ಜಾತ್ಯತೀತ ಶಕ್ತಿಗಳತ್ತ ಜನರ ಒಲವು, ಲೋಕಸಭಾ ಚುನಾವಣೆಗೆ ದಿಕ್ಸೂಚಿ: ಸಿ.ಎಂ.ಕುಮಾರಸ್ವಾಮಿ

ಬೆಳಗಾವಿ: ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾತ್ಯತೀತ ಪಕ್ಷಗಳತ್ತ ರಾಷ್ಟ್ರ ಸಾಗುತ್ತಿದೆ ಎಂಬುದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಮತದಾರ ನೀಡಿರುವ ತೀರ್ಪು ಸಾಕ್ಷಿಯಾಗಿದೆ. ದೇಶಾದ್ಯಂತ ಏಕಪಕ್ಷೀಯ ಆಡಳಿತದ ನಿರೀಕ್ಷೆ ಇಟ್ಟುಕೊಂಡು ಪ್ರತಿಪಕ್ಷಗಳನ್ನು ದಮನ ಮಾಡಲು ಮುಂದಾಗಿದ್ದವರಿಗೆ ಇದೀಗ ಮುಖಭಂಗವಾಗಿದೆ ಎಂದಿದ್ದಾರೆ.

ಜಾತ್ಯತೀತ ಪಕ್ಷಗಳೆಲ್ಲವೂ ಜತೆಯಾಗಿ ಚುನಾವಣೆ ಎದುರಿಸಲು ವೇದಿಕೆಯನ್ನು ಈ ಚುನಾವಣೆ ದೊರಕಿಸಿಕೊಟ್ಟಿದೆ. ಕಾಂಗ್ರೆಸ್​ ನಾಯಕಿ ಸೋನಿಯಾಗಾಂಧಿ ಹಾಗೂ ಅಧ್ಯಕ್ಷ ರಾಹುಲ್​ ಗಾಂಧಿಯವರ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದು ಹೇಳಿದ್ದಾರೆ.

ಪ್ರಜೆಗಳು ಹೇಳಿದಂತೆ ಕೇಳಬೇಕು

ಇದು ಪ್ರಜಾಪ್ರಭುತ್ವ ರಾಷ್ಟ್ರ. ಪ್ರಜೆಗಳು ಹೇಳಿದಂತೆ ನಾವು ಕೇಳಬೇಕಷ್ಟೇ. ನಾವು ಹೇಳಿದ್ದೆಲ್ಲ ಇಲ್ಲಿ ನಡೆಯುವುದಿಲ್ಲ ಎಂದು ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಟ್ವೀಟ್​ ಮಾಡಿದ್ದಾರೆ.

ಕಾಂಗ್ರೆಸ್ ಮುಕ್ತ ಭಾರತ, ಪ್ರತಿಪಕ್ಷ ಮುಕ್ತ ಭಾರತ ಮಾಡುತ್ತೇವೆಂಬುದೆಲ್ಲ ಕೇವಲ ಅಹಮಿಕೆ. ಜನ ಇಂದು ಅಹಂ ಮುಕ್ತ ಭಾರತ ಮಾಡಿದ್ದಾರೆ. ಸಮಸ್ಯೆ ಮುಕ್ತ ಭಾರತ ಮಾಡುವುದರತ್ತ ಅಧಿಕಾರರೂಢ ಬಿಜೆಪಿ ಮನಸ್ಸು ಮಾಡಲಿ ಎಂದು ಹೇಳಿದ್ದಾರೆ.