ಉಭಯ ರಂಗಗಳ ಕಪಟ ನೀತಿ ಬಯಲಿಗೆಳೆವ ಮತದಾರರು

>

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕೇರಳದಲ್ಲಿ ಪರಸ್ಪರ ಕಚ್ಚಾಡುವ ಎಡ ಹಾಗೂ ಐಕ್ಯರಂಗಗಳು ಅಧಿಕಾರಕ್ಕಾಗಿ ಕೇಂದ್ರದಲ್ಲಿ ಒಂದಾಗುತ್ತವೆ. ಈ ಮೋಸದ ಮೈತ್ರಿ ವಿರುದ್ಧ ಜನ ಈ ಬಾರಿ ಮತದಾನದ ಮೂಲಕ ಸೂಕ್ತ ಉತ್ತರ ನೀಡಲಿದ್ದಾರೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾನುವಾರ ಮಾತನಾಡಿದರು.
ದೇವರ ನಾಡು ಕೇರಳವನ್ನು ಕರಾಳ ಕೈಗಳಿಂದ ಪಾರುಮಾಡಬೇಕಾದ ಅನಿವಾರ್ಯತೆಯಿದೆ. ಜವಹರಲಾಲ್ ನೆಹರು, ಮುಸ್ಲಿಂ ಲೀಗನ್ನು ಸತ್ತ ಕುದುರೆ ಎಂದು ವ್ಯಾಖ್ಯಾನಿಸಿದ್ದರು. ಅದೇ ಪಕ್ಷದ ಬೆಂಬಲದೊಂದಿಗೆ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ರಾಹುಲ್ ಗಾಂಧಿ ಅವರಿಗೆ ಎದುರಾಗಿರುವುದು ವಿಪರ್ಯಾಸ. ಕಾಂಗ್ರೆಸ್ ಆರು ದಶಕಗಳಿಂದ ಭ್ರಷ್ಟಾಚಾರ ಪೋಷಿಸಿಕೊಂಡು ಬಂದಿದ್ದು, ದೇಶವನ್ನು ದಿವಾಳಿಯ ಅಂಚಿಗೆ ಕೊಂಡೊಯ್ದಿದೆ ಎಂದರು.
ಅಂತಾರಾಷ್ಟ್ರೀಯ ಸಂಬಂಧ ಸುಧಾರಣೆ ಜತೆಗೆ ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವ ನರೇಂದ್ರ ಮೋದಿ ಅವರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ದೇಶದ ಜನತೆಯನ್ನು ಹಾದಿತಪ್ಪಿಸುತ್ತಿದೆ. ಕೇರಳದಲ್ಲಿ ಈ ಬಾರಿ ಎನ್‌ಡಿಎ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದು, ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಆಡಳಿತ ನಿಶ್ಚಿತ ಎಂದು ತಿಳಿಸಿದರು. ಮಲಯಾಳಂನಲ್ಲೇ ಮಾತು ಆರಂಭಿಸುವ ಮೂಲಕ ನಿರ್ಮಲಾ ಸೀತಾರಾಮನ್ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರರಾದರು.

ಹುಮ್ಮಸ್ಸು ಹೆಚ್ಚಿಸಿದ ನಿರ್ಮಲಾ ರೋಡ್ ಶೋ
ಕಾಸರಗೋಡು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಪರವಾಗಿ ಭಾನುವಾರ ನಡೆಸಿದ ರೋಡ್ ಶೋ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತು. ಕಸಬಾ ಕಡಪ್ಪುರದಿಂದ ಆರಂಭಗೊಂಡ ರೋಡ್‌ಶೋ ನಂತರ ನಗರದ ವಿವಿಧೆಡೆ ಸಂಚರಿಸಿ, ಕರಂದಕ್ಕಾಡಿನಲ್ಲಿ ಸಮಾರೋಪಗೊಂಡಿತು. ಸಾರ್ವಜನಿಕ ಸಭೆಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಪಿ.ಎಸ್ ಶ್ರೀಧರನ್ ಪಿಳ್ಳೆ, ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *