ಸಿನಿಮಾ

ದಕ್ಷಿಣ ಕನ್ನಡ 5 ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆ

ಮಂಗಳೂರು : ಜನ ಸೇವಕರನ್ನು ಆಯ್ಕೆ ಮಾಡಲು ಪ್ರತೀ ಐದು ವರ್ಷಗಳಿಗೊಮ್ಮೆ ನಡೆಯುವ ಚುನಾವಣೆಯನ್ನು ಪ್ರಜಾಪ್ರಭುತ್ವ ಹಬ್ಬವಾಗಿ ಆಚರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಸರ್ವ ರೀತಿಯ ಸಿದ್ಧತೆ ಮಾಡಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬದ ಭದ್ರತೆಗಾಗಿ 5 ಸಾವಿರಕ್ಕೂ ಅಧಿಕ ಪೊಲೀಸ್/ಅರೆಸೇನಾ ಪಡೆಯ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.


ಜಿಲ್ಲೆಯಲ್ಲಿ 10 ಅಂತರ್‌ರಾಜ್ಯ, 7 ಅಂತರ್ ಜಿಲ್ಲಾ , 9 ಸ್ಥಳೀಯ ಚೆಕ್‌ಪೋಸ್ಟ್‌ಗಳಿದ್ದು ಅಂತರ್‌ರಾಜ್ಯ ಚೆಕ್‌ಪೋಸ್ಟ್‌ಗಳಲ್ಲಿ ಕೇಂದ್ರ ಅರೆಸೇನಾ ಪಡೆ (ಸಿಪಿಎಂಎಫ್), ಸ್ಥಳೀಯ ಪೊಲೀಸ್ ಮತ್ತು ಸರ್ವೇಕ್ಷಣಾ ತಂಡಗಳು 24 ತಾಸು ಕಣ್ಗಾವಲು ಇರಿಸಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ 7 ಮತ್ತು ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯ 163 ಸೂಕ್ಷ್ಮ ಮತಗಟ್ಟೆಗಳು, ಗಡಿಭಾಗದ ಮತಗಟ್ಟೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ.


ಮಂಗಳವಾರದಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್, ಡಿಸಿಪಿ ಅಂಶುಕುಮಾರ್ ಮತ್ತು ಎಸ್‌ಪಿ ಡಾ. ವಿಕ್ರಮ್ ಅಮಟೆ ಅವರು ಮಸ್ಟರಿಂಗ್ ಕೇಂದ್ರಗಳು, ಮತಗಟ್ಟೆಗಳಿಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದರು.


60 ರೌಡಿಗಳ ಗಡಿಪಾರು: ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರದ 60 ರೌಡಿಗಳನ್ನು ಗಡಿಪಾರು ಮಾಡಿ ಅವರ ಮೇಲೆ ನಿಗಾ ಇಡಲಾಗಿದೆ. ಇಬ್ಬರ ಮೇಲೆ ಗೂಂಡಾ ಕಾಯಿದೆಯಡಿ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ರೌಡಿಗಳಿಗೂ ಎಚ್ಚರಿಕೆ ನೀಡಲಾಗಿದ್ದು ಯಾವುದೇ ಅಕ್ರಮ, ಅಹಿತಕರ ಘಟನೆಗಳು ನಡೆಯದಂತೆ ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಭದ್ರತಾ ವ್ಯವಸ್ಥೆಯ ಸಮನ್ವಯತೆಗಾಗಿ ಪ್ರತಿ ಕ್ಷೇತ್ರದಲ್ಲಿ 17 ಸೆಕ್ಟರ್‌ಗಳನ್ನು ರಚಿಸಲಾಗಿದೆ. ಪಿಎಸ್‌ಐ, ಇನ್ಸ್‌ಪೆಕ್ಟರ್, ಎಸಿಪಿ ದರ್ಜೆಯ ಅಧಿಕಾರಿಗಳು ನಿರಂತರ ಗಸ್ತು ನಡೆಸಿ ನಿಗಾ ವಹಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದ್ದಾರೆ.
ಕೇರಳ ಗಡಿಯಲ್ಲಿ ಈಗಾಗಲೇ ಇರುವ 8 ಚೆಕ್‌ಪೋಸ್ಟ್‌ಗಳ ಜತೆಗೆ 14 ಒಳರಸ್ತೆಗಳಲ್ಲಿಯೂ ರಾಜ್ಯ ಸಶಸ್ತ್ರ ಮೀಸಲು ಪಡೆ ನಿಯೋಜಿಸಿ ವಿಶೇಷ ಗಸ್ತು ನಡೆಸಲಾಗುತ್ತಿದೆ. ಕಾಸರಗೋಡು ಪೊಲೀಸರೊಂದಿಗೆ ಜಂಟಿ ಗಸ್ತು ನಡೆಸಲಾಗುತ್ತಿದೆ. ಕಾಸರಗೋಡು ಪೊಲೀಸರು ಕೂಡ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಿದ್ದಾರೆ. ಈ ಮೂಲಕ ಮತದಾನ ಶಾಂತಿಯುತವಾಗಿ ನಡೆಯಲು ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಅನುಸರಿಸಲಾಗಿದೆ.

Latest Posts

ಲೈಫ್‌ಸ್ಟೈಲ್