ಮೋಡವಿದ್ದಾಗ ರೇಡಾರ್​ನಿಂದ ವಿಮಾನಗಳನ್ನು ಮಾಯ ಮಾಡಿ, ನಿರುದ್ಯೋಗಿಗಳಿಗೆ ಏನು ಹೇಳುವಿರಿ ಎಂದು ರಾಹುಲ್ ವ್ಯಂಗ್ಯ

ನವದೆಹಲಿ: ಪಾಕಿಸ್ತಾನದ ರೇಡಾರ್‌ನಿಂದ ತಪ್ಪಿಸಿಕೊಳ್ಳಲು ಭಾರತೀಯ ಫೈಟರ್‌ ಜೆಟ್‌ಗಳಿಗೆ ಮೋಡಗಳು ಸಹಾಯಮಾಡಿದ್ದವು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರು ವ್ಯಂಗ್ಯವಾಡಿದ್ದಾರೆ.

ಕೊನೆ ಹಂತದ ಲೋಕಸಭಾ ಚುನಾವಣೆಗಾಗಿ ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರ ಕೈಗೊಂಡಿರುವ ಅವರು, ಮೋದಿ ಜೀ, ಯಾವಾಗೆಲ್ಲ ಭಾರತದಲ್ಲಿ ಮಳೆ ಬರುತ್ತದೆಯೇ ಆಗೆಲ್ಲ ರೇಡಾರ್‌ನಿಂದ ಎಲ್ಲ ವಿಮಾನಗಳನ್ನು ಕಣ್ಮರೆ ಮಾಡಿಬಿಡಿ ಎಂದು ಟೀಕಿಸಿದ್ದಾರೆ.

ಇದಲ್ಲದೆ, ಈ ಹಿಂದೆ ಮೋದಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರೊಂದಿಗೆ ನಡೆಸಿದ್ದ ರಾಜಕೀಯೇತರ ಸಂದರ್ಶನ ಕುರಿತು ರಾಹುಲ್‌ ಟೀಕಿಸಿದ್ದು, ಅಂದು ಬಾಲ್ಯಕಾಲದಿಂದಲೂ ಮಾವಿನ ಹಣ್ಣುಗಳು ಇಷ್ಟ ಎಂದು ಹೇಳಿದ್ದೀರಿ. ಮೋದಿಜಿ ನೀವು ನಮಗೆ ಮಾವಿನ ಹಣ್ಣುಗಳನ್ನು ಹೇಗೆ ತಿನ್ನುವುದು ಎಂಬುದನ್ನು ಹೇಳಿಕೊಟ್ಟಿದ್ದೀರ. ಆದರೆ, ನಿರುದ್ಯೋಗಿ ಯುವಕರಿಗಾಗಿ ನೀವೇನು ಮಾಡಿದ್ದೀರಿ ಎಂಬುದನ್ನು ದೇಶಕ್ಕೆ ಹೇಳಿ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಮೇ 11 ರಂದು ಸಂದರ್ಶನ ನೀಡಿದ್ದ ಪ್ರಧಾನಿ ಮೋದಿಯವರು, ವಾತಾವರಣವು ಅನುಕೂಲಕರವಾಗಿರಲಿಲ್ಲ. ಮೋಡಗಳಿಂದಾಗಿ ನಾವು ಹೋಗಬಹುದೇ ಎನ್ನುವ ಕುರಿತೇ ಅನುಮಾನ ಉಂಟಾಗಿತ್ತು. ಹೀಗಾಗಿ ತಜ್ಞರೊಂದಿಗೆ ಸಭೆ ನಡೆದಾಗ ಅವರು ದಾಳಿ ದಿನಾಂಕವನ್ನು ಮುಂದೂಡುವಂತೆ ಹೇಳಿದ್ದರು. ಆದರೆ, ನನ್ನ ತಲೆಯಲ್ಲಿ ಎರಡು ವಿಚಾರಗಳಿದ್ದವು. ದಾಳಿ ವಿಚಾರವನ್ನು ರಹಸ್ಯವಾಗಿಡುವುದು ಮತ್ತು ವಿಜ್ಞಾನವನ್ನು ನಾನು ಬಲ್ಲವನಾಗಿರಲಿಲ್ಲ. ಆದರೆ, ಮೋಡ ಮತ್ತು ಮಳೆಯಿಂದಾಗಿ ನಮಗೆ ಉಪಯೋಗವಾಗಲಿದೆ. ಮೋಡಗಳು ಇರುವುದರಿಂದ ಪಾಕಿಸ್ತಾನದ ರೇಡಾರ್‌ಗಳು ನಮ್ಮ ಯುದ್ಧ ವಿಮಾನಗಳನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಎಲ್ಲರೂ ಗೊಂದಲದಲ್ಲಿದ್ದರು. ನಾನು ಮೋಡ ಇದ್ದ ದಿನವೇ ದಾಳಿ ನಡೆಸಿ ಎಂದು ಆದೇಶಿಸಿದ್ದೆ ಎಂದು ಹೇಳಿದ್ದರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೋಲ್ ಆಗಿದೆ. (ಏಜೆನ್ಸೀಸ್)