ಗೌತಮ್‌ ಗಂಭೀರ್‌ ಎರಡು ಮತದಾರರ ಚೀಟಿ ಹೊಂದಿದ್ದಾರೆ ಎಂದಿದ್ದ ಆಪ್‌ಗೆ ತಿರುಗೇಟು

ನವದೆಹಲಿ: ಗೌತಮ್​ ಗಂಭೀರ್​ ಅವರು ರಾಜೇಂದ್ರ ನಗರ ಮತ್ತು ಕರೋಲ್​ ಬಾಗ್​ ಎರಡೂ ಕಡೆ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ ಎಂದಿದ್ದ ಪೂರ್ವ ದೆಹಲಿಯ ಆಪ್​ ಅಭ್ಯರ್ಥಿ ಅತಿಶಿ ಅವರಿಗೆ ಪೂರ್ವ ದಿಲ್ಲಿಯ ಬಿಜೆಪಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ತಿರುಗೇಟು ನೀಡಿದ್ದಾರೆ.

ಗಂಭೀರ್‌ ಅವರು ಎರಡು ಮತದಾನದ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಆರೋಪಿಸಿದ್ದ ಅತಿಶಿ, ತೀಸ್​ ಹಜಾರಿ ಕೋರ್ಟ್​ನಲ್ಲಿ ದೂರು ದಾಖಲಿಸಿದ್ದರು. ಜತೆಗೆ ತಕ್ಷಣವೇ ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿದ್ದರು. ಈ ಅಪರಾಧಕ್ಕೆ ಒಂದು ವರ್ಷ ಜೈಲು ಶಿಕ್ಷೆಯೂ ಇದೆ ಎಂದು ಅತಿಷಿ ಹೇಳಿದ್ದರು. ಈ ಅರ್ಜಿಯ ವಿಚಾರಣೆಯನ್ನು ಮೇ 1ರಂದು ಕೈಗೆತ್ತಿಕೊಳ್ಳುವುದಾಗಿ ದಿಲ್ಲಿ ಕೋರ್ಟ್‌ ತಿಳಿಸಿದೆ.

ಈ ಕುರಿತಂತೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಗಂಭೀರ್, ಇದನ್ನು ಋಣಾತ್ಮಕ ರಾಜಕೀಯ ಎನ್ನಲಾಗುತ್ತದೆ. ಯಾವಾಗ ನಿಮಗೆ ಸ್ಪಷ್ಟವಾದ ಗುರಿ ಇರುವುದಿಲ್ಲವೋ ಮತ್ತು ಕಳೆದ 4.5 ವರ್ಷಗಳಲ್ಲಿ ನೀವು ಏನನ್ನು ಮಾಡಿಲ್ಲವೋ ಅದಕ್ಕಾಗಿಯೇ ಈ ಆರೋಪಗಳನ್ನು ಮಾಡುತ್ತಿದ್ದೀರಿ. ಚುನಾವಣೆ ಆಯೋಗವೇ ಈ ಕುರಿತು ನಿರ್ಧರಿಸಲಿದೆ. ಯಾವಾಗ ನಿಮಗೆ ಸ್ಪಷ್ಟ ಗುರಿಯಿರುತ್ತದೆಯೋ ಆಗ ಈ ರೀತಿಯ ಋಣಾತ್ಮಕ ರಾಜಕೀಯವನ್ನು ಮಾಡಲಾರಿರಿ ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಆಪ್‌ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕೂಡ 3 ವೋಟರ್‌ ಐಡಿಗಳನ್ನು ಹೊಂದಿದ್ದಾರೆ ಎಂದು 2013ರಲ್ಲಿ ಆರೋಪಿಸಿತ್ತು. ಅಲ್ಲದೆ ಕೇಜ್ರಿವಾಲ್‌ ಪತ್ನಿಯು ದೆಹಲಿ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಬಿಜೆಪಿ ವಕ್ತಾರ ಆರೋಪಿಸಿದ್ದರು.

ನವದೆಹಲಿಯಲ್ಲಿ ಮೇ 12 ರಂದು ಲೋಕಸಭಾ ಚುನಾವಣೆ ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ. (ಏಜೆನ್ಸೀಸ್)