ಆಮಂತ್ರಣ ಪತ್ರಿಕೆಯಲ್ಲಿ ಮೋದಿಗೆ ವೋಟ್​ ಮಾಡಿ ಎಂದು ಮುದ್ರಿಸಿದ ವರನ ತಂದೆಗೆ ನೋಟಿಸ್​

ಡೆಹ್ರಾಡೂನ್​: ಪುತ್ರನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ವೋಟ್​ ಮಾಡಿ ಎಂದು ಮುದ್ರಿಸಿದ್ದ ವ್ಯಕ್ತಿಯೊಬ್ಬರಿಗೆ ಉತ್ತರಾಖಂಡದ ಚುನಾವಣಾ ಆಯೋಗ ನೋಟಿಸ್​ ನೀಡಿದೆ.

ಉತ್ತರಾಖಂಡದ ಡೆಹ್ರಾಡೂನ್​ ಜಿಲ್ಲೆಯ ಗರುಡ ಬ್ಲಾಕ್​ನ ಜೋಶಿಕೋಲ ಗ್ರಾಮದಲ್ಲಿ ಗೋಶಾಲೆ ನಡೆಸುತ್ತಿರುವ ಜಗದೀಶ್​ ಚಂದ್ರ ಜೋಶಿ ಎಂಬಾತನ ಪುತ್ರ ಜೀವನ್​ ವಿವಾಹ ಏ. 22 ಕ್ಕೆ ನಿಶ್ಚಯವಾಗಿತ್ತು. ಈ ಹಿನ್ನೆಲೆಯಲ್ಲಿ ಜಗದೀಶ್​ ಚಂದ್ರ ಅವರು ಸಿದ್ಧಪಡಿಸಿದ್ದ ಆಮಂತ್ರಣ ಪತ್ರಿಕೆಯಲ್ಲಿ ಏ. 11 ರಂದು ನಡೆಯಲಿರುವ ಮತದಾನದಲ್ಲಿ ಎಲ್ಲರೂ ಮತ ಚಲಾಯಿಸಿ. ಮೋದಿ ಅವರಿಗೆ ಮತ ಚಲಾಯಿಸಿ ಆ ನಂತರ ವಧು ವರರಿಗೆ ಆಶೀರ್ವಾದ ನೀಡಲು ಬನ್ನಿ ಎಂದು ಮುದ್ರಿಸಿದ್ದರು.

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ ಜಗದೀಶ್​ ಚಂದ್ರ ಅವರಿಗೆ ನೋಟಿಸ್‌ ನೀಡಿ, 24 ಗಂಟೆಯೊಳಗೆ ಆಯೋಗದ ಮುಂದೆ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿದ್ದರು.
ಈ ಸಂದರ್ಭದಲ್ಲಿ ಜಗದೀಶ್​ ಅವರು ಆಯೋಗದ ಕ್ಷಮೆ ಯಾಚಿಸಿದ್ದು, ‘ನನ್ನ ಮಕ್ಕಳು ಆಮಂತ್ರಣ ಪತ್ರಿಕೆಯಲ್ಲಿ ಇರಬೇಕಾದ ವಿಷಯಗಳನ್ನು ಬರೆದುಕೊಟ್ಟಿದ್ದರು. ನಾವು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)