ಮದ್ದೂರು: ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಮುರಾರ್ಜಿ ವಸತಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಸುಮಾರು 16 ಸಾವಿರ ವಿದ್ಯಾರ್ಥಿಗಳಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್‌ನಿಂದ ಉಚಿತವಾಗಿ ಶಾಲಾ ಬ್ಯಾಗ್, ನೋಟ್ ಬುಕ್, ಜಾಮಿಟ್ರಿ ಬಾಕ್ಸ್ ಸೇರಿದಂತೆ ಪಠ್ಯ ಪರಿಕರಗಳನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಕೆ.ಹೊನ್ನಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಸ್ಕೂಲ್ ಬ್ಯಾಗ್ ಹಾಗೂಪಠ್ಯ ಪರಿಕರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶುಲ್ಕವನ್ನು ಟ್ರಸ್ಟ್ ವತಿಯಿಂದ ಭರಿಸಲಾಗುತ್ತಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ನೋಟ್ ಬುಕ್ ಮತ್ತು ಪಠ್ಯ ಪರಿಕರಗಳನ್ನು ನೀಡಲಾಗುತ್ತಿದೆ. ಜತೆಗೆ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಶಾಲಾ ಕೊಠಡಿಗಳನ್ನು ದುರಸ್ತಿ ಮಾಡುವುದು ಸೇರಿದಂತೆ ಹಲವಾರು ರೀತಿಯ ಮೂಲ ಸೌಕರ್ಯಗಳನ್ನು ಟ್ರಸ್ಟ್ ವತಿಯಿಂದ ಕಲ್ಪಿಸಲಾಗುತ್ತಿದೆ. ಟ್ರಸ್ಟ್ ವತಿಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ನಾನು ಶಾಸಕನಾದ ನಂತರ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಅನುದಾನ ತಂದು ನೂತನ ಕೊಠಡಿಗಳು, ಕಾಂಪೌಂಡ್, ಶೌಚಗೃಹಗಳ ನಿರ್ಮಾಣ ಮಾಡಲಾಗಿದೆ. ಶಿಕ್ಷಕರ ಕೊರತೆಯಾಗದಂತೆ ಕ್ರಮಕೈಗೊಂಡು ವಿದ್ಯಾರ್ಥಿಗಳಿಗೆ ಸರ್ವ ರೀತಿಯಲ್ಲಿ ಸೌಕರ್ಯ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಸಮಾಜ ಸೇವಕಿ ವಿನುತಾಉದಯ್ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರ ಹಾಗೂ ಸಂಘ, ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಸಮಾಜ ಸೇವಕಿ ವಿನುತಾಉದಯ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ರವೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು, ಬಿಇಒ ಧನಂಜಯ, ಎಸ್‌ಡಿಎಂಸಿ ಅಧ್ಯಕ್ಷ ಎಚ್.ಪಿ.ಸ್ವಾಮಿ, ಮುಖ್ಯ ಶಿಕ್ಷಕರಾದ ಬಿ.ವಿ.ಹಳ್ಳಿ ನಾರಾಯಣ್, ವೆಂಕಟೇಶ್, ಗ್ರಾಮೀಣಾ ವಿವಿದೋದ್ಧೇಶ ಕೃಷಿ ಸಹಕಾರ ಸಂಘದ ನಿರ್ದೇಶಕ ಆರ್.ಸಿ.ಎಸ್.ಮಹೇಶ್, ಮುಖಂಡರಾದ ಪುಟ್ಟಸ್ವಾಮಿ, ನಾಗೇಶ್ ಇದ್ದರು.