ರಾಜಸ್ಥಾನದಲ್ಲಿ ರಸ್ತೆ ಬದಿ ಇವಿಎಂ ಪತ್ತೆ: ಇಬ್ಬರು ಚುನಾವಣಾಧಿಕಾರಿಗಳ ಅಮಾನತು

ಜೈಪುರ: ರಾಜಸ್ಥಾನದ ಬರನ್​ ಜಿಲ್ಲೆಯ ಶಹಾಬಾದ್​ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಶುಕ್ರವಾರ ರಾತ್ರಿ ಸೀಲ್​ ಮಾಡಲಾದ ಒಂದು ವಿದ್ಯುನ್ಮಾನ ಮತಯಂತ್ರ (ಇವಿಎಂ) ಪತ್ತೆಯಾಗಿದೆ. ಈ ಘಟನೆ ಸಂಬಂಧ ಚುನಾವಣಾ ಆಯೋಗ ಇಬ್ಬರು ಚುನಾವಣಾ ಸಿಬ್ಬಂದಿಯನ್ನು ಅಮಾನತು ಮಾಡಿದೆ.

ಶುಕ್ರವಾರ ಸಂಜೆ ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ಆ ನಂತರ ಮತಯಂತ್ರಗಳನ್ನು ಸ್ಟ್ರಾಂಗ್​ರೂಂಗೆ ತಲುಪಿಸಲಾಗಿತ್ತು. ಆದರೆ, ಶುಕ್ರವಾರ ರಾತ್ರಿ ಕೃಷ್ಣಗಂಜ್​ ವಿಧಾನಸಭೆ ವ್ಯಾಪ್ತಿಯಲ್ಲಿ ಮತಯಂತ್ರ (ಸೀರಿಯಲ್​ ನಂ. BBUAD41390) ರಸ್ತೆ ಬದಿ ಪತ್ತೆಯಾಗಿತ್ತು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಚುನಾವಣಾ ಆಯೋಗ ಅಬ್ದುಲ್​ ರಫೀಕ್​ ಮತ್ತು ನವಾಲ್​ ಸಿಂಗ್​ ಪಟ್ವಾರಿ ಎಂಬ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದೆ.

ಮತಯಂತ್ರಗಳನ್ನು ಸ್ಟ್ರಾಂಗ್​ ರೂಮ್​ಗೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮತಯಂತ್ರ ಟ್ರಕ್​ನಿಂದ ಹೊರಗೆ ಬಿದ್ದಿರಬಹುದು. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬರನ್​ ಜಿಲ್ಲೆಯ ಜಿಲ್ಲಾಧಿಕಾರಿ ಎಸ್​ಪಿ ಸಿಂಗ್​ ತಿಳಿಸಿದ್ದಾರೆ.

ಶುಕ್ರವಾರ ರಾಜಸ್ಥಾನದ 199 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಶೇ. 72.7 ರಷ್ಟು ಮತ ಚಲಾವಣೆಯಾಗಿತ್ತು. ಚುನಾವಣಾ ಪ್ರಕ್ರಿಯೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಇವಿಎಂ ಮತ್ತು ವಿವಿ ಪ್ಯಾಟ್​ಗಳನ್ನು ಬಳಕೆ ಮಾಡಲಾಗಿತ್ತು. (ಏಜೆನ್ಸೀಸ್​)