ಇವಿಎಂನಲ್ಲಿ ಕಮಲದ ಚಿಹ್ನೆ ಕೆಳಗೆ ಕಾಣುವ ‘ಬಿಜೆಪಿ’ ಹೆಸರು ತೆಗೆಯಲು ಚುನಾವಣೆ ಆಯೋಗಕ್ಕೆ ಮನವಿ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿ ಚುನಾವಣೆ ಚಿಹ್ನೆಯಾದ ಕಮದ ಅಡಿಯಲ್ಲಿ ಬಿಜೆಪಿಯ ಹೆಸರು ಮಾತ್ರ ಕಾಣಿಸುತ್ತಿದೆ ಮತ್ತು ಇದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಪಕ್ಷ ನಾಯಕರು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನ ಅಭಿಷೇಕ್‌ ಮನು ಸಿಂಘ್ವಿ, ತೃಣಮೂಲ ಕಾಂಗ್ರೆಸ್‌ನ ದಿನೇಶ್‌ ತ್ರಿವೇದಿ ಮತ್ತು ಡೆರೆಕ್ ಒ ಬ್ರೇನ್‌ ಸೇರಿದಂತೆ ವಿಪಕ್ಷ ನಾಯಕರ ನಿಯೋಗವು ಮುಖ್ಯ ಚುನಾವಣಾ ಆಯುಕ್ತ ಸುನಿಲ್‌ ಅರೋರ ಅವರನ್ನು ಭೇಟಿ ಮಾಡಿ ಬಿಜೆಪಿಯ ಹೆಸರನ್ನು ಚಿಹ್ನೆಯಡಿಯಿಂದ ತೆಗೆಯಬೇಕು ಇಲ್ಲವೆ ಇತರೆ ಪಕ್ಷಗಳ ಹೆಸರನ್ನು ಚಿಹ್ನೆಯ ಕೆಳಗೆ ಬಳಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಚುನಾವಣೆ ಆಯೋಗದ ಹಿರಿಯ ಅಧಿಕಾರಿ ಪ್ರತಿಕ್ರಿಯಿಸಿ, ವಿಪಕ್ಷಗಳು ತಪ್ಪಾಗಿ ಅರ್ಥೈಸಿವೆ. 2013ರ ಮಧ್ಯಭಾಗದಲ್ಲಿ ಬಿಜೆಪಿಯು ತನ್ನ ಕಮಲದ ಚಿಹ್ನೆಯ ಔಟ್‌ಲೈನ್‌ ತುಂಬ ಚಿಕ್ಕದಾಗಿದ್ದು, ಅದು ದೊಡ್ಡದಾಗಬೇಕು ಎಂದು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅವರ ಮನವಿಯನ್ನು ಆಧರಿಸಿ ಕಮಲದ ಔಟ್‌ಲೈನ್‌ನ್ನು ಬೋಲ್ಡ್‌ ಮಾಡಲಾಯಿತು ಮತ್ತು ಕೆಳಗೆ ನೀರಿರುವಂತೆ ಮಾಡಲಾಯಿತು. ಈ ನೀರಿನ ಲೈನ್‌ಗಳು ಎಫ್‌ ಮತ್ತು ಪಿ ಅಕ್ಷರದಂತೆ ಕಾಣಿಸುತ್ತಿದೆ ಹೊರತು ಬಿಜೆಪಿ ಎಂದಲ್ಲ. ಇದೇ ಚಿಹ್ನೆಯನ್ನು 2014ರಿಂದಲೂ ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇವಿಎಂಗಳಲ್ಲಿ ಬಿಜೆಪಿ ಎನ್ನುವ ಹೆಸರು ಪಕ್ಷದ ಚಿಹ್ನೆಯ ಕೆಳಗೆ ಕಾಣಿಸುತ್ತಿದೆ. ಯಾವುದೇ ಪಕ್ಷದ ಹೆಸರು ಮತ್ತು ಚಿಹ್ನೆಗಳು ಒಟ್ಟಾಗಿ ಇರಬಾರದು ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ತಿಳಿಸಿದ್ದಾರೆ. (ಏಜೆನ್ಸೀಸ್)