ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ನಿರ್ದೇಶಕ ತರುಣ್ ಸುಧೀರ್ ಇದೀಗ ನಿರ್ಮಾಣದತ್ತ ಗಮನ ಹರಿಸಿದ್ದು, ಕಳೆದ ಡಿಸೆಂಬರ್ನಲ್ಲಿ ಹೊಸ ಸಿನಿಮಾ ಘೋಷಿಸಿದ್ದರು. 2022ರಲ್ಲಿ ಜಡೇಶ್ ಹಂಪಿ ನಿರ್ದೇಶಿಸಿದ್ದ “ಗುರು ಶಿಷ್ಯರು’ ನಿರ್ಮಿಸಿದ್ದ ತರುಣ್, ಈಗ “ಪ್ರೊಡಕ್ಷನ್ ನಂ. 2′ ಅನೌನ್ಸ್ ಮಾಡಿದ್ದು, ಅವರ ಜತೆ ಅಟ್ಲಾಂಟಾ ನಾಗೇಂದ್ರ ಕೈ ಜೋಡಿಸಿದ್ದಾರೆ. ಪುನೀತ್ ಗುರುಸ್ವಾಮಿ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಲಿದ್ದು, ಕನ್ನಡದ ಜತೆ ತಮಿಳು, ತೆಲುಗು ಭಾಷೆಗಳಲ್ಲೂ ಈ ಸಿನಿಮಾ ಮೂಡಿಬರಲಿದೆ. ಇದು 2000ರಲ್ಲಿ ನಡೆದ ನೈಜ ಘಟನೆಯಾಧಾರಿಸಿದ ಚಿತ್ರವಾಗಿದ್ದು, ಇತ್ತೀಚೆಗಷ್ಟೆ ಟೀಸರ್ ಮೂಲಕ ನಾಯಕನನ್ನು ಪರಿಚಯಿಸಿದ್ದಾರೆ.
2022ರ “ಏಕ್ಲವ್ಯಾ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣ ಈ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ನಾಯಕನ ಆಯ್ಕೆಯ ಬಗ್ಗೆ ನಿರ್ಮಾಪಕ ತರುಣ್ ಸುಧೀರ್, “ಬಾಯ್ ನೆಕ್ಸ್ಟ್ ಡೋರ್ನಂತೆ ಕಾಣುವ, ಎಲ್ಲರಿಗೂ ಕನೆಕ್ಟ್ ಆಗುವ ಲುಕ್ಸ್ ಇರುವ ಹಾಗೇ ಇಮೇಜ್ ಇಲ್ಲದ ನಾಯಕನಿಗಾಗಿ ಹುಡುಕುತ್ತಿದ್ದೆವು. ರಾಣ ನಮ್ಮ ಚಿತ್ರದ ಪಾತ್ರಕ್ಕೆ ಚೆನ್ನಾಗಿ ಹೊಂದುತ್ತಾರೆ ಅಂತನ್ನಿಸಿ, ಅವರನ್ನು ಆಯ್ಕೆ ಮಾಡಿಕೊಂಡೆವು. “ಏಕ್ಲವ್ಯಾ’ ಚಿತ್ರದಲ್ಲಿ ರಾಣ ಮೂರು ಶೇಡ್ಗಳಲ್ಲಿ ನಟಿಸಿದ್ದರು. ಹೊಸಬರಾದರೂ ಚೆನ್ನಾಗಿ ಪಾರ್ಮ್ರ್ ಮಾಡುತ್ತಾರೆ’ ಎಂದು ಮಾಹಿತಿ ನೀಡುತ್ತಾರೆ.
ಸೋಮವಾರದಿಂದ ಚಿತ್ರೀಕರಣ
ಸೋಮವಾರದಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಚಾಮರಾಜನಗರ ಮತ್ತು ತಮಿಳುನಾಡು ಗಡಿ ಪ್ರದೇಶ ಮತ್ತು ಸೇಲಂ ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾ$್ಯನ್ ಮಾಡಿಕೊಂಡಿದೆ. “ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಆದರೆ, ಯುಗಾದಿ ಹಬ್ಬದೊಳಗೆ ಟೈಟಲ್ ಘೋಷಿಸಲು ಚರ್ಚಿಸುತ್ತಿದ್ದೇವೆ. 50ರಿಂದ 55 ದಿನಗಳ ಒಂದೇ ಶೆಡ್ಯೂಲ್ನಲ್ಲಿ ಮಾರ್ಚ್ವರೆಗೂ ಶೂಟಿಂಗ್ ನಡೆಸಲಿದ್ದೇವೆ. ಫೆಬ್ರವರಿಯಲ್ಲಿ ರಾಣ ಮದುವೆಗಾಗಿ 10 ದಿನ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಆ ಸಮಯದಲ್ಲಿ ಬೇರೆ ಪಾತ್ರಗಳ ಚಿತ್ರೀಕರಣ ನಡೆಯಲಿದೆ. ಈ ವರ್ಷವೇ ಸಿನಿಮಾ ರಿಲೀಸ್ ಮಾಡಲಿದ್ದೇವೆ’ ಎನ್ನುತ್ತಾರೆ ತರುಣ್.