನ ವಚನ ಹೇಳುವಾಗ ಬಳಸಿದ್ದ ‘ಇವನರ್ವ…ಇವನರ್ವ’ ಪದವನ್ನು ಯಕ್ಷಗಾನದಲ್ಲಿ ಬಳಸಿದ್ದಕ್ಕೆ ಕಟೀಲು ಮೇಳದ ಹಾಸ್ಯ ಕಲಾವಿದರೊಬ್ಬರಿಗೆ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಆಯೋಗ ನೋಟಿಸ್ ನೀಡಿತ್ತು. ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಪುತ್ರನ ನಡುವಿನ ‘ಎಲ್ಲಿದಿಯಪ್ಪಾ ನಿಖಿಲ್?’ ಎಂಬ ಸಂಭಾಷಣೆಯನ್ನು ‘ಮಗ ವಾಮನ ಎಲ್ಲಿದ್ದೀಯ?’ ಎಂದು ಯಕ್ಷಗಾನದ ಹಾಸ್ಯದಲ್ಲಿ ಬಳಸಿದಕ್ಕೆ ಬಪ್ಪನಾಡು ಮೇಳದ ಕಲಾವಿದರ ವಿರುದ್ಧ ಉಡುಪಿಯಲ್ಲಿ ದೂರು ದಾಖಲಾಗಿ, ಬಳಿಕ ಹಿಂಪಡೆಯಲಾಗಿತ್ತು.

ಇನ್ನೊಂದು ಪ್ರಕರಣದಲ್ಲಿ ದೇಂತಡ್ಕ ಮೇಳದ ಕಲಾವಿದರೊಬ್ಬರು ಶಿವಾಜಿಯ ಗುರು ಸಮರ್ಥ ರಾಮದಾಸರ ಪಾತ್ರ ನಿರ್ವಹಿಸುವಾಗ, ಭಾರತ ದೇಶದಲ್ಲಿ ಸುಭಿಕ್ಷೆ, ಸ್ವಚ್ಚತೆ ಮೂಡಲು ನರೇಂದ್ರನಂತೆ ಕೇಸರಿ ಪಡೆ ಕಟ್ಟಬೇಕು. ರಾತ್ರಿಯ ಹೊತ್ತಿನಲ್ಲಿ ಗೋವುಗಳನ್ನು ಹೊರಗೆ ಬಿಡಬಾರದು. ಗೋಕಳ್ಳರ ಸದೆಬಡಿಯಲು ಜಾಗೃತ ಯುವಕರ ಪಡೆ ತಯಾರು ಮಾಡಬೇಕು ಎಂದು ಹೇಳಿದ್ದರು. ಇದನ್ನು ಮಾಜಿ ಸಚಿವರೊಬ್ಬರು ಆಕ್ಷೇಪಿಸಿದ್ದರ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆ ಪೊಲೀಸರು ಕಲಾವಿದರನ್ನು ಕರೆಸಿ ಮುಚ್ಚಳಿಕೆ ಬರೆಸಿಕೊಂಡ ಉದಾಹರಣೆಯೂ ಇದೆ.

ಚುನಾವಣೆ ಹಿನ್ನಲೆಯಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಲು ಕೆಲ ಷರತ್ತು ವಿಧಿಸಲಾಗಿದೆ. ಇದು ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಅನುಮತಿ ಪಡೆದರೂ, 10 ಗಂಟೆ ಬಳಿಕ ಮೈಕ್ ಬಳಸುವಂತಿಲ್ಲ. ರಾಜ್ಯದ ಲಾಂಛನವಾಗಿ ಬಳಸುವ ಅರ್ಹತೆ ಪಡೆದ ಕಲೆಯನ್ನು, ಈ ರೀತಿ ಕಡೆಗಣಿಸುತ್ತಿರುವುದು ಬೇಸರ ಮೂಡಿಸಿದೆ. ರಾಜಕೀಯ ವಿಡಂಬನೆ ಹಿಂದೆಯೂ ಇತ್ತು. ಆದರೂ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಲಾವಿದರಿಗೆ ಎಚ್ಚರವಹಿಸುವಂತೆ ಸೂಚನೆ ನೀಡಿದ್ದೇನೆ.
|ಪಳ್ಳಿ ಕಿಶನ್ ಹೆಗ್ಡೆ, ಮೇಳದ ಯಜಮಾನ