ಅನುದಾನ ಮಂಜೂರಾದರೂ ಅಭಿವೃದ್ಧಿಯಾಗಿಲ್ಲ ರಸ್ತೆ!

< ಗ್ರಾಮಸ್ಥರಿಂದ ಪ್ರತಿಭಟನೆ, ಚುನಾವಣೆ ಬಹಿಷ್ಕಾರ ಎಚ್ಚರಿಕೆ * ಕೋಟಿಕಟ್ಟೆ- ಮುಂಡೂರು ಸಂಪರ್ಕ ರಸ್ತೆ ಅವ್ಯವಸ್ಥೆ>

ಮನೋಹರ್ ಬಳಂಜ ಬೆಳ್ತಂಗಡಿ

25 ವರ್ಷ ಹಿಂದೆ ಡಾಂಬರು ಕಂಡ ಈ ರಸ್ತೆ ಆ ಬಳಿಕ ಸಣ್ಣಪುಟ್ಟ ತೇಪೆ ಬಿಟ್ಟರೆ ದುರಸ್ತಿ ನಡೆದಿಲ್ಲ. ವರ್ಷದ ಹಿಂದೆ ಡಾಂಬರು ಕಾಮಗಾರಿಗೆ ಅನುದಾನ ಮಂಜೂರಾಗಿದ್ದರೂ ಇನ್ನೂ ಕೆಲಸ ಶುರು ಆಗಿಲ್ಲ. ಇದರಿಂದ ರೋಸಿ ಹೋದ ಗ್ರಾಮದ ಜನ ಪ್ರತಿಭಟನೆ ಹಾಗೂ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮುಂಡೂರು ಗ್ರಾಮದ ರಸ್ತೆಯ ದುಸ್ಥಿತಿಯಿದು. ಸುಮಾರು 150 ಕುಟುಂಬಗಳು ವಾಸಿಸುವ ಹಾಗೂ ಎರಡು ಅಂಗನವಾಡಿಗಳು, ಒಂದು ಪ್ರಾಥಮಿಕ ಶಾಲೆ, ಇತಿಹಾಸ ಪ್ರಸಿದ್ಧ ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾರ್ನಿಕದ ಕ್ಷೇತ್ರ ನಾಗಕಲ್ಲುರ್ಟಿ ದೈವಸ್ಥಾನ ಮುಂಡೂರು, ಜುಮಾ ಮಸೀದಿಗೆ ಸಂಪರ್ಕಿಸುವ ರಸ್ತೆಯಿದು.

ಮೂರು ವರ್ಷಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚರಿಸಲು ಪರದಾಡಬೇಕು. ವರ್ಷದ ಹಿಂದೆ ಡಾಂಬರು ಕಾಮಗಾರಿಗೆ ಅನುದಾನ ಮಂಜೂರಾದರೂ ಕಾಮಗಾರಿ ನಡೆದಿಲ್ಲದ ಕಾರಣ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಈ ಭಾಗದಲ್ಲಿ ಕೃಷಿಕರೇ ಹೆಚ್ಚಾಗಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳು ಮುಖ್ಯವಾಗಿ ಇದೇ ರಸ್ತೆ ಅವಲಂಬಿಸಿದ್ದಾರೆ. ಹಲವಾರು ಚುನಾವಣೆ ಸಂದರ್ಭ ವಿವಿಧ ರಾಜಕೀಯ ಪಕ್ಷಗಳಲ್ಲಿ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದರೂ ಭರವಸೆ ಮಾತ್ರ ನೀಡುತ್ತಾರೆ ವಿನಾಃ ದುರಸ್ತಿಯಾಗುತ್ತಿಲ್ಲ.

ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗುತ್ತಿತ್ತು. ಏಕಮುಖ ರಸ್ತೆಯಾಗಿರುವುದರಿಂದ ಈ ಪ್ರದೇಶದ ಕೆಲವು ಮನೆಗಳಿಗೆ ಸಂಪರ್ಕಿಸಲು ಇದೇ ರಸ್ತೆ ಪ್ರಮುಖವಾದುದು. ಕಳೆದ ಮಳೆಗಾಲದಲ್ಲಿ ವಾಹನ ಅಪಘಾತಕ್ಕೀಡಾದಾಗ ತುರ್ತು ಚಿಕಿತ್ಸೆಗೆ ಹೋಗಲು ಪರದಾಡಿದ ಸ್ಥಿತಿ ಬಗ್ಗೆ ಜನ ಸ್ಮರಿಸಿಕೊಳ್ಳುತ್ತಿದ್ದಾರೆ.

ಒಂದು ವರ್ಷದ ಹಿಂದೆ 2.1 ಕಿ.ಮೀ ರಸ್ತೆ ಅಭಿವೃದ್ಧಿಗೆ 1.20 ಕೋಟಿ ರೂ. ಅನುದಾನ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿ ಟೆಂಡರ್ ಆಗಿದ್ದರೂ ಕೆಲಸ ಆರಂಭಿಸಿಲ್ಲ. ಮುಂದಿನ ಮಳೆಗಾಲದಲ್ಲಿ ನಮಗೆ ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲ. ನಮಗೆ ರಾಜಕೀಯ ಪಕ್ಷಗಳ ಸುಳ್ಳು ಭರವಸೆ ಬೇಡ, ರಸ್ತೆ ಅಭಿವೃದ್ಧಿ ಬೇಕು, ಅದಕ್ಕಾಗಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಚುನಾವಣಾ ಬಹಿಷ್ಕಾರ ಮಾಡುವುದಕ್ಕೆ ಮುಂದಾಗಿದ್ದಾರೆ.

ಗುತ್ತಿಗೆದಾರರ ನಿರ್ಲಕ್ಷೃ: ಈ ಭಾಗದ ಜನರ ಸಮಸ್ಯೆ ತಿಳಿದು ಒಂದು ವರ್ಷವಾದರೂ ಕಾಮಗಾರಿ ಶುರು ಮಾಡದಿರುವುದು ಗುತ್ತಿಗೆದಾರರ ನಿರ್ಲಕ್ಷೃ ಎಂದು ಜನ ಆರೋಪಿಸುತ್ತಿದ್ದಾರೆ. ಏನೇ ಆಗಲಿ ಚುನಾವಣೆ ನೀತಿಸಂಹಿತೆ ಬಂದರೂ ನಮ್ಮ ರಸ್ತೆ ಅಭಿವೃದ್ಧಿಯಾಗಬೇಕು. ನಮ್ಮ ಪ್ರತಿಭಟನೆ ಗುತ್ತಿಗೆದಾರರ ವಿರುದ್ಧ ಮತ್ತು ಚುನಾವಣೆ ಬಹಿಷ್ಕಾರ ಸಂಬಂಧಿತ ಇಲಾಖೆ ವಿರುದ್ಧ. ಇದರಲ್ಲಿ ರಾಜಕೀಯ ಉದ್ದೇಶವಿಲ್ಲ ಎಂದು ಸ್ಥಳೀಯರು ವಿಜಯವಾಣಿಗೆ ತಿಳಿಸಿದ್ದಾರೆ.

ಮೂರು ವರ್ಷಗಳಿಂದ ನರಕಯಾತನೆ ನಮಗೆ ಸಾಕಾಗಿದೆ. ರಿಕ್ಷಾದಲ್ಲಿ ಬಾಡಿಗೆ ಮಾಡಿ ದುಡಿದು ಜೀವನ ಸಾಗಿಸುತ್ತಿದ್ದು, ದುಡಿದ ಹಣ ರಿಕ್ಷಾ ರಿಪೇರಿಗೇ ಸಾಕಾಗುತ್ತಿಲ್ಲ. ಈಗ ರಸ್ತೆಗೆ ಅನುದಾನ ಮಂಜೂರಾಗಿ ಒಂದು ವರ್ಷವಾದರೂ ದುರಸ್ತಿಯಾಗಿಲ್ಲ. ಈಗ ಪ್ರತಿಭಟನೆ ಮಾಡುವ ನಿರ್ಧಾರ ಬಂದ ಮೇಲೆ ಒಂದು ಲೋಡ್ ಜಲ್ಲಿಕಲ್ಲು ತಂದು ಹಾಕಿದ್ದಾರೆ. ಶೀಘ್ರ ರಸ್ತೆ ದುರಸ್ತಿಗೊಳಿಸಿ.
ಉಮೆಶ್ ಆಚಾರ್
ಆಟೋರಿಕ್ಷಾ ಚಾಲಕ

ರಸ್ತೆಗೆ ಅನುದಾನ ಬಿಡುಗಡೆಯಾಗಿ ಒಂದು ವರ್ಷವಾಗಿದೆ ಎಂದು ಮಾಹಿತಿ ತಿಳಿದಿದೆ. ದುರಸ್ತಿಯಾಗುತ್ತದೆ ಎಂದು ಇದುವರೆಗೆ ಕಾಯುತ್ತಿದ್ದೆವು. ಈ ಬಗ್ಗೆ ಇಲಾಖೆಗೆ ದೂರು ನೀಡಲು ಮುಂದಾಗಿದ್ದಲ್ಲದೆ ಚುನಾವಣಾ ಬಹಿಷ್ಕಾರಕ್ಕೂ ಮುಂದಾಗಿದ್ದೇವೆ. ಇನ್ನು ಎರಡು ತಿಂಗಳಲ್ಲಿ ಮಳೆಗಾಲ ಮತ್ತೆ ಬರುತ್ತದೆ. ರಸ್ತೆ ದುರಸ್ತಿಯಾಗದಿದ್ದರೆ ಚುನಾವಣಾ ಬಹಿಷ್ಕಾರವೇ ನಮಗಿರುವ ದಾರಿ.
ಬಾಬು ಸ್ಥಳೀಯ ನಿವಾಸಿ

ಹಿಂದೆ ಈ ರಸ್ತೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಅನುದಾನ ಬಿಡುಗಡೆಯಾಗಿರಬಹುದು. ಈ ಬಗ್ಗೆ ಮಾಹಿತಿಯಿಲ್ಲ. ಇದರ ಪ್ರಕ್ರಿಯೆ ಸಂಬಂಧಪಟ್ಟ ಇಲಾಖೆಯಲ್ಲಿರಬಹುದು. ಆದರೆ ಈಗ ಜನರಿಗೆ ತೊಂದರೆಯಾಗದಂತೆ ತೇಪೆ ಕಾರ್ಯಕ್ಕೆ ಶಾಸಕರು 15 ಲಕ್ಷ ರೂ. ಮಂಜೂರುಗೊಳಿಸಿದ್ದಾರೆ. ಆದಷ್ಟು ಬೇಗ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ತಿಳಿಸುತ್ತೇನೆ.
ಚೆನ್ನಪ್ಪ ಮೊಯ್ಲಿ
ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗ ಬೆಳ್ತಂಗಡಿ