ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿ

ಕೊಪ್ಪ: ಕೊಪ್ಪದಲ್ಲಿ ನಡೆದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಪರಿವರ್ತನಾ ಸಮಾವೇಶದಲ್ಲಿ ಕುಮಾರಸ್ವಾಮಿ ವಚನ ಭಂಗ ಮಾಡಿದ್ದಾರೆ ಎಂದು ಬಿಜೆಪಿ ರೈತಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ. ದಿನೇಶ್ ಹೊಸೂರು ಆರೋಪಿಸಿದರು.

ಸಮಾವೇಶದಲ್ಲಿ ಕಾಶ್ಮೀರದಲ್ಲಿ ನಡೆದ ದಾಳಿ ಬಗ್ಗೆ ಉಲ್ಲೇಖಿಸಿ ಚುನಾವಣೆ ವೇಳೆ ಈ ರೀತಿಯ ದಾಳಿ ಪ್ರಾಯೋಜಿಸಲಾಗುತ್ತದೆ ಮತ್ತು ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಲು ಬಯಸುತ್ತಿದೆ ಎಂದು ಎಂದು ಎರಡು ವರ್ಷದ ಹಿಂದೆಯೇ ನಿವೃತ್ತ ಸೇನಾನಿಯೊಬ್ಬರು ತಿಳಿಸಿದ್ದರು. ಅದರಂತೆ ಕಾಶ್ಮೀರದ ಪುಲ್ವಾಮಾದಲ್ಲಿ ದಾಳಿ ನಡೆದಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಇದು ಭಾರತದ ಅಖಂಡತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯುಂಟು ಮಾಡುವ ಹೇಳಿಕೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ದೂರಿದರು.

ಚುನಾವಣಾ ಆಯೋಗ ಈ ಬಗ್ಗೆ ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಬೇಕು. ಕುಮಾರಸ್ವಾಮಿಯವರಿಗೆ ಮಾಹಿತಿ ನೀಡಿದ ನಿವೃತ್ತ ಸೇನಾನಿ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಆಗ್ರಹಿಸಿದರು.

14ಕ್ಕೆ ಕೊಪ್ಪದಲ್ಲಿ ರೋಡ್​ಶೋ: ಬಿಜೆಪಿ ಲೋಕಸಭಾ ಅಭ್ಯರ್ಥಿ ಏ.14ರಂದು ಕೊಪ್ಪ ತಾಲೂಕಿನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಅಂದು ಸಂಜೆ 5ಕ್ಕೆ ಪಟ್ಟಣದ ಮೇಲಿನ ಪೇಟೆಯ ಟೋಲ್​ಗೇಟ್​ನಿಂದ ಬಸ್​ನಿಲ್ದಾಣದವರೆಗೆ ಬೃಹತ್ ರೋಡ್​ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ನಂತರ ಬಸ್​ನಿಲ್ದಾಣದ ಆವರಣದಲ್ಲಿ ಬಹಿರಂಗ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಹಾಗೂ ಪಕ್ಷದ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ ಎಂದು ಎಚ್.ಕೆ. ದಿನೇಶ್ ಹೊಸೂರು ಎಂದರು.

Leave a Reply

Your email address will not be published. Required fields are marked *