ಮಾಲೇಗಾಂವ್‌ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಬಿಜೆಪಿಗೆ, ದಿಗ್ವಿಜಯ್‌ ಸಿಂಗ್‌ ವಿರುದ್ಧ ಕಣಕ್ಕೆ!

ಭೂಪಾಲ್‌: ಲೋಕಸಭಾ ಚುನಾವಣೆ ಕಾವು ಏರಿಕೆಯಾಗುತ್ತಿದ್ದು, 2008ರ ಮಾಲೆಗಾಂವ್ ಸ್ಫೋಟದ ಆರೋಪಿಯಾಗಿರುವ ಸಾಧ್ವಿ ಪ್ರಜ್ಞಾ ಸಿಂಗ್‌ ಠಾಕೂರ್‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮತ್ತು ಖಂಡಿತವಾಗಿಯೂ ಗೆಲುವು ಸಾಧಿಸುತ್ತೇನೆ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಎದುರಾಳಿಯಾಗಿ ಸ್ಪರ್ಧಿಸುವುದಾಗಿ ಬಿಜೆಪಿ ನಾಯಕರು ತಿಳಿಸಿದ್ದಾರೆ. ಹಿರಿಯ ಬಿಜೆಪಿ ನಾಯಕ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ರಾಮ್‌ಲಾಲ್‌ ಅವರನ್ನು ಭೇಟಿ ಮಾಡಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಭೂಪಾಲ್‌ನ ಬಿಜೆಪಿ ಕಚೇರಿ ಎದುರು ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ, ಅಧಿಕೃತವಾಗಿ ನಾನು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ ಮತ್ತು ಖಂಡಿತವಾಗಿ ಜಯ ಸಾಧಿಸುತ್ತೇನೆ. ಇದು ನನಗೆ ಕಷ್ಟವಾಗುವುದಿಲ್ಲ. ರಾಷ್ಟ್ರದ ವಿರುದ್ಧ ಪಿತೂರಿ ನಡೆಸುವವರ ವಿರುದ್ಧ ನಾವೆಲ್ಲರೂ ಹೋರಾಡುತ್ತೇವೆ ಮತ್ತು ಅವರನ್ನು ಸೋಲಿಸುತ್ತೇವೆ ಎಂದು ಸಾಧ್ವಿ ಪ್ರಜ್ಞಾ ಹೇಳಿದ್ದಾರೆ.

ಭೂಪಾಲ್‌ನ ಬಿಜೆಪಿ ಸಂಸದ ಅಲೋಕ್‌ ಸಂಜಾರ್‌ ಮಾತನಾಡಿ, ಪಕ್ಷವು ಸಂಪೂರ್ಣವಾಗಿ ಸಾಧ್ವಿಯವರ ಸೇರ್ಪಡೆಯನ್ನು ಸ್ವಾಗತಿಸಿದ್ದು, ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವು ಖಂಡಿತ. ಅವರ ವಿರುದ್ಧದ ಯಾವುದೇ ಆರೋಪಗಳು ನಿಜವಾಗಿಲ್ಲ. ಮಹಿಳೆಗೆ ದೌರ್ಜನ್ಯ ನೀಡಲಾಗಿದೆ. ಅದರ ವಿರುದ್ಧ ಸೇಡು ತೀರಿಸಿಕೊಳ್ಳಲು ಇದು ಸಕಾಲ ಎಂದು ತಿಳಿಸಿದ್ದಾರೆ.

2008ರಲ್ಲಿ ಮಹಾರಾಷ್ಟ್ರದ ಮಲೇಗಾಂವ್‌ನಲ್ಲಿ ಎರಡು ಸೈಕಲ್‌ಗಳಲ್ಲಿ ಅಳವಡಿಸಲಾಗಿದ್ದ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಏಳು ಜನರು ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಾಧ್ವಿ ಪ್ರಜ್ಞಾ ಮತ್ತು ಲೆ. ಕರ್ನಲ್‌ ಪ್ರಸಾದ್‌ ಶ್ರೀಕಾಂತ್‌ ಪುರೋಹಿತ್‌ ಇಬ್ಬರು ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದು, ಹಿಂದು ಉಗ್ರವಾದವನ್ನು ಜನರ ಮೇಲೆ ಹೇರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಈ ಹಿಂದಿನಿಂದಲೂ ಕಾಂಗ್ರೆಸ್​ ನಾಯಕರು ಆರೋಪಿಸಿದ್ದರು. (ಏಜೆನ್ಸೀಸ್)