ನವದೆಹಲಿ: ಮಹಾರಾಷ್ಟ್ರದ ಕಹಿಘಟನೆಯಿಂದ ಎಚ್ಚರಗೊಂಡ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎನ್ಡಿಎ ಕೂಟ ತೊರೆಯದಂದತೆ ಮಿತ್ರಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಎನ್ಡಿಎ ಕೂಟದಲ್ಲಿ ಸಣ್ಣ ಸಣ್ಣ ವ್ಯತ್ಯಾಸಗಳಿದ್ದು ಅವುಗಳನ್ನು ಬಗೆಹರಿಸಲಾಗುವುದು. ಕೂಟವನ್ನು ತೊರೆಯಬೇಡಿ ಎಂದು ಭಾನುವಾರ ನಡೆದ ಎನ್ಡಿಎ ಸಮಾವೇಶದಲ್ಲಿ ಮಿತ್ರಪಕ್ಷಗಳಿಗೆ ತಿಳಿಸಿದ್ದಾರೆ.
ಮತದಾರರು ಭಾರಿ ಬಹುಮತದಿಂದ ನಮಗೆ ಅಧಿಕಾರ ನೀಡಿದ್ದು, ಅದನ್ನು ಗೌರವಿಸಬೇಕು. ಜನರ ಅಭಿವೃದ್ಧಿಗೋಸ್ಕರ ಒಟ್ಟಾಗಿ ಕಾರ್ಯನಿರ್ವಹಿಸೋಣ. ಒಂದೇ ರೀತಿಯ ಸಿದ್ಧಾಂತ ಹೊಂದಿರದಿದ್ದರೂ ನಾವೆಲ್ಲಾ ಸಮಾನ ಮನಸ್ಸಿನ ಪಕ್ಷಗಳು. ಸಣ್ಣ ವ್ಯತ್ಯಾಸಗಳು ನಮ್ಮನ್ನು ದೂರ ಮಾಡಬಾರದು. ಸಂವಹನ ಹಾಗೂ ಸಮಸ್ಯೆಗಳು ಬಗೆಹರಿಸಲು ಸಮನ್ವಯ ಸಮಿತಿ ರಚಿಸಲಾಗುವುದು ಎಂದು ಹೇಳಿದರು.
ಇತ್ತೀಚೆಗೆ ಎನ್ಡಿಎ ಮೈತ್ರಿಯನ್ನು ಒಂದೊಂದೇ ಪಕ್ಷಗಳು ತೊರೆಯುತ್ತಿವೆ. ಮೊದಲಿಗೆ ತೆಲುಗು ದೇಶಂ ಪಕ್ಷ ಎನ್ಡಿಎ ಕೂಟ ತೊರೆದಿತ್ತು. ರಾಷ್ಟ್ರೀಯ ಲೋಕಸಮತಾ ಪಕ್ಷ ತನ್ನದೇ ದಾರಿ ಹಿಡಿದಿತ್ತು. ಎನ್ಡಿಎ ಕೂಟದ ಅತ್ಯಂತ ಹಳೆಯ ಪಕ್ಷವಾದ ಶಿವಸೇನೆ ಕೆಲವೇ ದಿನಗಳ ಹಿಂದೆ ಎನ್ಡಿಎ ಮೈತ್ರಿಯಿಂದ ಹೊರಬಂದಿದೆ.
ಚಳಿಗಾಲದ ಅಧಿವೇಶನ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸಮಾವೇಶದಲ್ಲಿ ಎನ್ಡಿಎ ಮೈತ್ರಿಕೂಟದ 27 ಪಕ್ಷಗಳು ಭಾಗವಹಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ಡಿಎ ಮಿತ್ರ ಪಕ್ಷಗಳ ಮುಖ್ಯ ನಾಯಕರು ಭಾಗವಹಿಸಿದ್ದರು. (ಏಜೆನ್ಸಿಸ್)