ಹನೂರು: ಸಮೀಪದ ಆರ್.ಎಸ್.ದೊಡ್ಡಿ ಬಳಿ ಶನಿವಾರ ಗಾಂಜಾ ಸಾಗಿಸುತ್ತಿದ್ದ ವೃದ್ಧನನ್ನು ಹನೂರು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಶಾಗ್ಯ ಗ್ರಾಮದ ರಾಚನಾಯಕ ಅಲಿಯಾಸ್ ಸಿಂಗಿರಾಚಯ್ಯ (75) ಬಂಧಿತ ಆರೋಪಿ.
ಈತ ಬೆಳಗ್ಗೆ 10ರ ವೇಳೆಯಲ್ಲಿ ಆರ್.ಎಸ್ ದೊಡ್ಡಿ ಬಳಿಯ ಎಡಳ್ಳಿ ದೊಡ್ಡಿಗೆ ತೆರಳುವ ರಸ್ತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಗಾಂಜಾವನ್ನು ಸಾಗಣೆ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ಸಿ. ಮಂಜುನಾಥ್ ಪ್ರಸಾದ್ ಅವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳೊಂದಿಗೆ ತೆರಳಿ ದಾಳಿ ನಡೆಸಿದರು. ಪರಿಶೀಲಿಸಿದಾಗ ಪ್ಲಾಸ್ಟಿಕ್ ಕವರ್‌ನಲ್ಲಿ ಗಾಂಜಾ ಇರುವುದು ದೃಢಪಟ್ಟಿತು. ಬಳಿಕ 750 ಗ್ರಾಂ ಬೀಜ ಮಿಶ್ರಿತ ಹದಗೊಳಿಸಿದ ಒಣ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದರು. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.