More

    ರಾಜಕೀಯ ಅಂಗಳದಲ್ಲಿ ಎಲೆಕ್ಷನ್ ಬಾಂಡ್ ಸಂಚಲನ

    ಬಹುರ್ಚಚಿತ ಎಲೆಕ್ಟೋರಲ್ ಬಾಂಡ್​ಗಳ ಕುರಿತಂತೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್​ಬಿಐ) ನೀಡಿರುವ ಮಾಹಿತಿಯನ್ನು ಗುರುವಾರ ಸಂಜೆ ಚುನಾವಣಾ ಆಯೋಗ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿದೆ. ಆರೋಪ-ಪ್ರತ್ಯಾರೋಪಗಳ ಸರಣಿ ಆರಂಭವಾಗಿದ್ದು, ಕೆಲ ಪಕ್ಷಗಳ ಮೌನ ಅಚ್ಚರಿಗೆ ಕಾರಣವಾಗಿದೆ.

    ಫ್ಯೂಚರ್ ಗೇಮಿಂಗ್ ಆಂಡ್ ಹೋಟೆಲ್ ಸರ್ವಿಸ್: ತಮಿಳುನಾಡಿನ ಕೊಯಮತ್ತೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿ ಒಟ್ಟು 1,386 ಕೋಟಿ ರೂಪಾಯಿಗಳ ಎಲೆಕ್ಟೋರಲ್ (ಚುನಾವಣಾ) ಬಾಂಡ್ ಖರೀದಿಸಿದೆ. ಲಾಟರಿ ವಹಿವಾಟು ನಡೆಸುವ ಈ ಕಂಪನಿ ಸ್ಥಾಪನೆಯಾಗಿದ್ದು 1991 ಡಿಸೆಂಬರ್ 30ರಂದು. ಸೆಂಟಿಯಾಗೋ ಮಾರ್ಟಿನ್ ಇದರ ಸ್ಥಾಪಕರು. ಸೆಂಟಿಯಾಗೋ ಅವರನ್ನು ಭಾರತದ ‘ಲಾಟರಿ ಕಿಂಗ್’ ಎಂದೇ ಗುರುತಿಸಲಾಗುತ್ತದೆ. ಭಾರತದ 13 ರಾಜ್ಯಗಳಲ್ಲಿ ಕಂಪನಿಯ ವಹಿವಾಟು ಇದ್ದು, ಒಂದು ಸಾವಿರ ಸಿಬ್ಬಂದಿಯನ್ನು ಹೊಂದಿದೆ. ಆದರೆ, ಲಾಟರಿ ವ್ಯವಹಾರ ನಡೆಸುವ ಕಂಪನಿ ಇಷ್ಟು ಬೃಹತ್ ಮೊತ್ತದ ಬಾಂಡ್​ಗಳನ್ನು ಖರೀದಿಸಿರುವುದು ಅಚ್ಚರಿಗೆ ಕಾರಣವಾಗಿದೆ.

    ಮೇಘಾ ಇಂಜಿನಿಯರಿಂಗ್ ಆಂಡ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್: ತೆಲಂಗಾಣದ ಹೈದರಾಬಾದ್ ಮೂಲದ ಈ ಕಂಪನಿ 966 ಕೋಟಿ ರೂ. ಮೌಲ್ಯದ ಬಾಂಡ್ ಖರೀದಿಸಿದೆ. 1989ರಲ್ಲಿ ಪಮಿರೆಡ್ಡಿ ಪಿಚಿ ರೆಡ್ಡಿ ಈ ಕಂಪನಿಯನ್ನು ಸ್ಥಾಪಿಸಿದರು. 1991ರಿಂದ ಪಿವಿ ಕೃಷ್ಣಾ ರೆಡ್ಡಿ ಮೇಘಾ ಇಂಜಿನಿಯರಿಂಗ್ ಆಂಡ್ ಇನ್​ಫ್ರಾಸ್ಟ್ರಕ್ಚರ್ ಲಿಮಿಟೆಡ್​ನ್ನು ನಡೆಸುತ್ತಿದ್ದಾರೆ. ತೆಲಂಗಾಣದ ಬೃಹತ್ ನೀರಾವರಿ ಯೋಜನೆಗಳನ್ನು ಈ ಕಂಪನಿ ನಿರ್ವಹಿಸಿದೆ. ಕಾಶ್ಮೀರದ ಜೋಜಿಲಾ ಟನಲ್ ನಿರ್ವಿುಸುವ ಗುತ್ತಿಗೆಯೂ ಇದಕ್ಕೆ ಸಿಕ್ಕಿತ್ತು. ಕಳೆದ ವರ್ಷವಷ್ಟೇ (2023) ರಕ್ಷಣಾ ಸಚಿವಾಲಯದಿಂದ 5 ಸಾವಿರ ಕೋಟಿ ರೂಪಾಯಿಗಳ ಆರ್ಡರ್ ಸಿಕ್ಕಿತ್ತು.

    ಕ್ವಿಕ್ ಸಪ್ಲೈ ಚೈನ್ ಪ್ರೖೆವೇಟ್ ಲಿಮಿಟೆಡ್: ಮಹಾರಾಷ್ಟ್ರದ ಈ ಕಂಪನಿ 410 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್​ಗಳನ್ನು ಖರೀದಿಸಿದೆ. ಕ್ವಿಕ್ ಸಪ್ಲೈ ಚೈನ್ ಪ್ರೖೆವೇಟ್ ಲಿಮಿಟೆಡ್ ಕಂಪನಿಯ ಮೂವರು ನಿರ್ದೇಶಕರ ಪೈಕಿ ತಪಸ್ ಮಿಶ್ರಾ ಕೂಡ ಒಬ್ಬರು, ಮುಕೇಶ್ ಅಂಬಾನಿಗೆ ಆಪ್ತರು. ರಿಲಯನ್ಸ್ ಇಂಡಸ್ಟ್ರೀಸ್ ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿರುವ ತಪಸ್, ರಿಲಯನ್ಸ್ ಆಯಿಲ್ ಆಂಡ್ ಪೆಟ್ರೋಲಿಯಂ, ರಿಲಯನ್ಸ್ ಫೋಟೋ ಫಿಲ್ಮ್, ರಿಲಯನ್ಸ್ ಫಾಯರ್ ಬ್ರಿಗೇಡ್, ರಿಲಯನ್ಸ್ ಪಾಲಿಸ್ಟರ್​ಗೂ ನಿರ್ದೇಶಕರಾಗಿದ್ದಾರೆ.

    ವೇದಾಂತ್ ಲಿಮಿಟೆಡ್: ದೇಶದ ಗಣಿಗಾರಿಕೆ ಕ್ಷೇತ್ರದಲ್ಲಿ ದೊಡ್ಡ ಕಂಪನಿಯಾಗಿರುವ ವೇದಾಂತ್ ಲಿಮಿಟೆಡ್ 400 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಖರೀದಿಸಿದೆ. ಮಹಾರಾಷ್ಟ್ರದ ಮುಂಬೈಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಇದು, ಸ್ಥಾಪನೆಯಾಗಿದ್ದು 1965 ಜೂನ್ 25ರಂದು. ಖ್ಯಾತ ಉದ್ಯಮಿ ಅನಿಲ್ ಅಗರ್​ವಾಲ್ ಇದರ ಮಾಲೀಕರು. ತನ್ನ ಸಾಲದ ಪ್ರಮಾಣ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕುರಿತಂತೆ ವೇದಾಂತ್ ವಿವಾದಕ್ಕೆ ಒಳಗಾಗಿದೆ.

    ಹಲ್ದಿಯಾ ಎನರ್ಜಿ ಲಿಮಿಟೆಡ್: ಹಲ್ದಿಯಾ ಎನರ್ಜಿ ಲಿಮಿಟೆಡ್ ಸಂಜೀವ್ ಗೋಯಂಕಾ ಗ್ರೂಪ್​ನ ಭಾಗವಾಗಿದ್ದು, 377 ಕೋಟಿ ರೂ.ಗಳ ಬಾಂಡ್ ಖರೀದಿಸಿದೆ. ಇಂಧನ, ಮಾಧ್ಯಮ ಸೇರಿ ಹಲವು ಕ್ಷೇತ್ರಗಳಲ್ಲಿ ಇದು ವಹಿವಾಟು ನಡೆಸುತ್ತಿದೆ. ಸಂಜೀವ್ ಗೋಯಂಕಾ ಐಪಿಎಲ್ ತಂಡ ಲಖನೌ ಸೂಪರ್ ಜಾಯಂಟ್ಸ್​ನ ಮಾಲೀಕರೂ ಹೌದು.

    ಭಾರ್ತಿ ಗ್ರೂಪ್ (ಏರ್​ಟೆಲ್): ಭಾರತದ ಅತಿ ದೊಡ್ಡ ದೂರಸಂಪರ್ಕ (ಟಿಲಿಕಾಮ್ ಕಂಪನಿಗಳಲ್ಲಿ ಒಂದಾಗಿರುವ ಭಾರ್ತಿ ಗ್ರೂಪ್ 247 ಕೋಟಿ ರೂ.ಗಳ ಚುನಾವಣಾ ಬಾಂಡ್ ಖರೀದಿಸಿದೆ. 18 ದೇಶಗಳಲ್ಲಿ ವಹಿವಾಟನ್ನು ವಿಸ್ತರಿಸಿದೆ. ಸುನಿಲ್ ಮಿತ್ತಲ್ ಇದರ ಮಾಲೀಕರು. ದೆಹಲಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಇದು ಸ್ಥಾಪನೆಯಾಗಿದ್ದು 1995ರಲ್ಲಿ. ಎಸ್ಸೆಲ್ ಮೈನಿಂಗ್ ಆಂಡ್ ಇಂಡಸ್ಟ್ರೀಸ್ ಲಿಮಿಟೆಡ್: ಮಹಾರಾಷ್ಟ್ರದ ಮುಂಬೈಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಇದು, ಸ್ಥಾಪನೆಯಾಗಿದ್ದು 1950ರಲ್ಲಿ. ಗಣಿಗಾರಿಕೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಈ ಕಂಪನಿ 224 ಕೋಟಿ ರೂ.ಗಳ ಬಾಂಡ್ ಖರೀದಿಸಿದೆ.

    ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್​ಮಿಶನ್ ಕಂಪನಿ: ಉತ್ತರಪ್ರದೇಶದ ಕಾನಪುರನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇದು ಸ್ಥಾಪನೆಯಾಗಿದ್ದು, 2009 ಸೆಪ್ಟೆಂಬರ್ 11ರಂದು. ಕಳೆದ 15 ವರ್ಷಗಳಿಂದ ಇದು ವಿದ್ಯುತ್, ಗ್ಯಾಸ್, ನೀರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಉದ್ಯಮ ನಡೆಸುತ್ತಿದೆ. 220 ಕೋಟಿ ರೂ. ಮೌಲ್ಯದ ಬಾಂಡ್​ನ್ನು ಖರೀದಿಸಿದೆ.

    ಕೆವೆಂಟರ್ ಫುಡ್ ಪಾರ್ಕ್ ಇನ್ಪ್ರಾ ಲಿಮಿಟೆಡ್: ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಕಂಪನಿ ಸ್ಥಾಪನೆಯಾಗಿದ್ದು 2010 ಜೂನ್ 17ರಂದು. ಡೇರಿ ಉತ್ಪನ್ನಗಳ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇದು, 194 ಕೋಟಿ ರೂ.ಗಳ ಬಾಂಡ್ ಖರೀದಿಸಿದೆ. ಕೆವೆಂಟರ್ ಕೃಷಿ ಉತ್ಪನ್ನಗಳನ್ನೂ ರಫ್ತು ಮಾಡುತ್ತದೆ.

    ರಾಜಕೀಯ ಅಂಗಳದಲ್ಲಿ ಎಲೆಕ್ಷನ್ ಬಾಂಡ್ ಸಂಚಲನ

    ರಾಜಕೀಯ ಅಂಗಳದಲ್ಲಿ ಎಲೆಕ್ಷನ್ ಬಾಂಡ್ ಸಂಚಲನ

    ರಾಜಕೀಯ ಅಂಗಳದಲ್ಲಿ ಎಲೆಕ್ಷನ್ ಬಾಂಡ್ ಸಂಚಲನ

    ಮದನ್​ಲಾಲ್ ಲಿಮಿಟೆಡ್: ಸ್ಟೀಲ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಆಗಿರುವ ಮದನ್​ಲಾಲ್ ಲಿಮಿಟೆಡ್ 1982 ನವೆಂಬರ್ 22ರಂದು ಸ್ಥಾಪನೆಗೊಂಡಿದೆ. ಪಶ್ಚಿಮ ಬಂಗಾಳದ ಕೋಲ್ಕತ್ತದಲ್ಲಿ ಮುಖ್ಯ ಕಚೇರಿ ಹೊಂದಿರುವ ಇದು 185.5 ಕೋಟಿ ರೂ. ಮೌಲ್ಯದ ಬಾಂಡ್​ಗಳನ್ನು ಖರೀದಿಸಿದೆ.

    ಇಂಡಿಗೋ ಏರ್​ಲೈನ್ಸ್ ಮತ್ತು ಅದರ ಪಾಲುದಾರ ಕಂಪನಿಗಳು 36 ಕೋಟಿ ರೂ., ಸ್ಪೈಸ್​ಜೆಟ್ ಕಂಪನಿ 65 ಕೋಟಿ ರೂ.ಗಳ ಬಾಂಡ್ ಖರೀದಿಸಿವೆ.

    ಉತ್ತರಾಖಂಡದ ನವಯುಗ ಇಂಜಿನಿಯರಿಂಗ್ ಕಂಪನಿ 55 ಕೋಟಿ ರೂ. ಮೌಲ್ಯದ ಬಾಂಡ್ ಖರೀದಿಸಿದೆ.

    ಬಾಂಡ್ ಎನ್​ಕ್ಯಾಶ್ ಮಾಡಿಕೊಂಡ ಪಕ್ಷಗಳಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಶಿವಸೇನಾ, ಟಿಡಿಪಿ ಸಹಿತ 15 ಪಕ್ಷಗಳಿವೆ.

    ಎಲೆಕ್ಟೋರಲ್ ಬಾಂಡ್ ಖರೀದಿಸಿದ ಅವಧಿ

    2019 ಏಪ್ರಿಲ್ 12ರಿಂದ 2024 ಜನವರಿ 24.

    1 ಲಕ್ಷ ರೂಪಾಯಿ ಮೌಲ್ಯದ 2228 ಬಾಂಡ್, 10 ಲಕ್ಷ ರೂ. ಮೌಲ್ಯದ 4,620 ಮತ್ತು 1 ಕೋಟಿ ರೂ. ಮೌಲ್ಯದ 11,671 ಎಲೆಕ್ಟೋರಲ್ ಬಾಂಡ್​ಗಳನ್ನು ಭಾರತೀಯ ಸ್ಟೇಟ್ ಬ್ಯಾಂಕ್​ನಿಂದ (ಎಸ್​ಬಿಐ) ಖರೀದಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts