ಎಚ್. ಸಿ. ಕೀರ್ತಿ, ಹರಿಹರ : ಹರಿಹರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬರೋಬ್ಬರಿ 30 ವರ್ಷ ಹಳೆಯದು. ಬೆಳೆಯುತ್ತಿರುವ ನಗರಕ್ಕೆ ಇದು ಚಿಕ್ಕ ನಿಲ್ದಾಣವಾಗಿದೆ. ಹೈಟೆಕ್ ಆಗಿ ಪರಿವರ್ತನೆಗೊಳ್ಳುವ ಕನಸಿನ್ನೂ ಚಿಗುರಿಲ್ಲ!

1994ರಲ್ಲಿ ನಗರಸಭೆ ವ್ಯಾಪ್ತಿಯ ಸುಮಾರು 1 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿದ್ದ ಈ ಬಸ್ ನಿಲ್ದಾಣದಲ್ಲಿ ಒಮ್ಮೆಗೆ 20 ಬಸ್ ನಿಲ್ಲಬಹುದಾದ ಸಾಮರ್ಥ್ಯ ಹೊಂದಿದೆ.
ಇಲ್ಲಿಂದ ಅಂದಾಜು 350 ರಿಂದ 400 ಕಿಮೀ ದೂರ ಕ್ರಮಿಸಿದರೆ ರಾಜ್ಯದ ಗಡಿ ಸಿಗಲಿದೆ. ರಾಜ್ಯದ ನಾಲ್ಕೂ ದಿಕ್ಕಿಗೂ ಸಂಪರ್ಕ ಕಲ್ಪಿಸುವ ಈ ನಿಲ್ದಾಣದಲ್ಲಿ ನಿತ್ಯ 1450ಕ್ಕೂ ಹೆಚ್ಚು ಬಸ್‌ಗಳು ಸಂಚರಿಸಲಿದ್ದು, 40 ಸಾವಿರ ಮಂದಿ ಪ್ರಯಾಣ ಮಾಡುತ್ತಿರುವ ಅಂದಾಜಿದೆ.
ಈ ಹಿಂದೆ ನಿಲ್ದಾಣಕ್ಕೆ ಭೇಟಿ ನೀಡಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಎಂಡಿ, ಹಿರಿಯ ಅಧಿಕಾರಿಗಳು ಹೈಟೆಕ್ ನಿಲ್ದಾಣ ನಿರ್ಮಿಸುವುದಾಗಿ ಹೇಳಿದ್ದು ಭರವಸೆಯಲ್ಲೇ ಉಳಿದಿದೆ. ನಗರಸಭೆ ವ್ಯಾಪ್ತಿಯಲ್ಲಿಯೇ ಈ ನಿಲ್ದಾಣ ಉಳಿದಿದ್ದಕ್ಕೆ ಹೈಟೆಕ್ ಪರ್ವಕ್ಕೆ ಹಿನ್ನಡೆಯಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಈಗಿರುವ ನಿಲ್ದಾಣ ಚಿಕ್ಕದಾಗಿದ್ದು, ವಿಸ್ತೀರ್ಣ ಹಿಗ್ಗಿಸುವ ಅಗತ್ಯವಿದೆ. ನಗರದ ಹೊರವಲಯದ ವಿಶಾಲ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮಾಡಬೇಕೆಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಇದೆ. ಆದರೆ ಈ ವಿಚಾರವಾಗಿ ಯಾವುದೇ ಪ್ರಸ್ತಾವನೆ, ಹೋರಾಟ ಯಾವುದೂ ನಡೆದಿಲ್ಲ.
ಬೇಕಿದೆ ಪೊಲೀಸ್ ಚೌಕಿ: ನಿಲ್ದಾಣದಲ್ಲಿ ಪ್ರಯಾಣಿಕರ ಮೊಬೈಲ್, ಬಂಗಾರದ ಆಭರಣ, ಬ್ಯಾಗ್ ಸೇರಿ ಇತರ ವಸ್ತುಗಳು ಕಳವಾಗುತ್ತಿದೆ. ಹಾಗಾಗಿ ನಿಲ್ದಾಣದಲ್ಲಿ ಒಬ್ಬ ಶಾಶ್ವತ ಪೊಲೀಸ್ ಚೌಕಿ ನೇಮಿಸುವುದು ಸೂಕ್ತ ಎಂಬುದು ಕೆಲವರ ಅಭಿಪ್ರಾಯ.
ಸ್ವಚ್ಛತೆ ಮಾಯ :ನಿಲ್ದಾಣದಲ್ಲಿ ಸ್ವಚ್ಛತೆ ಅಷ್ಟಕಷ್ಟೆ ಎಂಬಂತಿದೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಪೇಪರ್ ಹಾಗೂ ಧೂಳು ತುಂಬಿದೆ. ಅಲ್ಲಲ್ಲಿ ಸಾರ್ವಜನಿಕರು ಉಗುಳಿದ ಗುಟುಕಾ ಕಲೆಗಳಿವೆ. ಆದ್ದರಿಂದ ನಿರಂತರ ಸ್ವಚ್ಛತೆ ಅವಶ್ಯವಿದೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಶೌಚಗೃಹ ಬಳಸುವ ಪರಿಸ್ಥಿತಿ ಇದೆ. ನಿಲ್ದಾಣದಲ್ಲಿ ಮಹಿಳೆಯರಿಗೆ ಒಂದು ವಿಶ್ರಾಂತಿ ಕೊಠಡಿ ಇದೆ. ಹಿರಿಯ ನಾಗರಿಕರಿಗೆ ವಿಶ್ರಾಂತಿ ಕೊಠಡಿ ಇಲ್ಲ. ಮಹಿಳೆಯರಿಗೆ ಕುಳಿತುಕೊಳ್ಳಲು ಪ್ರತ್ಯೇಕ ಆಸನದ ವ್ಯವಸ್ಥೆಗಳಿಲ್ಲ. ರಾತ್ರಿ ವೇಳೆ ಕುಡುಕರಿಂದಾಗಿ ಮಹಿಳೆಯರಿಗೆ ಅಸುರಕ್ಷತೆ ಕಾಡುತ್ತಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ಸೋರುವುದು ಮಾಮೂಲು. ಶುದ್ಧ ನೀರಿನ ಘಟಕ ಈ ಹಿಂದೆ ಸಾರ್ವಜನಿಕರಿಗೆ ಉಚಿತವಾಗಿ ನೀರು ನೀಡುತ್ತಿತ್ತು. ಆದರೀಗ ಒಂದು ಬಾಟಲಿಗೆ 2 ರೂ. ನಾಣ್ಯ ಹಾಕಿ ಪಡೆಯಬೇಕಿದೆ. ನಿಲ್ದಾಣ ಹಿಂಭಾಗದಲ್ಲಿನ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಛಾವಣಿಯೇ ಇಲ್ಲ. ಬಸ್ಸಿಗೆ ಕಾಯುವ ಪ್ರಯಾಣಿಕರಿಗೆ ಸಮಯ ಕಳೆಯಲು ಗ್ರಂಥಾಲಯ ವ್ಯವಸ್ಥೆಯಿಲ್ಲ.
ರಾತ್ರಿ ವೇಳೆ ಪರದಾಟ : ರಾತ್ರಿ 10 ಗಂಟೆ ಆಯಿತೆಂದರೆ ನಿಲ್ದಾಣದಲ್ಲಿ ಕೇಳೋರಿಲ್ಲ. ದೂರದ ಊರಿನಿಂದ ಬಂದವರು ಹರಿಹರಕ್ಕೆ ಇಳಿದು ದಾವಣಗೆರೆಗೆ ತಲುಪಬೇಕೆಂದರೆ ಒಂದು ತಾಸುಗಟ್ಟಲೇ ಕಾಯುವ ಸ್ಥಿತಿ ಇದೆ. ನಗರ ಸಾರಿಗೆ ಬಸ್‌ಗಳು ಪಕ್ಕದಲ್ಲೇ ರೆಸ್ಟ್ ಮಾಡುತ್ತಿದ್ದರೂ ಅಧಿಕಾರಿಗಳು ಪ್ರಯಾಣಿಕರಿಗೆ ಸ್ಪಂದಿಸಿ ಸಕಾಲಕ್ಕೆ ವಾಹನ ವ್ಯವಸ್ಥೆ ಮಾಡದಿರುವುದರಿಂದ ನಿತ್ಯ ಶಾಪ ಹಾಕುವವರು ಕಡಿಮೆಯಾಗಿಲ್ಲ.
ರಾತ್ರಿ ವೇಳೆ ಮಹಿಳಾ ಶೌಚಗೃಹವನ್ನು ಸ್ತ್ರೀಯರೇ ನಿರ್ವಹಿಸಬೇಕೆಂಬ ನಿಯಮವಿದ್ದರೂ ಹರಿಹರ ನಿಲ್ದಾಣದಲ್ಲಿ ಪಾಲನೆಯಾಗುತ್ತಿಲ್ಲ. ಸಂಬಂಧಪಟ್ಟವರು ಗಮನಿಸಬೇಕು. ಅಲ್ಲದೆ ಮಹಿಳೆಯರ ಸುರಕ್ಷತೆ ಬಗ್ಗೆಯೂ ಗಮನ ಹರಿಸಬೇಕಿದೆ.
ಶೈಲಜಾ, ಪ್ರಯಾಣಿಕರು.
ರಾತ್ರಿ ವೇಳೆ ಹರಿಹರ ನಿಲ್ದಾಣದಲ್ಲಿ ಬರುವ ದುರ್ವಾಸನೆ ಯಿಂದ ನಿಲ್ಲಲು ಕಷ್ಟಕರವಾಗಲಿದೆ. ಎಲ್ಲೆಂದರಲ್ಲಿ ಮಲಗುವ ಕಾರಣಕ್ಕೆ ಬಸ್ಸಿಗಾಗಿ ಕಾಯುವ ಇತರೆ ಪ್ರಯಾಣಿಕರಿಗೂ ತೊಂದರೆ ಆಗಲಿದೆ.
ಎಚ್.ಎಂ. ಶಿವಕುಮಾರ್, ಪ್ರಯಾಣಿಕ
ನಿಲ್ದಾಣದ ಸ್ವಚ್ಛತೆಗೆ ವಿಶೇಷ ಗಮನ ನೀಡಲಾಗುತ್ತಿದೆ. ಪ್ರಯಾಣಿಕರ ಸುರಕ್ಷತಾ ದೃಷ್ಟಿಯಲ್ಲಿ ಶಾಶ್ವತ ಪೊಲೀಸ್ ಚೌಕಿ ನೇಮಿಸಬೇಕು. ಶಕ್ತಿ ಯೋಜನೆ ಪರಿಣಾಮ ಶೇ. 30 ರಷ್ಟು ಪ್ರಯಾಣಿರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಆಗಬೇಕಿದೆ.
ಹನುಮಂತಪ್ಪ ಜ್ಯೋತಿ,
ಸಹಾಯಕ ಸಂಚಾರಿ ಅಧೀಕ್ಷಕರು, ಹರಿಹರ ಬಸ್ ನಿಲ್ದಾಣ